ಕುಷ್ಟಗಿ: ಪಿಎಸ್‌ಐ ಮರು ಪರೀಕ್ಷೆ ಬಿಜೆಪಿ ಸರ್ಕಾರದ ತರಾತುರಿ ನಿರ್ಧಾರ ಅಲ್ಲವೇ ಅಲ್ಲ, ಯೋಗ್ಯ ನಿರ್ಧಾರವೇ ಆಗಿದೆ. ಕೆಪಿಸಿಸಿ ರಾಜ್ಯಾಧ್ಯಕ್ಷ ಡಿ.ಕೆ. ಶಿವಕುಮಾರ ಅವರದ್ದು ಈ ಕುರಿತಾದ ವಿರೋಧ ವೈಯಕ್ತಿಕ ವಿಚಾರ ಆಗಿರಬಹುದು. ನನ್ನದಾದರೂ ವೈಯಕ್ತಿಕ ವಿಚಾರವಾಗಿರಬಹುದು ಆದರೆ ಈ ವಿಷಯದಲ್ಲಿ ಬಿಜೆಪಿ ಸರ್ಕಾರದ ನಿರ್ಧಾರವನ್ನು ವಿರೋಧಿಸಲಾರೆ ಎಂದು ಕಾಂಗ್ರೆಸ್ ಕುಷ್ಟಗಿ ಶಾಸಕ ಅಮರೇಗೌಡ ಪಾಟೀಲ ಬಯ್ಯಾಪುರ ಹೇಳಿದರು.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರದ ನಿರ್ಧಾರ ಒಳ್ಳೆಯ ನಿರ್ಧಾರವಾಗಿದೆ. ಯಾಕೆಂದರೆ ಮತ್ತೂಂದು ನೋಟೀಫಿಕೇಷನ್ ಮಾಡಿದರೆ ತಿಂಗಳಾನುಗಟ್ಟಲೇ ಕಾಲ ಹಿಡಿಯಲಿದೆ. ಹಿಂದೆ ಇನ್ನೂ 402 ಹುದ್ದೆ ಅರ್ಜಿ ಕರೆಯಲಾಗುತ್ತಿದೆ. ಆದರ ಜೊತೆಯಲ್ಲಿ ಕೂಡಿ ಸದರಿ ಪರೀಕ್ಷೆ ನಡೆಸುವುದು ತೊಂದರೆಯಾಗಲಿದೆ ಎಂದರು.
ಪಿಎಸೈ ನೇಮಕಾತಿ ಅಕ್ರಮದ ಹಿನ್ನೆಲೆಯಲ್ಲಿ ಬಿಜೆಪಿ ಸರ್ಕಾರ ಮರು ಪರೀಕ್ಷೆಯ ಬಗ್ಗೆ ಯೋಗ್ಯ ನಿರ್ಣಯ ಕೈಗೊಂಡಿದೆ ಈ ಪ್ರಕರಣದಲ್ಲಿ ಭಾಗಿಯಾದ ಯಾರೇ ಆಗಿರಲಿ ಶಿಕ್ಷೆಯಾಗಲಿ. ಈ ಹಿಂದೆ ಕೊಪ್ಪಳದಲ್ಲಿ ಹೇಳಿದ್ದೆ ಈಗಲೂ ಆ ಹೇಳಿಕೆಗೆ ಬದ್ಧನಾಗಿದ್ದೇನೆ. ಪಿಎಸ್‌ಐ ನೇಮಕಾತಿ ಅಕ್ರಮದ ಆರೋಪಿಗಳಿಗೆ ಶಿಕ್ಷೆಯಾಗಬೇಕು. ಪುನರ್ ಪರೀಕ್ಷೆಯಾಗಬೇಕೆಂಬುದು ಬೇಡಿಕೆಯಾಗಿತ್ತು. ಈ ವಿಷಯದಲ್ಲಿ ಸರ್ಕಾರದವರು ಯೋಗ್ಯ ನಿರ್ಣಯ ಕೈಗೊಂಡಿದೆ. ಈ ಪರೀಕ್ಷೆಗೆ ಹೊಸದಾಗಿ ಅರ್ಜಿ ಹಾಕಲು ಅವಕಾಶವಿಲ್ಲ. ಯಾರು ಹಗರಣದಲ್ಲಿ ಭಾಗಿಯಾಗಿದ್ದಾರೋ ಅವರಿಗೆ ಈ ಪರೀಕ್ಷೆಯಲ್ಲಿ ಅವಕಾಶವಿಲ್ಲ. ಯಾರೂ ಪರೀಕ್ಷೆ ಬರೆದು ಅನುತ್ತೀರ್ಣಗೊಂಡವರಿಗೆ ಈ ಪರೀಕ್ಷೆಗೆ ಅವಕಾವಿದೆ ಎಂದರು.
ಪಿಎಸ್‌ಐ ಅಕ್ರಮ ನೇಮಕಾತಿ ಕಲ್ಯಾಣ ಕರ್ನಾಟಕದಲ್ಲಿ ಬೆಳಕಿಗೆ ಬಂದಿದ್ದು, ಬೆಂಗಳೂರಲ್ಲಿ ನಡೆದಿದೆ ಎಂದರೆ ಈ ಅಕ್ರಮ ರಾಜ್ಯವನ್ನು ಆಕ್ರಮಿಸಿದ ಜಾಲವಾಗಿದೆ. ಸದರಿ ಪ್ರಕರಣದ ಆರೋಪಿಗಳಿಗೆ ತಕ್ಕ ಶಿಕ್ಷೆಯಾಗಿದೆ. ಇನ್ಮುಂದೆ ಎಲ್ಲಾ ನೇಮಕಾತಿಗಳು ಪಾರದರ್ಶಕವಾಗಿ ನಡೆದು ಬಡವರಿಗೆ, ಪ್ರತಿಭಾವಂತ ಅರ್ಹರಿಗೆ ಹುದ್ದೆ ಲಭಿಸಲಿ ಎಂದು ಆಶಯ ವ್ಯಕ್ತಪಡಿಸಿದರು.
ಈ ಪ್ರಕರಣದಲ್ಲಿ ಸಚಿವ ಅಶ್ವಥ್ ನಾರಾಯಣ ಅವರ ಸಹೋದರ ಭಾಗಿಯಾಗಿದ್ದರ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಯಾರೇ ತಪ್ಪು ಮಾಡಲಿ ಅದು ತಪ್ಪೆ. ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದಂತೆ ಈ ಪ್ರಕರಣದಲ್ಲಿ ಆರೋಪಿಗಳು ಬಿಜೆಪಿಯವರಾದರೂ, ಕಾಂಗ್ರೆಸ್‌ನವರಾದರೂ ಸರಿ ಶಿಕ್ಷೆಯಾಗಬೇಕು ಎಂದಿದ್ದಾರೆ. ಒಟ್ಟಾರೆಯಾಗಿ ಸರ್ಕಾರ ಈ ಪ್ರಕರಣದಲ್ಲಿ ತಪ್ಪು ಮಾಡಿದವರನ್ನು ಶಿಕ್ಷೆಗೆ ಗುರಿಪಡಿಸಬೇಕಿದೆ ಎಂದರು.