Advertisement

ಅರಣ್ಯ ಹಕ್ಕು ತಿರಸ್ಕೃತರ ಮರು ವಿಚಾರಣೆ

11:11 AM May 26, 2019 | Team Udayavani |

ಗದಗ: ತಲೆತಲಾಂತರಗಳಿಂದ ಅರಣ್ಯ ಭೂಮಿಯಲ್ಲಿ ಸಾಗುವಳಿ ಮಾಡಿಕೊಂಡು, ದಶಕಗಳ ಕಾಲ ಸಾಗುವಳಿ ಹಕ್ಕು ಪತ್ರಗಳಿಗಾಗಿ ಹೋರಾಡಿದ ರೈತಾಪಿ ಜನರಿಗೊಂದು ಸಿಹಿ ಸುದ್ದಿ. ಈಗಾಗಲೇ ಅರಣ್ಯ ಹಕ್ಕು ಪತ್ರಕ್ಕಾಗಿ ಸಲ್ಲಿಸಲಾಗಿದ್ದ ಅರ್ಜಿ ತಿರಸ್ಕೃತಗೊಂಡಿದ್ದವರಿಗೆ ಮರು ವಿಚಾರಣೆಗಾಗಿ ಕರೆಯಲಾಗಿದೆ. ಆದರೆ, ದಾಖಲೆಗಳನ್ನು ಕ್ರೊಢೀಕರಿಸುವುದೇ ಅನ್ನದಾತನಿಗೆ ಸವಾಲಿನ ಕೆಲಸವಾಗಿದೆ.

Advertisement

ಹೌದು, ದಶಕಗಳಿಂದ ಅರಣ್ಯ ಪ್ರದೇಶದಲ್ಲಿ ಅಜ್ಜ, ಮುತ್ತಜ್ಜಗಳಿಂದ ಸಾಗುವಳಿ ಮಾಡಿಕೊಂಡು ಅನೇಕ ಕುಟುಂಬಗಳು ಉಪಜೀವನ ಸಾಗಿಸುತ್ತಿವೆ. ಅಂಥವರಿಗೆ ಸಾಗುವಳಿ ಹಕ್ಕು ಪತ್ರ ವಿತರಿಸಬೇಕು ಎಂದು ಅನೇಕರು ದಶಕಗಳ ಕಾಲ ಹೋರಾಟ ನಡೆಸಿದ್ದಾರೆ. ಅವರಲ್ಲಿ ಕೆಲವರಿಗೆ ಹಕ್ಕು ಪತ್ರ ಕೈಸೇರಿದ್ದು, ಇನ್ನೂ ಅನೇಕರಿಗೆ ದಾಖಲಾತಿಗಳಿಲ್ಲದೇ ಅರ್ಜಿ ತಿರಸ್ಕೃತಗೊಂಡಿದ್ದರಿಂದ ಹಕ್ಕುಪತ್ರಗಳಿಂದ ವಂಚಿತರಾಗಿದ್ದಾರೆ. ಅಂಥ ಅರ್ಜಿಗಳ ಮರು ಪರಿಶೀಲನೆಗೆ ಕೈಗೆತ್ತಿಕೊಂಡಿದ್ದರಿಂದ ಅರಣ್ಯ ಭೂಮಿ ಸಾಗುವಳಿದಾರರಲ್ಲಿ ಹೊಸ ಭರವಸೆ ಮೂಡಿಸಿದೆ.

ಮರು ಪರಿಶೀಲನೆ ಏಕೆ?: ಅನುಸೂಚಿತ ಬುಡಕಟ್ಟು ಮತ್ತು ಇತರೆ ಪಾರಂಪರಿಕ ಅರಣ್ಯವಾಸಿಗಳ (ಅರಣ್ಯ ಹಕ್ಕುಗಳನ್ನು ಮಾನ್ಯ ಮಾಡುವ) ಅಧಿನಿಯಮ 2006 ಮತ್ತು 2007 ಅನ್ವಯ ತಿರಸ್ಕೃತಗೊಂಡಿರುವ ಅರ್ಜಿಗಳನ್ನು ಸುಪ್ರಿಂಕೋರ್ಟ್‌ ಮಧ್ಯಂತರ ತಡೆಯಾಜ್ಞೆಯಲ್ಲಿ ನೈಸರ್ಗಿಕ ನ್ಯಾಯ ಪಾಲನೆಯಯನ್ನು ಮಾಡುವಂತೆ ನಿರ್ದೇಶಿಸಿದೆ. ಅದರನ್ವಯ ಈಗಾಗಲೇ ರೈತರಿಗೆ ವಿಚಾರಣೆ ನೋಟಿಸ್‌ ಜಾರಿ ಮಾಡಲಾಗಿದೆ. ರೈತರಿಗೆ ವಿಚಾರಣೆ ದಿನಾಂಕ ಗೊತ್ತು ಪಡಿಸಿ, ಅವರ ತಿರಸ್ಕೃತ ಅರ್ಜಿಗಳನ್ನು ಪುನರ್‌ ಪರಿಶೀಲನೆ ನಡೆಸಲಾಗುತ್ತಿದೆ ಎಂದು ರೈತರಿಗೆ ನೀಡಲಾದ ನೋಟಿಸ್‌ನಲ್ಲಿ ಉಲ್ಲೇಖೀಸಿದೆ. ಈ ಕುರಿತು ತಿರಸ್ಕೃತ ಅರ್ಜಿದಾರರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ 15 ದಿನಗಳ ಹಿಂದೆಯೇ ನೋಟಿಸ್‌ ನೀಡಲಾಗಿದ್ದು, ಮೇ 24 ರಿಂದ ಜೂ. 1ರ ವರೆಗೆ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅಧ್ಯಕ್ಷತೆಯಲ್ಲಿ ಮರು ವಿಚಾರಣೆ ನಡೆಯಲಿದ್ದು, ಜಿಲ್ಲೆಯಲ್ಲಿ ತಿರಸ್ಕೃತಗೊಂಡಿರುವ 585 ಅರ್ಜಿದಾರರಿಗೆ ಅಗತ್ಯ ದಾಖಲೆಗಳೊಂದಿಗೆ ಹಾಜರಾಗುವಂತೆ ಸೂಚಿಸಿಲಾಗಿದೆ.

ಒಬ್ಬರಿಗೂ ಮಂಜೂರಾಗಿಲ್ಲ!: ಮೇ 24ರಿಂದ ನಡೆಯುತ್ತಿರುವ ಮರು ವಿಚಾರಣೆಯಲ್ಲಿ ಸುಮಾರು 300ಕ್ಕೂ ಹೆಚ್ಚು ಸಾಗುವಳಿದಾರರು ಹಾಜರಾಗಿದ್ದಾರೆ. ಆದರೆ, ನಿಯಮಾವಳಿಯಂತೆ ರೈತರು ಸಾಗುವಳಿ ಮಾಡುತ್ತಿರುವ ಬಗ್ಗೆ ಒಂದಕ್ಕಿಂತ ಹೆಚ್ಚು ದಾಖಲೆಗಳನ್ನು ಸಲ್ಲಿಸಬೇಕು. ಅರ್ಜಿದಾರರು ಮೂರು ತಲೆಮಾರುಗಳಿಂದ ಅದೇ ಭೂಮಿಯಲ್ಲಿ ಸಾಗುವಳಿ ಮಾಡುತ್ತಿರಬೇಕು. ಈ ಬಗ್ಗೆ ಸಾಗುವಳಿದಾರನ ಪರ 75 ವರ್ಷದ ವ್ಯಕ್ತಿಯೊಬ್ಬರು ಮೌಖೀಕ ಹೇಳಿಕೆಯನ್ನು ಕೊಡಿಸಿದರೂ, ಮೂರು ತಲೆಮಾರಿನಿಂದ ಸಾಗುವಳಿ ಮಾಡುತ್ತಿರುವುದನ್ನು ದೃಢಪಡಿಸಲಾಗದೇ ಪರದಾಡುವಂತಾಗಿದೆ. ಅರಣ್ಯ ಹಕ್ಕು ಸಮಿತಿ ನಿಯಮಾವಳಿಯಂತೆ ಅರಣ್ಯ ಪ್ರದೇಶದಲ್ಲಿ ಅಕ್ರಮ ಸಾಗುವಳಿದಾರರನ ವಿರುದ್ಧ ಅರಣ್ಯ ಇಲಾಖೆ ದಾಖಲಿಸಿರುವ ಪೊಲೀಸ್‌ ಕೇಸ್‌, ಬಂಧಿಸಿರುವ ಬಗ್ಗೆ ದಾಖಲಾತಿ, ಕಂದಾಯ ತೆರಿಗೆ ಪಾವತಿ, ನೀರಾವರಿ ಮತ್ತಿತರೆ ಯೋಜನೆಗಳಡಿ ನಿರಾಶ್ರೀತಗೊಂಡಿರುವ ಬಗ್ಗೆ ದಾಖಲಾತಿ ಸಲ್ಲಿಸಬಹುದಾಗಿದೆ. ಆದರೆ, ಈಗಾಗಲೇ ಅರ್ಜಿ ತಿರಸ್ಕೃತಗೊಂಡಿರುವ ಪೈಕಿ ಕೆಲವರಲ್ಲಿ ಸೂಕ್ತ ದಾಖಲೆಗಳಿಲ್ಲದಿದ್ದರೆ, ಇನ್ನುಳಿದಂತೆ ಬಹುತೇಕರು ಕೃಷಿ ಜಮೀನು, ಸರಕಾರಿ ನೌಕರಿ ಹೊಂದಿದ್ದಾರೆ. ಇಲ್ಲವೇ ಇತ್ತೀಚೆಗೆ ಸಾಗುವಳಿ ಮಾಡುತ್ತಿರುವವರೂ ಇರಬಹುದು ಎಂದು ಹೇಳಲಾಗಿದೆ. ಹೀಗಾಗಿ ಮೂರು ತಲೆಮಾರುಗಳಿಂದ ಉಪಜೀವನಕ್ಕಾಗಿ ಇದೇ ಭೂಮಿಯನ್ನು ಅವಲಂಬಿಸಿದ್ದೇವೆ ಎಂಬುದು ದೃಢಪಡಿಸಲಾಗುತ್ತಿಲ್ಲ ಎಂದು ಹೇಳಲಾಗಿದೆ.

ಹಕ್ಕು ಪತ್ರಕ್ಕಾಗಿ ದಶಕಗಳ ಹೋರಾಟ:

ಅರಣ್ಯ ಭೂಮಿ ಸಾಗುವಳಿ ಹಕ್ಕುಪತ್ರಕ್ಕಾಗಿ ರಾಜ್ಯಾದ್ಯಂತ ದಶಕಗಳಿಂದ ನಡೆದ ಹೋರಾಟದ ಫಲವಾಗಿ ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಹಕ್ಕು ಪತ್ರ ವಿತರಣೆಗೆ ಚಾಲನೆ ನೀಡಿತ್ತು. ಅದರಂತೆ ಅರಣ್ಯ ಭೂಮಿಯಲ್ಲಿ ಕೃಷಿ ಮಾಡಿಕೊಂಡಿದ್ದ ಭೂರಹಿತ ಸಾಗುವಳಿದಾರರಿಗೆ ಅನುಭೋಗದ ಹಕ್ಕುಪತ್ರ ನೀಡುವ 2006ರ ಕಾಯಿದೆ ಜಾರಿಯಾಯಿತು. ಆ ನಂತರ ರಾಜ್ಯದಲ್ಲಿಯೇ ಮೊದಲ ಬಾರಿಗೆ ಗದಗ ತಾಲೂಕಿನ ಮಹಾಲಿಂಗಪುರ ತಾಂಡಾದಲ್ಲಿ 80 ರೈತರಿಗೆ ಹಕ್ಕು ಪತ್ರ ವಿತರಿಸಲಾಯಿತು. ಜಿಲ್ಲೆಯಲ್ಲಿ ಈವರೆಗೆ 1400ಕ್ಕೂ ಹೆಚ್ಚು ಜನರಿಗೆ ಹಕ್ಕುಪತ್ರ ನೀಡಲಾಗಿದೆ.
•ವೀರೇಂದ್ರ ನಾಗಲದಿನ್ನಿ
Advertisement

Udayavani is now on Telegram. Click here to join our channel and stay updated with the latest news.

Next