ಆಲಮಟ್ಟಿ: ಲಾಲ್ ಬಹಾದ್ದೂರ್ ಶಾಸ್ತ್ರಿ ಜಲಾಶಯ ವ್ಯಾಪ್ತಿಯ ಕಾಲುವೆಗಳಿಗೆ ಮೂರ್ನಾಲ್ಕು ದಿನಗಳಲ್ಲಿ ನೀರು ಹರಿಸದಿದ್ದರೆ ನಾಡಿನ ಮಠಾಧಿಧೀಶರೊಂದಿಗೆ ಕೆಬಿಜೆಎನ್ನೆಲ್ ಮುಖ್ಯ ಅಭಿಯಂತರರ ಕಚೇರಿ ಆವರಣದಲ್ಲಿ ಉಪವಾಸ ಸತ್ಯಾಗ್ರಹ ನಡೆಸಲಾಗುವುದು ಎಂದು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅರವಿಂದ ಕುಲಕರ್ಣಿ ಹೇಳಿದರು.
ಶುಕ್ರವಾರ ಇಲ್ಲಿನ ಕೆಬಿಜೆಎನ್ನೆಲ್ ಮುಖ್ಯ ಅಭಿಯಂತರರಿಗೆ ಸಂಘಟನೆಯ ಪದಾಧಿ ಕಾರಿಗಳು ಹಾಗೂ ಮಠಾಧಿಧೀಶರೊಂದಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು, ಈ ಬಾರಿ ಮುಂಗಾರು ಮಳೆ ಬಾರದೇ ಇರುವುದರಿಂದ ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ರೈತರಿಗೆ ತೊಂದರೆಯಾಗಿದೆ. ಮಹಾರಾಷ್ಟ್ರದ ಮಹಾಬಲೇಶ್ವರ, ಸಾಂಗ್ಲಿ ಸೇರಿದಂತೆ ಪಶ್ಚಿಮಘಟ್ಟ ಪ್ರದೇಶದಲ್ಲಿ ಭಾರಿ ಪ್ರಮಾಣದ ಮಳೆ ಸುರಿಯುತ್ತಿದ್ದು ಶಾಸ್ತ್ರಿ ಜಲಾಶಯ ಬಹುತೇಕ ಭರ್ತಿಯಾಗಿದೆ.
ಹೆಚ್ಚಿನ ನೀರನ್ನು ನಾರಾಯಣಪುರದ ಬಸವ ಸಾಗರ ಜಲಾಶಯಕ್ಕೆ ಹರಿಸಲಾಗುತ್ತಿದೆ ಎಂದರು. ನಾರಾಯಣಪುರದ ಬಸವ ಸಾಗರದಿಂದ 45 ಸಾವಿರ ಕ್ಯೂಸೆಕ್ ನೀರನ್ನು ನದಿ ಪಾತ್ರಕ್ಕೆ ಬಿಡುತ್ತಿದ್ದಾರೆ. ನದಿಗೆ ನೀರು ಬಿಡುವ ಬದಲು ಮುಂಗಾರು ಹಂಗಾಮಿನಲ್ಲಿ ಬಿತ್ತನೆ ಮಾಡಿದ ಬೆಳೆಗಳಿಗೆ ನೀರುಣಿಸಲು ಕಾಲುವೆಗೆ ನೀರು ಹರಿಸಬೇಕು. ಈ ಬಾರಿ ಸಮರ್ಪಕವಾಗಿ ಮುಂಗಾರು ಮಳೆಯಾಗುವ ಲಕ್ಷಣ ಕಾಣುತ್ತಿಲ್ಲ. ಬಿತ್ತಿದ ಬೀಜಗಳು ಹಾಳಾಗುವ ಮೊದಲೇ ಕಾಲುವೆಗಳಿಗೆ ನೀರು ಹರಿಸಿ ಜಮೀನುಗಳಿಗೆ ನೀರುಣಿಸಲು ಅನುವು ಮಾಡಿಕೊಡಬೇಕೆಂದು ಒತ್ತಾಯಿಸಿದರು. ಬಸವನಬಾಗೇವಾಡಿ ವಿರಕ್ತಮಠದ ಸಿದ್ದಲಿಂಗ ಸ್ವಾಮೀಜಿ ಹಾಗೂ ಕರಭಂಟನಾಳದ ಶಿವಕುಮಾರ ಸ್ವಾಮೀಜಿ ಮಾತನಾಡಿ, ಅಗತ್ಯವಿದ್ದ ಸಂದರ್ಭದಲ್ಲಿ ರೈತರಿಗೆ ನೀರು ಕೊಡದಿದ್ದರೆ ಜಿಲ್ಲೆಯಲ್ಲಿ ಬೃಹತ್ ಜಲಾಶಯ ಹಾಗೂ ಕಾಲುವೆ ನಿರ್ಮಾಣ ಮಾಡಿದ್ದು ಏತಕ್ಕೆ? ಲಕ್ಷಾಂತರ ಎಕರೆ ಜಮೀನು ಕಳೆದುಕೊಂಡು ತ್ಯಾಗ ಮಾಡಿದ ನಮ್ಮ ಜಿಲ್ಲೆಯ ರೈತರಿಗೆ ನೀರು ಕೊಡಬೇಕು.
ಇಲ್ಲದಿದ್ದರೆ ರೈತರೊಂದಿಗೆ ಹೋರಾಟಕ್ಕೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದರು. ಮನವಿ ಸ್ವೀಕರಿಸಿ ಮಾತನಾಡಿದ ಮುಖ್ಯ ಅಭಿಯಂತರ ಎಚ್.ಸುರೇಶ, ಕೃಷ್ಣಾ ಮೇಲ್ದಂಡೆ ಯೋಜನೆ ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಡಿಸಿಎಂ ಗೋವಿಂದ ಕಾರಜೋಳ ಅವರನ್ನು ಬಾಗಲಕೋಟೆಯಲ್ಲಿ ಭೇಟಿಯಾಗಿ ನೀರಾವರಿ ಸಲಹಾ ಸಮಿತಿ ಸಭೆಯ ದಿನಾಂಕ ನಿಗದಿ ಕುರಿತು ಚರ್ಚಿಸಲಾಗಿದೆ. ಸಲಹಾ ಸಮಿತಿ ಸಭೆಯಲ್ಲಿ ಕೈಗೊಂಡ ನಿರ್ಣಯದಂತೆ ಕಾಲುವೆಗಳಿಗೆ ನೀರು ಹರಿಸಲಾಗುತ್ತದೆ. ಕಳೆದ 13ವರ್ಷಗಳಿಂದ ಜುಲೈ 2ನೇ ವಾರದಲ್ಲಿ ನೀರಾವರಿ ಸಲಹಾ ಸಮಿತಿ ಸಭೆ ನಡೆಯುವುದು ವಾಡಿಕೆ. ಅದರನ್ವಯ ಸಲಹಾ ಸಮಿತಿ ಅಧ್ಯಕ್ಷರನ್ನು ಹಾಗೂ ಸಮಿತಿ ಸದಸ್ಯ ಕಾರ್ಯದರ್ಶಿ ಕೃಷ್ಣಾ ಕಾಡಾ ಭೀಮರಾಯನಗುಡಿ ವಲಯ ಮುಖ್ಯ ಅಭಿಯಂತರರಿಗೂ ಚರ್ಚಿಸಿರುವೆ. ಅಲ್ಲಿಯವರೆಗೂ ಸಹಕರಿಸಬೇಕು ಎಂದು ವಿನಂತಿಸಿದರು.
ಸದಾಶಿವ ಬರಟಗಿ, ಸಿದ್ರಾಮ ಅಂಗಡಗೇರಿ, ಈರಣ್ಣ ದೇವರಗುಡಿ, ಹೊನಕೇರೆಪ್ಪ ತೆಲಗಿ, ಕೃಷ್ಣಪ್ಪ ಬಮ್ಮರಡ್ಡಿ, ಚನ್ನಬಸಪ್ಪ ಸಿಂಧೂರ, ವಿಠuಲ ಬಿರಾದಾರ, ಮಾಚಪ್ಪ ಹೊರ್ತಿ, ರಾಜೇಸಾಬ ವಾಲಿಕಾರ, ದಾವಲಸಾಬ್ ಪಿಂಜಾರ, ಮಲ್ಲಪ್ಪ ಮಾಡ್ಯಾಳ, ಗುರಲಿಂಗಪ್ಪ ಪಡಸಲಗಿ, ಶೇಖಪ್ಪ ಸಜ್ಜನ, ಬಸವರಾಜ ದೊಡಮನಿ, ಶರಣಪ್ಪ ಗದಗ, ಚಂದ್ರಾಮ ತೆಗ್ಗಿ ಇದ್ದರು.