Advertisement

ಒಳಚರಂಡಿ ಕೆಲಸ ಮರು ಆರಂಭ: ವಾರದಲ್ಲಿ ನಿರ್ಧಾರ

11:02 PM Mar 22, 2021 | Team Udayavani |

ಕುಂದಾಪುರ: ನಗರದಲ್ಲಿ ಬಾಕಿಯಾದ ಒಳಚರಂಡಿ ಕಾಮಗಾರಿ ಆರಂಭ ಕುರಿತು 1 ವಾರದಲ್ಲಿ ಸ್ಪಷ್ಟಚಿತ್ರಣ ದೊರೆಯಲಿದೆ. ವೆಟ್‌ವೆಲ್‌ ಮಾಡಲು ಬೇಕಾದ ಎಲ್ಲ ಸಿದ್ಧತೆಗಳನ್ನೂ ಪುರಸಭೆ ಮಾಡಿದ್ದು ಕಾಮಗಾರಿ ಬಿಟ್ಟು ಹೋದ ಗುತ್ತಿಗೆದಾರರನ್ನು ಕರೆಸಿ ಹಳೆಯ ದರದಲ್ಲಿಯೇ ಕಾಮಗಾರಿ ಮುಂದುವರಿ ಸುತ್ತಾರಾ ಎಂದು ಕೇಳಿ ಖಚಿತಪಡಿಸಿಕೊಳ್ಳುವುದಷ್ಟೇ ಬಾಕಿ ಇದೆ. ಹಳೆಯ ದರಕ್ಕೆ ಒಪ್ಪದಿದ್ದರೆ ಗುತ್ತಿಗೆ ರದ್ದುಪಡಿಸಿ 3 ತಿಂಗಳೊಳಗೆ ಹೊಸ ಗುತ್ತಿಗೆ ನೀಡಬೇಕಿದೆ ಎಂದು ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕಾರ್ಯಪಾಲಕ ಎಂಜಿನಿಯರ್‌ ಚಂದ್ರಶೇಖರ್‌ ಸ್ಪಷ್ಟಪಡಿಸಿದರು.

Advertisement

ಸೋಮವಾರ ಇಲ್ಲಿನ ಪುರಸಭೆಯಲ್ಲಿ ಒಳಚರಂಡಿ ಕುರಿತಾಗಿ ನಡೆದ ವಿಶೇಷ ಸಭೆಯಲ್ಲಿ ಮಂಡಳಿ ನಿರ್ದೇಶಕಿ ಸುಲೋಚನಾ ಜಿ. ಕೆ. ಭಟ್‌ ಅವರು ಕಾಮಗಾರಿ ಬೇಗನೇ ಮುಗಿಸುವಂತೆ ಸೂಚಿಸಿ, ಪುರಸಭೆಯಿಂದ ಹಸ್ತಾಂತರಕ್ಕೆ ಬಾಕಿ ಇರುವ ಭೂಮಿಯನ್ನು ನೀಡಲು ಸಹಕರಿಸಿದರೆ ಮಂಡಳಿ ವತಿಯಿಂದ ಪೂರ್ಣ ಸಹಕಾರ ನೀಡಲಾಗುವುದು. ನನೆಗುದಿಗೆ ಬಿದ್ದ ಕಾಮಗಾರಿಯ ವಿವರಗಳನ್ನು ನೋಡಿದ್ದು ವೆಟ್‌ವೆಲ್‌ಗ‌ಳ ರಚನೆ ಸ್ಥಳ ಪರಿಶೀಲನೆ ನಡೆಸಿದ್ದೇನೆ ಎಂದರು.

ತಪ್ಪು ಮಾಹಿತಿ ಬೇಡ
ಮೋಹನದಾಸ ಶೆಣೈ ಮಾತನಾಡಿ, 10 ದಿನಗಳಲ್ಲಿ ಭೂಮಿ ದೊರೆಯತ್ತದೆ ಎಂದು ಹೇಳಿ ತಿಂಗಳುಗಳೇ ಕಳೆದರೂ ಹಸ್ತಾಂತರಿಸಿಲ್ಲ. ಬಾಕಿಯಾದ ಕಾಮಗಾರಿ ಆರಂಭವಾಗಿಲ್ಲ. ಹೊಸ ಕಾಮಗಾರಿಯೂ ನಡೆದಿಲ್ಲ. ಇಂತಹ ತಪ್ಪು ಮಾಹಿತಿ ಯಾರು ನೀಡುತ್ತಾರೆ ಎಂದಾಗಬೇಕು. 23 ಕೋ.ರೂ.ಗಳ ಕಾಮಗಾರಿ ಆಗಿದ್ದರೂ ಆದ ಕಾಮಗಾರಿ ಕುರಿತು ಋಣಾತ್ಮಕ ಮಾತುಗಳೇ ಜನವಲಯದಲ್ಲಿ ಕೇಳಿ ಬರುತ್ತಿವೆೆ. ಯುಜಿಡಿ ಜನರಿಗೆ ಶಾಪವಾಗದೇ ಪ್ರಯೋಜನಕಾರಿ ಆಗಲಿ ಎಂದರು.

ಹೊಳೆಗೆ ತ್ಯಾಜ್ಯ
ಸುಲೋಚನಾ ಜಿ.ಕೆ. ಭಟ್‌ ಮಾತನಾಡಿ, ಹೊಳೆಗೆ ನೇರ ತ್ಯಾಜ್ಯ ನೀರು ಹರಿಯಬಿಡುವುದನ್ನು ನೋಡಿ ಬಂದೆ. ಸ್ವತ್ಛ ಪರಿಸರ ಸರಕಾರದ ಧ್ಯೇಯ. ಆದ್ದರಿಂದ ಕಾಮಗಾರಿ ಬೇಗ ಪೂರ್ಣಗೊಳ್ಳಲು ಪುರಸಭೆ ಆಡಳಿತ ಮಂಡಳಿಯ ಸಹಕಾರ ಬೇಕು. ಪುರಸಭೆ ತ್ಯಾಜ್ಯ ಜಲ ಘಟಕಕ್ಕೆ ಜಾಗ ಹಸ್ತಾಂತರಿಸದ ಹೊರತು ಕಾಮಗಾರಿ ಪುನರಾರಂಭದ ದಿನಾಂಕ ನಿರ್ಣಯಿಸಲಾಗದು. ಯೋಜನಾ ವೆಚ್ಚ ಹೆಚ್ಚುತ್ತಿದೆ. ಆದರೂ ಹಣಕಾಸಿನ ಕೊರತೆ ಇಲ್ಲ. ಸಂಬಂಧಪಟ್ಟ ಅಧಿಕಾರಿಗಳ ಜತೆ ಮಂಡಳಿಯಿಂದ ಪತ್ರ ವ್ಯವಹಾರ ಮಾಡಲಾಗುವುದು ಎಂದರು.

ಕಾಮಗಾರಿಗೆ ಯಾರ ಒತ್ತಡ
ಚಂದ್ರಶೇಖರ ಖಾರ್ವಿ ಮಾತನಾಡಿ, ನಿರಾಕ್ಷೇಪಣೆ ಪತ್ರ ಇಲ್ಲದೇ, ಜಾಗ ದೊರೆಯದೇ ಯಾರ ಒತ್ತಡದಿಂದ ಕಾಮಗಾರಿ ಆರಂಭಿಸಲಾಗಿದೆ. ಡಿಪಿಆರ್‌ನಲ್ಲಿ ಸಿಆರ್‌ಝಡ್‌ ವಲಯ ಇದ್ದುದನ್ನು ಗಮನಿಸಲಿಲ್ಲ ಯಾಕೆ. ರಿಂಗ್‌ರೋಡ್‌ನ್ನು ಪ್ರಸ್ತಾವನೆಯಲ್ಲಿ ಇನ್ನೂ ಸೇರಿಸಿಲ್ಲ ಯಾಕೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಾಮಗಾರಿ ವಿಚಾರ ಏನಾಯಿತು ಎಂದು ಪ್ರಶ್ನಿಸಿದರು.

Advertisement

ದಾಖಲಾತಿ ಸಿದ್ಧ
ಮುಖ್ಯಾಧಿಕಾರಿ ಗೋಪಾಲಕೃಷ್ಣ ಶೆಟ್ಟಿ, 5 ವೆಟ್‌ವೆಲ್‌ಗ‌ಳ ಪೈಕಿ 3 ವೆಟ್‌ವೆಲ್‌ಗ‌ಳ ಭೂಮಿಯ ಎಲ್ಲ ದಾಖಲಾತಿ ಸಿದ್ಧವಾಗಿದೆ. ಡಿಸಿ ಅನುಮತಿಯೂ ದೊರೆತಿದೆ. 1 ಕಡೆ ಆಕ್ಷೇಪವಿದ್ದು ಸಭೆ ನಡೆಸಬೇಕಿದೆ. ಇನ್ನೊಂದು ಜಾಗ 43 ಸೆಂಟ್ಸ್‌ಗೆ ಒಪ್ಪಿಗೆ ಬಾಕಿ ಇದೆ. ಎಸ್‌ಟಿಪಿಗೆ ಜಾಗ ಇದ್ದು ದಾರಿ ಸಮಸ್ಯೆ ಇತ್ಯರ್ಥ ಪಡಿಸಲಾಗುವುದು. ಕಾಮಗಾರಿ ಆರಂಭಿಸಲು ಯಾವುದೇ ಅಡೆತಡೆಗಳಿಲ್ಲ. ವೆಟ್‌ವೆಲ್‌ಗೆ ಟೆಂಡರ್‌ ಕರೆಯಬೇಕಿಲ್ಲ. ಎಸ್‌ಟಿಪಿಗೆ ಮಾತ್ರ ಟೆಂಡರ್‌ ಕರೆಯಬೇಕಿದ್ದು ಅಷ್ಟರಲ್ಲಿ ದಾರಿ ಸಮಸ್ಯೆ ಪರಿಹಾರವಾಗಲಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next