ಕಾಸರಗೋಡು: ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡಲು ಕನ್ನಡ ಭಾಷೆ ಅರಿಯದ ಅಧ್ಯಾಪಕ ದೀಪು ಮತ್ತೆ ಶಾಲೆಗೆ ಬಂದಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು ಹಾಗು ಕನ್ನಡಾಭಿಮಾನಿಗಳು ಹೊಸದುರ್ಗ ಸರಕಾರಿ ಹೈಯರ್ ಸೆಕಂಡರಿ ಶಾಲೆಯಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಿದರು.
ಈ ಮೊದಲು ಅಕ್ಟೋಬರ್ 30 ರಂದು ಇದೇ ಶಾಲೆಯ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ್ದರು. ಅಂದು ಶಾಲೆಗೆ ಹಾಜರಾದ ಕನ್ನಡ ಅರಿಯದ ಮಲಯಾಳ ಅಧ್ಯಾಪಕನ ನೇಮಕಾತಿಯನ್ನು ಪ್ರತಿಭಟಿಸಿ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿದ್ದರು. ಹೆತ್ತವರು, ಪೋಷಕರು ಹಾಗು ಕನ್ನಡಾ ಭಿಮಾನಿಗಳು ವಿದ್ಯಾರ್ಥಿಗಳ ಪ್ರತಿಭಟನೆಗೆ ಜತೆಗೂಡಿದ್ದರು. ವಿದ್ಯಾರ್ಥಿಗಳ ಪ್ರತಿ ಭಟನೆಯ ಹಿನ್ನೆಲೆಯಲ್ಲಿ ಮಲಯಾಳ ಅಧ್ಯಾಪಕ ರಜೆಯಲ್ಲಿ ತೆರಳಿದ್ದು, ರಜೆ ಕಳೆದು ಇದೀಗ ಮತ್ತೆ ಶಾಲೆಗೆ ವಾಪಸಾಗಿ ದ್ದಾನೆ. ಇದರ ವಿರುದ್ಧ ಶುಕ್ರವಾರ ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು.
ದೀರ್ಘ ಇತಿಹಾಸವುಳ್ಳ ಹೊಸದುರ್ಗ ಬೋರ್ಡ್ ಸ್ಕೂಲ್ ಎಂದೇ ಗುರುತಿಸಿ ಕೊಂಡಿದ್ದ ಈ ಶಾಲೆ ಇಂದು ಹೊಸ ದುರ್ಗ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯಾಗಿದೆ. ಅಂದು ಈ ಶಾಲೆ ಯಲ್ಲಿ ಕನ್ನಡ ವಿದ್ಯಾರ್ಥಿಗಳು ಧಾರಾಳ ಸಂಖ್ಯೆಯಲ್ಲಿದ್ದರು. ಹಲವು ಕಾರಣ ಗಳಿಂದಾಗಿ ಬರಬರುತ್ತಾ ಕನ್ನಡ ಮಾಧ್ಯಮ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿದ್ದರೂ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ಕಲಿಯುತ್ತಲೇ ಬಂದಿದ್ದಾರೆ. ಈ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗಣಿತ ವಿಷಯವನ್ನು ಕಲಿಸಲು ಕನ್ನಡ ಭಾಷೆ ಅರಿಯದ ಮಲಯಾಳ ಅಧ್ಯಾಪಕರನ್ನು ನೇಮಿಸಲಾಗಿತ್ತು. ಇದರ ವಿರುದ್ಧ ಅಕ್ಟೋಬರ್ ತಿಂಗಳಲ್ಲಿ ವಿದ್ಯಾರ್ಥಿಗಳು ಪ್ರತಿಭಟಿಸಿದ್ದರಿಂದ ಅಧ್ಯಾಪಕ ರಜೆಯಲ್ಲಿ ತೆರಳಿದ್ದ. ಇದೀಗ ಕ್ರಿಸ್ಮಸ್ ರಜೆ ಕಳೆದ ಬಳಿಕ ಮಲಯಾಳ ಅಧ್ಯಾಪಕ ಶಾಲೆಗೆ ಹಾಜರಾಗಿದ್ದು, ವಿದ್ಯಾರ್ಥಿಗಳಿಗೆ ಮತ್ತಷ್ಟು ಸಮಸ್ಯೆಗೆ ಕಾರಣವಾಗಿದೆ. ಪರೀಕ್ಷೆ ಹತ್ತಿರ ಬರುತ್ತಿರುವಾಗ ಕನ್ನಡ ಅರಿಯದ ಮಲಯಾಳ ಅಧ್ಯಾಪಕ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಪಾಠ ಮಾಡುವುದಾದರೂ ಹೇಗೆ. ಈ ಅಧ್ಯಾಪಕ ಪಾಠ ಮಾಡಿದರೂ ವಿದ್ಯಾರ್ಥಿಗಳಿಗೆ ಅರ್ಥೈಸಿಕೊಳ್ಳಲು ಸಾಧ್ಯವಾಗದು. ಈ ಹಿನ್ನೆಲೆಯಲ್ಲಿ ಪೋಷಕರ ಮತ್ತು ಕನ್ನಡಾಭಿಮಾನಿಗಳ ನೇತೃತ್ವದಲ್ಲಿ ವಿದ್ಯಾರ್ಥಿಗಳು ಶುಕ್ರವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಹೊಸದುರ್ಗ ಕನ್ನಡ ಸಂಘ ಅಧ್ಯಕ್ಷ ಎಚ್.ಎಸ್.ಭಟ್, ಕನ್ನಡ ಸಂಘದ ಸ್ಥಾಪಕ ಲಕ್ಷ¾ಣ್, ಎಚ್.ಬಾಲಕೃಷ್ಣ, ಪ್ರಭಾಶಂಕರ್ ಬೇಲಗದ್ದೆ, ಎಚ್.ಎನ್.ಜಗದೀಶ್, ಎಚ್.ಆರ್.ಸುಕನ್ಯಾ ಮೊದಲಾದವರು ಮಾತನಾಡಿದರು. ಮನವಿಯನ್ನು ಸ್ವೀಕರಿಸಿದ ಡಿಡಿಇಒ ಅವರು ಮಲಯಾಳ ಅಧ್ಯಾಪಕನಿಗೆ ಕನ್ನಡ ಮಾಧ್ಯಮದಲ್ಲಿ ಪಾಠ ಮಾಡಲು ಸಾಧ್ಯವಾಗುವುದೇ ಎಂಬ ಬಗ್ಗೆ “ಹಿಯರಿಂಗ್’ ನಡೆಸುವುದಾಗಿಯೂ, ಆ ಬಳಿಕ ಅಗತ್ಯ ಕ್ರಮ ತೆಗೆದುಕೊಳ್ಳುವುದಾಗಿ ತಿಳಿಸಿದ್ದಾರೆ.
ಡಿಡಿಇಒ ಗೆ ಮನವಿ
ಹೊಸದುರ್ಗ ಸರಕಾರಿ ಹೈಯರ್ ಸೆಕೆಂಡರಿ ಶಾಲೆಯ ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ಗಣಿತ ಪಾಠ ಮಾಡಲು ಕನ್ನಡ ಅರಿಯದ ಮಲಯಾಳ ಅಧ್ಯಾಪಕ ರಜೆಯ ಬಳಿಕ ಮತ್ತೆ ಶಾಲೆಗೆ ಹಾಜರಾಗಿದ್ದು ವಿದ್ಯಾರ್ಥಿಗಳು ತರಗತಿ ಬಹಿಷ್ಕರಿಸಿ ಪ್ರತಿಭಟನೆ ನಡೆಸಿದರು. ಇದೇ ವೇಳೆ ವಿದ್ಯಾರ್ಥಿಗಳು, ಹೆತ್ತವರು, ಪೋಷಕರು ಮತ್ತು ಕನ್ನಡಾಭಿಮಾನಿಗಳು ಕಾಸರಗೋಡು ಜಿಲ್ಲಾ ಡೆಪ್ಯೂಟಿ ಡೈರೆಕ್ಟರ್ ಆಫ್ ಎಜುಕೇಶನ್(ಡಿಡಿಒ) ಅಧಿಕಾರಿ ಪುಷ್ಪಾ ಅವರನ್ನು ಭೇಟಿಯಾಗಿ ಕನ್ನಡ ಮಾಧ್ಯಮ ವಿದ್ಯಾರ್ಥಿಗಳು ಮತ್ತೆ ಸಂಕಷ್ಟಕ್ಕೆ ಸಿಲುಕಿದ್ದು, ಸಮಸ್ಯೆ ಪರಿಹರಿಸುವಂತೆ ವಿನಂತಿಸಿದ್ದಾರೆ.