Advertisement

ಮೆಟ್ರೋ ಚಾಲಕರಿಗಿಲ್ಲ ಆರ್‌ಡಿಎಸ್‌ಒ ಪ್ರಮಾಣ

12:29 PM Oct 06, 2018 | Team Udayavani |

ಬೆಂಗಳೂರು: ನಿತ್ಯ ಸಾವಿರಾರು ಪ್ರಯಾಣಿಕರನ್ನು ಕೊಂಡೊಯ್ಯುವ “ನಮ್ಮ ಮೆಟ್ರೋ’ ಚಾಲಕರ ಮಾನಸಿಕ ಸಾಮರ್ಥ್ಯ ಪರೀಕ್ಷೆ (Psycho test) ರೈಲ್ವೆ ಇಲಾಖೆಯ ಅಧಿಕೃತ ಸಂಸ್ಥೆ ಆರ್‌ಡಿಎಸ್‌ಒ (ಸಂಶೋಧನೆ, ವಿನ್ಯಾಸ ಮತ್ತು ಗುಣಮಟ್ಟಗಳ ಸಂಸ್ಥೆ)ದಿಂದ ನಡೆದಿಲ್ಲ ಎನ್ನುವುದು ತಡವಾಗಿ ಬೆಳಕಿಗೆ ಬಂದಿದೆ. 

Advertisement

ದೇಶದ ಎಲ್ಲ ಮೆಟ್ರೋ ರೈಲುಗಳ ಚಾಲಕರ ಮಾನಸಿಕ ಸಾಮರ್ಥ್ಯ ಪರೀಕ್ಷೆಯನ್ನು ನಡೆಸಿ, ಪ್ರಮಾಣೀಕರಿಸಿದ್ದು ಲಕ್ನೋನಲ್ಲಿರುವ ರೈಲ್ವೆ ಇಲಾಖೆ ಆರ್‌ಡಿಎಸ್‌ಒ. ಆದರೆ, “ನಮ್ಮ ಮೆಟ್ರೋ’ ಚಾಲಕರ ಸಾಮರ್ಥ್ಯ ಪರೀಕ್ಷೆ ಮಾತ್ರ ಸ್ಥಳೀಯ ನಿಮ್ಹಾನ್ಸ್‌ ವೈದ್ಯರಿಂದಲೇ ಪ್ರಮಾಣೀಕರಿಸಲಾಗಿದೆ. ತರಾತುರಿಯಲ್ಲಿ ಪ್ರಮಾಣಪತ್ರ ಪಡೆಯುವ ಭರದಲ್ಲಿ ನಡೆಸಿದ ಈ ಪ್ರಕ್ರಿಯೆ ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.  

ಯಾವೊಂದು ಮೆಟ್ರೋ ಮಾರ್ಗದಲ್ಲಿ ರೈಲು ಕಾರ್ಯಾಚರಣೆಗೆ ರೈಲ್ವೆ ಸುರಕ್ಷತಾ ಆಯುಕ್ತರಿಂದ ಅನುಮತಿ ಪಡೆಯುವುದು ಕಡ್ಡಾಯ. ಹಾಗೂ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಇದು ಅವಶ್ಯಕ ಕೂಡ. ಅದೇ ರೀತಿ, ಆ ರೈಲು ಓಡಿಸುವ ಚಾಲಕರ ಮಾನಸಿಕ ಸಾಮರ್ಥ್ಯ ಪರೀಕ್ಷೆಯೂ ಬಹುಮುಖ್ಯ. ಅದರಲ್ಲೂ ಪದೇ ಪದೇ ಕೈಕೊಡುವ “ನಮ್ಮ ಮೆಟ್ರೋ’ಗೆ ಇದರ ಅಗತ್ಯತೆ ಹೆಚ್ಚಿದೆ.

ರೈಲು ಏಕಾಏಕಿ ಸ್ಥಗಿತಗೊಳ್ಳುವುದು, ವಿದ್ಯುತ್‌ ಸಂಪರ್ಕ ಕಡಿತ, ಸಿಗ್ನಲ್‌ನಲ್ಲಿ ಲೋಪ ಸೇರಿದಂತೆ ತಾಂತ್ರಿಕ ದೋಷಗಳು ಕಂಡುಬಂದಾಗ ಸಾಮಾನ್ಯವಾಗಿ ರೈಲಿನಲ್ಲಿ ಗೊಂದಲ ಉಂಟಾಗುತ್ತದೆ. ಇದು ಚಾಲಕರ ಮೇಲೆ ಒತ್ತಡಕ್ಕೆ ಕಾರಣವಾಗುತ್ತದೆ.

ಇಂತಹ ಸಂದರ್ಭಗಳಲ್ಲಿ ಆ ಚಾಲಕರ ವರ್ತನೆ ಹಾಗೂ ಅದನ್ನು ನಿಭಾಯಿಸುವ ರೀತಿಯನ್ನು ಈ ಪರೀಕ್ಷೆ ಮೂಲಕ ಅಳೆಯಲಾಗುತ್ತದೆ. ಇದನ್ನು ನಡೆಸುವ ಏಕೈಕ ಅಧಿಕೃತ ಸಂಸ್ಥೆ ರೈಲ್ವೆ ಇಲಾಖೆಯ ಆರ್‌ಡಿಎಸ್‌ಒ. ಬೆಂಗಳೂರು ಮೆಟ್ರೋ ರೈಲು ನಿಗಮವು ಈ ಸಂಬಂಧದ ಪ್ರಮಾಣಪತ್ರವನ್ನು ರಾಷ್ಟ್ರೀಯ ಮಾನಸಿಕ ಆರೋಗ್ಯ ಮತ್ತು ನರವಿಜ್ಞಾನ ಸಂಸ್ಥೆ (ನಿಮ್ಹಾನ್ಸ್‌)ಯಿಂದ ಪಡೆದಿದೆ.

Advertisement

300ಕ್ಕೂ ಅಧಿಕ ಚಾಲಕರು: ಬಿಎಂಆರ್‌ಸಿಯಲ್ಲಿ ಸುಮಾರು 300ಕ್ಕೂ ಅಧಿಕ ಮೆಟ್ರೋ ಚಾಲಕರಿದ್ದು, ಅವರೆಲ್ಲರೂ ಪಾಳಿಯಲ್ಲಿ 50 ಮೆಟ್ರೋ ರೈಲುಗಳ ಚಾಲನೆ ಮಾಡುತ್ತಾರೆ. ವಿವಿಧ ಹಂತಗಳಲ್ಲಿ ಈ ಸಿಬ್ಬಂದಿ ದೆಹಲಿ ಮೆಟ್ರೋ ರೈಲು ನಿಗಮದಲ್ಲಿ ರೈಲು ನಿರ್ವಹಣೆ, ಕಾರ್ಯಾಚರಣೆಯ ಪ್ರಾಯೋಗಿಕ ತರಬೇತಿ ಪಡೆದಿದ್ದಾರೆ.

ಇವರು ನೇಮಕಾತಿ ಆದೇಶ ಪಡೆಯುವ ಮುನ್ನ ಮಾನಸಿಕ ಸಾಮರ್ಥ್ಯ ಪರೀಕ್ಷೆಗೆ ಸಂಬಂಧಿಸಿದ ಪ್ರಮಾಣಪತ್ರ ಹೊಂದಿರುವುದು ಕಡ್ಡಾಯ. ಆರ್‌ಡಿಎಸ್‌ಒ ಮಾದರಿ ಪ್ರಶ್ನೆಪತ್ರಿಕೆಯನ್ನು ಆಧರಿಸಿ ನಿಮ್ಹಾನ್ಸ್‌ ವೈದ್ಯರಿಂದ ಮೆಟ್ರೋ ಲೋಕೊ ಪೈಲಟ್‌ಗಳನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ನಿಮ್ಹಾನ್ಸ್‌ ಕೂಡ ಒಂದು ಪ್ರತಿಷ್ಠಿತ ನರವಿಜ್ಞಾನ ಸಂಸ್ಥೆಯಾಗಿದ್ದು, ರಾಷ್ಟ್ರಮಟ್ಟದಲ್ಲಿ ಖ್ಯಾತಿ ಪಡೆದಿದೆ.

ಮಾನಸಿಕ ಸಾಮರ್ಥ್ಯ ಪರೀಕ್ಷೆಯನ್ನು ಈ ವೈದ್ಯರು ನಡೆಸಿದ್ದರಲ್ಲಿ ತಪ್ಪೇನಿದೆ? ಅಷ್ಟಕ್ಕೂ ಆರ್‌ಡಿಎಸ್‌ಒ ಪ್ರಶ್ನೆಪತ್ರಿಕೆಯ ಮಾದರಿ ಮತ್ತು ಸಂಬಂಧಿಸಿದ ಪ್ರಕ್ರಿಯೆಗಳನ್ನೇ ಇಲ್ಲಿಯೂ ಅನುಸರಿಸಲಾಗಿದೆ ಎಂದು ಹೆಸರು ಹೇಳಲಿಚ್ಛಿಸದ ನಿಗಮದ ಕಾರ್ಯಾಚರಣೆ ಮತ್ತು ನಿರ್ವಹಣಾ ವಿಭಾಗದ ಅಧಿಕಾರಿಯೊಬ್ಬರು ಸಮಜಾಯಿಷಿ ನೀಡುತ್ತಾರೆ.

ನೂರಾರು ಬಾರಿ ವ್ಯತ್ಯಯ: “ನಮ್ಮ ಮೆಟ್ರೋ’ ಮೊದಲ ಹಂತ ಸಂಪೂರ್ಣವಾಗಿ ಕಾರ್ಯಾಚರಣೆ ಆರಂಭಿಸಿ ಒಂದು ವರ್ಷ ಕಳೆದಿದೆ. ಈ ಅವಧಿಯಲ್ಲಿ ನೂರಾರು ಬಾರಿ ಮೆಟ್ರೋ ತಾಂತ್ರಿಕ ದೋಷ ಮತ್ತಿತರ ಕಾರಣಗಳಿಂದ ಸ್ಥಗಿತಗೊಂಡಿದೆ. ಅದರಲ್ಲೂ ಕೆಲವೊಮ್ಮೆ ಸುರಂಗ ಮಾರ್ಗಗಳಲ್ಲಿ ನಿಲುಗಡೆಯಾಗಿ, ಪ್ರಯಾಣಿಕರನ್ನು ಕೆಳಗಿಳಿಸಿ ಕರೆತಂದ ಉದಾಹರಣೆಗಳೂ ಇವೆ.

ಆದರೆ, ಎರಡು-ಮೂರು ನಿಮಿಷದ ವ್ಯತ್ಯಯವನ್ನು ಗಂಭೀರವಾಗಿ ಪರಿಗಣಿಸುವುದಿಲ್ಲ. ಕನಿಷ್ಠ ಹತ್ತು ನಿಮಿಷಕ್ಕಿಂತ ಹೆಚ್ಚು ಹೊತ್ತು ವ್ಯತ್ಯಯ ಉಂಟಾದಾಗ ಅದನ್ನು ಗಂಭೀರವಾಗಿ ತೆಗೆದುಕೊಳ್ಳಲಾಗುತ್ತದೆ. ಇಂತಹ ಘಟನೆಗಳು ತಿಂಗಳಲ್ಲಿ ಒಮ್ಮೆ ಅಥವಾ ಎರಡು ಬಾರಿ ದಾಖಲಾಗಿವೆ ಎಂದು ಮೂಲಗಳು ಮಾಹಿತಿ ನೀಡಿವೆ. 

ಇಂತಹ ಘಟನೆಗಳು ನಡೆದಾಗ ಮಾನಸಿಕ ಸಾಮರ್ಥ್ಯ ಪರೀಕ್ಷೆಯ ಅಗತ್ಯತೆ ತಿಳಿಯುತ್ತದೆ. ಸ್ಥಗಿತಗೊಂಡ ತಕ್ಷಣ ಏನು ಮಾಡಬೇಕು? ಹೇಗೆ ಸಂಪರ್ಕಿಸಬೇಕು? ಪ್ರಯಾಣಿಕರೊಂದಿಗೆ ಹೇಗೆ ವರ್ತಿಸಬೇಕು? ಯಾವ ದ್ವಾರ ತೆರೆಯಬೇಕು? ಇಂತಹ ಹಲವು ಅಂಶಗಳ ಬಗ್ಗೆ ತಿಳಿದಿರಬೇಕಾಗುತ್ತದೆ ಎಂದು ಅಧಿಕಾರಿಗಳು ತಿಳಿಸುತ್ತಾರೆ. 

ಪ್ರಮುಖ ನಿಲ್ದಾಣಗಳಲ್ಲಿ ಆಂಬ್ಯುಲನ್ಸ್‌ ಸೇವೆಯೂ ಇಲ್ಲ: ನಿತ್ಯ ಲಕ್ಷಾಂತರ ಪ್ರಯಾಣಿಕರು ಮೆಟ್ರೋದಲ್ಲಿ ಸಂಚರಿಸುತ್ತಾರೆ. 750 ವ್ಯಾಟ್‌ ಸಾಮರ್ಥ್ಯದ ವಿದ್ಯುತ್‌ ಲೈನ್‌ ಮೇಲೆ ಮೆಟ್ರೋ ಓಡುತ್ತದೆ. ಪ್ರಯಾಣಿಕರು ಮತ್ತು ಸಿಬ್ಬಂದಿ ಸುರಕ್ಷತೆ ದೃಷ್ಟಿಯಿಂದ ಮುನ್ನೆಚ್ಚರಿಕೆ ಕ್ರಮವಾಗಿ ನಿಲ್ದಾಣಗಳಲ್ಲಿ ಆಂಬ್ಯುಲನ್ಸ್‌ ಇರಬೇಕಾಗುತ್ತದೆ. ಕೊನೆಪಕ್ಷ ನಾಲ್ಕು ದಿಕ್ಕುಗಳಲ್ಲಿರುವ ಟರ್ಮಿನಲ್‌ಗ‌ಳಲ್ಲಾದರೂ ಈ ವ್ಯವಸ್ಥೆ ಮಾಡಬಹುದಿತ್ತು.

ಆದರೆ, ಇದಾವುದೂ “ನಮ್ಮ ಮೆಟ್ರೋ’ದಲ್ಲಿ ಇಲ್ಲ ಎಂದು ಬಿಎಂಆರ್‌ಸಿ ನೌಕರರ ಸಂಘದ ಉಪಾಧ್ಯಕ್ಷ ಸೂರ್ಯನಾರಾಯಣ ಮೂರ್ತಿ ಆರೋಪಿಸುತ್ತಾರೆ. ಸುಮಾರು 250 ಕಿ.ಮೀ. ಉದ್ದದ ಸೇವೆ ನೀಡುತ್ತಿರುವ ದೆಹಲಿ ಮೆಟ್ರೋದಲ್ಲಿ ಪ್ರಮುಖ ನಿಲ್ದಾಣಗಳಲ್ಲಿ ಈ ವ್ಯವಸ್ಥೆ ಇದೆ. ನಮ್ಮಲ್ಲಿ ಪ್ರಥಮ ಚಿಕಿತ್ಸಾ ಸೌಲಭ್ಯದ ಕೊರತೆಯೂ ಇದೆ ಎಂದೂ ಅವರು ದೂರಿದರು.

* ವಿಜಯಕುಮಾರ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next