ಚಿಕ್ಕಬಳ್ಳಾಪುರ: ಕೇಂದ್ರ ಸರ್ಕಾರ ಸುಂಕ ರಹಿತ ಹಾಲು ಹಾಗೂ ಹಾಲಿನ ಉತ್ಪನ್ನಗಳ ಆಮದು ಮಾಡಿಕೊಳ್ಳುವ ಪ್ರಾದೇಶಿಕ ಸಮಗ್ರ ಆರ್ಥಿಕ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಸಹಿ ಹಾಕಿದರೆ ದೇಶದ ರೈತರ ಬದುಕು ಸರ್ವನಾಶವಾಗಲಿದೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ ತಿಳಿಸಿದರು. ನಗರದ ತಾಲೂಕು ಕಚೇರಿ ಎದುರು ಸೋಮವಾರ ಆರ್‌ಸಿಇಪಿ ಒಪ್ಪಂದ ವಿರೋಧಿಸಿ ಪ್ರಾಂತ ರೈತ ಸಂಘ ಹಮ್ಮಿಕೊಂಡಿದ್ದ ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ರೈತರ ಹಾಗೂ ಕೂಲಿ ಕಾರ್ಮಿಕರ ಹಿತಾಸಕ್ತಿ ಕಾಪಾಡದೇ ಆರ್‌ಸಿಇಪಿ ಒಪ್ಪಂದ ಮಾಡಿಕೊಳ್ಳಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೃಷಿ ಕೂಲಿಕಾರರು ಬೀದಿಗೆ: ದೇಶದಲ್ಲಿ ಗುಜರಾತ್ ಬಿಟ್ಟರೆ ಕರ್ನಾಟಕ ಹಾಲು ಉತ್ಪಾದನೆಯಲ್ಲಿ ಮಂಚೂಣಿಯಲ್ಲಿದ್ದು, ನಿತ್ಯ 80 ರಿಂದ 90 ಲಕ್ಷ ಲೀ.ಹಾಲು ರಾಜ್ಯದಲ್ಲಿ ಉತ್ಪಾದನೆ ಆಗುತ್ತಿದೆ. ಕೋಟ್ಯಂತರ ಕುಟುಂಬಗಳು ಹೈನೋದ್ಯಮದ ಮೂಲಕ ದೇಶದಲ್ಲಿ ಬದುಕು ಕಟ್ಟಿಕೊಂಡಿವೆ. ಆದರೆ ಆರ್‌ಸಿಇಪಿ ಒಪ್ಪಂದ ಜಾರಿಯಾದರೆ ದೇಶದ ಇಡೀ ಹೈನೋದ್ಯಮಕ್ಕೆ ದೊಡ್ಡ ಪೆಟ್ಟು ಬೀಳುತ್ತದೆ. ಕೃಷಿ ಜೊತೆಗೆ ಹೈನೋದ್ಯಮ ಕ್ಷೇತ್ರವನ್ನು ನಂಬಿದ ಕೃಷಿ ಕೂಲಿಕಾರರು ಬೀದಿಗೆ ಬರಬೇಕಾಗುತ್ತದೆ ಕಳವಳ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಅವೈಜ್ಞಾನಿಕವಾಗಿ ಒಪ್ಪಂದಕ್ಕೆ ಮುಂದಾಗಿದೆ. ಒಪ್ಪಂದದಿಂದ ದೇಶದ ಆರ್ಥಿಕ, ಕೃಷಿ ರಂಗದ ಮೇಲೆ ವ್ಯತ್ತಿರಿಕ್ತ ಪರಿಣಾಮ ಬೀರುತ್ತದೆ. ಹೊರ ದೇಶದ ಕೃಷಿ, ಹಾಲಿನ ಉತ್ಪನ್ನಗಳು ದೇಶದ ಮಾರುಕಟ್ಟೆಗೆ ಪ್ರವೇಶಿಸಿದರೆ ದೇಶದ ರೈತರು ದಿವಾಳಿಯಾಗಲಿದ್ದಾರೆ ಎಂದು ಹೇಳಿದರು. ಕೃಷಿ ಲಾಭದಾಯಕವಲ್ಲದೇ ರೈತರು ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಇಂತಹ ಸಂದರ್ಭದಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ದೇಶದ ರೈತರಿಗೆ ಗಾಯದ ಮೇಲೆ ಬರೆ ಎಳೆದಂತೆ ಆರ್‌ಸಿಇಪಿ ಒಪ್ಪಂದಕ್ಕೆ ಮುಂದಾಗಿದೆ ಎಂದು ದೂರಿದರು.
ಗ್ರೇಡ್-2 ತಹಶೀಲ್ದಾರ್‌ಗೆ ಮನವಿ: ತಾಲೂಕು ಕಚೇರಿ ಎದುರು ಆರ್‌ಸಿಇಪಿ ಒಪ್ಪಂದದ ವಿರುದ್ಧ ಘೋಷಣೆ ಕೂಗಿದ ಕರ್ನಾಟಕ ಪ್ರಾಂತ ರೈತ ಸಂಘದ ಕಾರ್ಯಕರ್ತರು, ಕೇಂದ್ರ ಸರ್ಕಾರ ಒಪ್ಪಂದದಿಂದ ಹಿಂದೆ ಸರಿಯಬೇಕೆಂದು ಆಗ್ರಹಿಸಿ ಹಾಗೂ ರೈತರ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಾಲೂಕು ಕಚೇರಿಗೆ ಗ್ರೇಡ್-2 ತಹಶೀಲ್ದಾರ್ ತುಳಸಿ ಅವರಿಗೆ ಮನವಿ ಸಲ್ಲಿಸಿದರು. ರೈತ ಮುಖಂಡರಾದ ಎ.ಟಿ.ರಾಮಕೃಷ್ಣ, ನರಸಿಂಹಯ್ಯ, ನರಸಿಂಹರೆಡ್ಡಿ, ಎನ್.ಡಿ.ವೆಂಕಟೇಶ್, ಎ.ನಾಗೇಶ್, ಜಿ.ಮುನಿಯಪ್ಪ, ಕೆ.ಆರ್.ಮಂಜುಳಾ ಸೇರಿದಂತೆ ಹಲವು ರೈತ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಪ್ರಾಂತ ರೈತ ಸಂಘದ ಕಳವಳ ಏನು?: ಆರ್‌ಸಿಇಪಿ ಒಪ್ಪಂದ ಅನುಷ್ಠಾನವಾದರೆ ದೇಶದಲ್ಲಿ ಹೊರ ದೇಶಗಳ ಕೃಷಿ ಉತ್ಪನ್ನಗಳು ಹಾಗೂ ಹಾಲಿನ ಉತ್ಪನ್ನಗಳು ಮಾರಾಟವಾಗಿ ದೇಶದಲ್ಲಿ ಉತ್ಪಾದಿಸುವ ಕೃಷಿ ಉತ್ಪನ್ನಗಳಿಗೆ ಬೆಲೆ ಇಲ್ಲದಂತಾಗುತ್ತದೆ. ಬೀಜ ತಯಾರಿಕಾ ಕಂಪನಿಗಳು ಭೌದ್ದಿಕ ಸ್ವಾಮ್ಯ ಹಕ್ಕು ಮೂಲಕ ಅಧಿಕಾರ ಹೊಂದುವುದು ದೇಶದ ರೈತರ ಹಕ್ಕು ಕಸಿದಂತಾಗುತ್ತದೆ. ಸೂಪರ್ ಮಾರ್ಕೆಟ್ ಮತ್ತು ದೊಡ್ಡ ಕಂಪನಿಗಳ ನೇರ ಚಿಲ್ಲರೆ ವ್ಯಾಪಾರದಿಂದ ಸ್ಥಳೀಯ ಮಾರುಕಟ್ಟೆ ನಿರ್ನಾಮವಾಗಲಿದೆ.