ಅಹಮದಾಬಾದ್ : ಐಪಿಎಲ್ ನ ನಿರ್ಣಾಯಕ ಎಲಿಮಿನೇಟರ್ ಪಂದ್ಯದಲ್ಲಿ ಆರ್‌ಸಿಬಿಯು ರಾಜಸ್ಥಾನ್ ರಾಯಲ್ಸ್ ತಂಡವನ್ನು ಎದುರಿಸಲು ಸಜ್ಜಾಗಿದೆ. ಪಂದ್ಯದ ಕೆಲವೇ ಗಂಟೆಗಳ ಮೊದಲು, ವಿರಾಟ್ ಕೊಹ್ಲಿ ಅವರಿಗೆ ಉಗ್ರರ ಬೆದರಿಕೆಯಿಂದಾಗಿ ಆರ್‌ಸಿಬಿ ತಮ್ಮ ಅಭ್ಯಾಸದ ಅವಧಿಯನ್ನು ರದ್ದುಗೊಳಿಸಿದೆ ಎಂದು ಹಲವು ಮಾಧ್ಯಮಗಳು ವರದಿ ಮಾಡಿವೆ.
ವರದಿ ಬೆನ್ನಲ್ಲೇ, ‘ಆರ್‌ಸಿಬಿ ತಮ್ಮ ಅಭ್ಯಾಸದ ಅವಧಿಯನ್ನು ಅತಿಯಾದ ಬಿಸಿಲಿನ ಕಾರಣದಿಂದ ರದ್ದುಗೊಳಿಸಿದೆ ಮತ್ತು ಉಗ್ರರ ಬೆದರಿಕೆ ಭೀತಿಯಿಂದಲ್ಲ’ ಎಂದು ಹೇಳಿರುವುದಾಗಿ ಕೆಲ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
‘ಮಧ್ಯಾಹ್ನದ ಅತಿಯಾದ ಬಿಸಿಯಿಂದಾಗಿ ಆರ್‌ಸಿಬಿ ತಮ್ಮ ಅಭ್ಯಾಸದ ಅವಧಿಯನ್ನು ವಿಳಂಬಗೊಳಿಸಿದೆ. ಆರಂಭದಲ್ಲಿ ಅಭ್ಯಾಸವನ್ನು 2 ರಿಂದ 5 ಕ್ಕೆ ಸಮಯ ಬದಲಾಯಿಸಲಾಗಿತ್ತು, 4 ರಿಂದ 6 ಅನ್ನು ಕೇಳಿದರು, 6.30 ರವರೆಗೆ ಫ್ಲಡ್ ಲೈಟ್‌ಗಳು ಲಭ್ಯವಿರುತ್ತವೆ ಎಂದು ನಾವು ಹೇಳಿದೆವು. ಅದು ಸಮಸ್ಯೆಯಲ್ಲ. ಹವಾಮಾನವು 45 ಡಿಗ್ರಿ ಆಗಿತ್ತು ಆದ್ದರಿಂದ ಅವರು ಅಭ್ಯಾಸವನ್ನು ಮಾಡದಿರಲು ನಿರ್ಧರಿಸಿದರು’ ಎಂದು ಅಹಮದಾಬಾದ್ ಸ್ಟೇಡಿಯಂನ ಉನ್ನತ ಮೂಲಗಳು ತಿಳಿಸಿವೆ ಎಂದು ‘ಇಂಡಿಯಾ ಟುಡೇ’ ವರದಿ ಮಾಡಿದೆ.
ಅಹಮದಾಬಾದ್ ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಬಂದ ಕೆಲವು ದಿನಗಳ ನಂತರ ಅಹಮದಾಬಾದ್‌ನಲ್ಲಿ ನಾಲ್ವರು ಐಸಿಸ್ ಉಗ್ರರನ್ನು ಬಂಧಿಸಲಾಗಿದೆ. ಶ್ರೀಲಂಕಾ ಪ್ರಜೆಗಳು ಎನ್ನಲಾದ ಉಗ್ರರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳವು ಸುಳಿವಿನ ನಂತರ ಬಂಧಿಸಿತ್ತು. ಇಂದಿನ ಪಂದ್ಯಕ್ಕೆ ಕಟ್ಟುನಿಟ್ಟಿನ ಭದ್ರತಾ ಕ್ರಮಗಳನ್ನು ತೆಗೆದುಕೊಳ್ಳಲಿದ್ದಾರೆ ಎಂದು ತಿಳಿದು ಬಂದಿದೆ. ಈಗಾಗಲೇ ಕ್ರೀಡಾಂಗಣಕ್ಕೆ ಹದ್ದಿನ ಕಣ್ಣು ಇರಿಸಲಾಗಿದ್ದು ತಪಾಸಣೆಯನ್ನೂ ಹೆಚ್ಚಿನ ಮಟ್ಟದಲ್ಲಿ ನಡೆಸಲಾಗುತ್ತಿದೆ. ಹೆಚ್ಚುವರಿ ಪೊಲೀಸರನ್ನೂ ನಿಯೋಜಿಸಲಾಗುತ್ತಿದೆ.