Advertisement

RCB ಬೇಕಿದೆ ಬೌಲಿಂಗ್‌ ಬಲ: ಇಂದು ಪಂಜಾಬ್‌ ವಿರುದ್ಧ ತವರಿನ ಪಂದ್ಯ

12:27 AM Mar 25, 2024 | Team Udayavani |

ಬೆಂಗಳೂರು: ಸಂಪ್ರದಾಯದಂತೆ ಮೊದಲ ಪಂದ್ಯವನ್ನು ಸೋಲುವ ಮೂಲಕ ಆರ್‌ಸಿಬಿ 2024ರ ಐಪಿಎಲ್‌ ಅಭಿಯಾನ ಆರಂಭಿಸಿದೆ. ಚೆನ್ನೈಯಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ನಡೆದ ಉದ್ಘಾಟನ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ಎಡವಿ ಮುಖಭಂಗಕ್ಕೊಳಗಾಗಿದೆ. ಇನ್ನೀಗ ತವರಿನ ಪಂದ್ಯದ ಸರದಿ.

Advertisement

ಸೋಮವಾರ ರಾತ್ರಿ ಡು ಪ್ಲೆಸಿಸ್‌ ಪಡೆ ಬೆಂಗಳೂರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲಿ ಪಂಜಾಬ್‌ ಕಿಂಗ್ಸ್‌ ವಿರುದ್ಧ ಆಡಲಿದೆ. ಶಿಖರ್‌ ಧವನ್‌ ಬಳಗ ಆರಂಭಿಕ ಮುಖಾಮುಖೀಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ಗೆ 4 ವಿಕೆಟ್‌ ಸೋಲುಣಿಸಿದ ಉತ್ಸಾಹದಲ್ಲಿದೆ. ಆರ್‌ಸಿಬಿ ಎದುರಿನ ಒಟ್ಟು ದಾಖಲೆಯಲ್ಲೂ ಮುಂಚೂಣಿಯಲ್ಲಿದೆ.

ಸಮಸ್ಯೆಗಳು ಬಹಳಷ್ಟಿವೆ…
ಚೆನ್ನೈ ವಿರುದ್ಧದ ಪಂದ್ಯದಲ್ಲಿ ಆರ್‌ಸಿಬಿ ಪ್ರದರ್ಶನ ಕಂಡಾಗ ತಂಡದ ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ವಿಭಾಗಗಳೆರಡರಲ್ಲೂ ಸಮಸ್ಯೆ ಗಳು ಢಾಳಾಗಿ ಗೋಚರಿಸಿವೆ. ಬ್ಯಾಟಿಂಗ್‌ ಮೂಲಕ ಆರಂಭಿಸುವುದಾದರೆ, ಅಗ್ರ ಕ್ರಮಾಂಕದ ಆಟಗಾರರಿಂದ ನಿರೀಕ್ಷಿತ ಪ್ರದರ್ಶನ ಹೊರ ಹೊಮ್ಮಲಿಲ್ಲ. ನಾಯಕ ಡು ಪ್ಲೆಸಿಸ್‌ ಅವರೇನೋ ಸಿಡಿದು ನಿಂತರು, ಕೊಹ್ಲಿ ಇನ್ನೊಂದು ಬದಿ ನಿಂತೇ ಇದ್ದರು. 20 ಎಸೆತಗಳಿಂದ 21 ರನ್‌ ದೊಡ್ಡ ಕೊಡುಗೆಯೇನಲ್ಲ.

ರಜತ್‌ ಪಾಟಿದಾರ್‌ ಮತ್ತು ಗ್ಲೆನ್‌ ಮ್ಯಾಕ್ಸ್‌ವೆಲ್‌ ಖಾತೆಯನ್ನೇ ತೆರೆಯಲಿಲ್ಲ. ಪಾಟಿದಾರ್‌ ಮೂರೇ ಎಸೆತಕ್ಕೆ ವಿಕೆಟ್‌ ಕಳೆದುಕೊಂಡರೆ, ಮ್ಯಾಕ್ಸ್‌ವೆಲ್‌ ಗೋಲ್ಡನ್‌ ಡಕ್‌ ಗಳಿಸಿ ತಂಡವನ್ನು ಇಕ್ಕಟ್ಟಿಗೆ ಸಿಲುಕಿಸಿದರು. ಬಹು ನಿರೀಕ್ಷೆಯ ಕ್ಯಾಮರಾನ್‌ ಗ್ರೀನ್‌ ಆಟ 18 ರನ್ನಿಗೇ ಮುಗಿಯಿತು.

ಆದರೆ ಯಾರ ಮೇಲೆ ಅತಿಯಾದ ನಿರೀಕ್ಷೆ ಇರಲಿಲ್ಲವೋ, ಅವರೇ ತಂಡದ ನೆರವಿಗೆ ನಿಂತದ್ದು ವಿಶೇಷ. ಕೊನೆಯ ಐಪಿಎಲ್‌ ಆಡುವ ಸುಳಿವು ನೀಡಿರುವ ದಿನೇಶ್‌ ಕಾರ್ತಿಕ್‌ ಮತ್ತು ಅನುಜ್‌ ರಾವತ್‌ ಅಂತಿಮ 8 ಓವರ್‌ಗಳಲ್ಲಿ ಕ್ರೀಸ್‌ ಆಕ್ರಮಿಸಿಕೊಂಡ ಕಾರಣ ತಂಡದ ಮೊತ್ತ 170ರ ಗಡಿ ದಾಟಿತು. 78ಕ್ಕೆ 5 ವಿಕೆಟ್‌ ಕಳೆದುಕೊಂಡ ತಂಡವನ್ನು ಇವರಿಬ್ಬರು ಹೋರಾಟಕ್ಕೆ ಅಣಿಗೊಳಿಸಿದ್ದರು.

Advertisement

ಹಳಿ ತಪ್ಪಿದ ಬೌಲಿಂಗ್‌
ಇದು ಉಳಿಸಿಕೊಳ್ಳಬಹುದಾದ ಮೊತ್ತವೇ ಆಗಿತ್ತು. ಆದರೆ ಆರ್‌ಸಿಬಿ ಬೌಲಿಂಗ್‌ ಹಳಿ ತಪ್ಪಿತು. ಮುಖ್ಯವಾಗಿ ಅಲ್ಜಾರಿ ಜೋಸೆಫ್ ಮೇಲಿರಿಸಿದ ನಂಬಿಕೆ ಹುಸಿಯಾಯಿತು. ಸಿರಾಜ್‌ ಪರಿಣಾಮ ಬೀರಲಿಲ್ಲ. ಸ್ಪಿನ್ನರ್ ಮ್ಯಾಜಿಕ್‌ ಮಾಡಲಿಲ್ಲ. ಪರಿಣಾಮ, ಚೆನ್ನೈಯನ್ನು ನಿಯಂತ್ರಿಸಲು ಸಾಧ್ಯವಾಗಲೇ ಇಲ್ಲ.

ಆರ್‌ಸಿಬಿ ಬ್ಯಾಟಿಂಗ್‌ ಕ್ರಮಾಂಕದಲ್ಲಿ ಬದಲಾ ವಣೆ ಕಂಡುಬರಲಿಕ್ಕಿಲ್ಲ. ಆದರೆ ಬೌಲಿಂಗ್‌ ವಿಭಾಗಕ್ಕೆ ಇನ್ನಷ್ಟು ಶಕ್ತಿ ತುಂಬಬೇಕಿದೆ. ಅಲ್ಜಾರಿ ಜೋಸೆಫ್ ಬದಲು ಲಾಕಿ ಫ‌ರ್ಗ್ಯುಸನ್‌ ಆಡುವ ಸಾಧ್ಯತೆ ಇದೆ. ಚೆನ್ನೈ ವಿರುದ್ಧ ಸಿರಾಜ್‌ (9.5), ಜೋಸೆಫ್ (10.3) ಮತ್ತು ದಯಾಳ್‌ (9.3) ಧಾರಾಳಿಯಾಗಿದ್ದರು.

ಹೇಳಿ ಕೇಳಿ ಬೆಂಗಳೂರು ಸ್ಟೇಡಿಯಂ ಚಿಕ್ಕದು. ಬೌಂಡರಿ, ಸಿಕ್ಸರ್‌ ಸರಾಗವಾಗಿ ಬರುತ್ತದೆ. ಇಲ್ಲಿ 27 ಸಲ ಸ್ಕೋರ್‌ ಇನ್ನೂರರ ಗಡಿ ದಾಟಿದೆ. ಮೊದಲ ಇನ್ನಿಂಗ್ಸ್‌ ಸರಾಸರಿ ಮೊತ್ತ 172 ರನ್‌. ಬೌಲರ್‌ಗಳಿಗೆ ಇದೊಂದು ಸವಾಲೇ ಸರಿ.

ಹರ್ಷಲ್‌ ಪಟೇಲ್‌!
ಪಂಜಾಬ್‌ ಜಯದಲ್ಲಿ ಸ್ಯಾಮ್‌ ಕರನ್‌ ಪಾತ್ರ ಮಹತ್ವದ್ದಾಗಿತ್ತು. ಲಿವಿಂಗ್‌ಸ್ಟೋನ್‌ ಕೂಡ ಜವಾಬ್ದಾರಿಯುತ ಆಟವಾಡಿದ್ದರು. ಧವನ್‌, ಬೇರ್‌ಸ್ಟೊ, ಪ್ರಭ್‌ಸಿಮ್ರಾನ್‌ ಇನ್ನಿಂಗ್ಸ್‌ ವಿಸ್ತರಿಸಬೇಕಿದೆ.
ಬೌಲಿಂಗ್‌ ವಿಭಾಗದಲ್ಲಿ ಪಂಜಾಬ್‌ ದೇಶೀಯ ಆಟಗಾರರನ್ನೇ ನೆಚ್ಚಿಕೊಂಡಿದೆ. ಇವರಲ್ಲೊಬ್ಬರು, ಆರ್‌ಸಿಬಿಯಿಂದ ಬೇರ್ಪಟ್ಟ ಹರ್ಷಲ್‌ ಪಟೇಲ್‌!

ಸಂಭಾವ್ಯ ತಂಡಗಳು

ಆರ್‌ಸಿಬಿ: ಫಾ ಡು ಪ್ಲೆಸಿಸ್‌ (ನಾಯಕ), ವಿರಾಟ್‌ ಕೊಹ್ಲಿ, ರಜತ್‌ ಪಾಟಿದಾರ್‌, ಗ್ಲೆನ್‌ ಮ್ಯಾಕ್ಸ್‌ವೆಲ್‌, ಕ್ಯಾಮರಾನ್‌ ಗ್ರೀನ್‌, ದಿನೇಶ್‌ ಕಾರ್ತಿಕ್‌, ಅನುಜ್‌ ರಾವತ್‌, ಕಣ್‌ì ಶರ್ಮ, ಲಾಕಿ ಫ‌ರ್ಗ್ಯುಸನ್‌, ಮಾಯಾಂಕ್‌ ಡಾಗರ್‌, ಮೊಹಮ್ಮದ್‌ ಸಿರಾಜ್‌.

ಪಂಜಾಬ್‌: ಶಿಖರ್‌ ಧವನ್‌ (ನಾಯಕ), ಜಾನಿ ಬೇರ್‌ಸ್ಟೊ, ಸ್ಯಾಮ್‌ ಕರನ್‌, ಲಿಯಮ್‌ ಲಿವಿಂಗ್‌ಸ್ಟೋನ್‌, ಜಿತೇಶ್‌ ಶರ್ಮ, ಶಶಾಂಕ್‌ ಸಿಂಗ್‌, ಹರ್‌ಪ್ರೀತ್‌ ಬ್ರಾರ್‌, ಹರ್ಷಲ್‌ ಪಟೇಲ್‌, ಕಾಗಿಸೊ ರಬಾಡ, ರಾಹುಲ್‌ ಚಹರ್‌, ಅರ್ಷದೀಪ್‌ ಸಿಂಗ್‌.

 

Advertisement

Udayavani is now on Telegram. Click here to join our channel and stay updated with the latest news.

Next