Advertisement
ರವಿವಾರ ಹೈದರಾಬಾದ್‌ನಲ್ಲಿ ನಡೆದ ಬಹು ನಿರೀಕ್ಷೆಯ ಪಂದ್ಯದಲ್ಲಿ ಆತಿಥೇಯ ಪಡೆ ಎಲ್ಲ ವಿಭಾಗಗಳಲ್ಲೂ ಎದುರಾಳಿಯನ್ನು ನೆಲಕ್ಕೆ ಕೆಡವಿತು. ಜಾನಿ ಬೇರ್‌ಸ್ಟೊ, ಡೇವಿಡ್ ವಾರ್ನರ್ ಅವರ ಶತಕದ ಅಬ್ಬರ, ಹರಿದು ಬಂದ ರನ್ ಪ್ರವಾಹ, ದಾಖಲೆ ಮೊತ್ತವನ್ನೆಲ್ಲ ಕಂಡು ದಿಗಿಲುಗೊಂಡ ಆರ್‌ಸಿಬಿ ಚೇಸಿಂಗ್ ಸಾಹಸವನ್ನೇ ಕೈಬಿಟ್ಟಂತೆ ಆಡಿತು. ಸನ್‌ರೈಸರ್ ಎರಡೇ ವಿಕೆಟಿಗೆ 231 ರನ್ ರಾಶಿ ಹಾಕಿದರೆ, ಕೊಹ್ಲಿ ಬಳಗ 19.5 ಓವರ್‌ಗಳಲ್ಲಿ 113ಕ್ಕೆ ಆಲೌಟಾಗಿ 118 ರನ್ನುಗಳ ದೊಡ್ಡ ಸೋಲನ್ನು ಹೊತ್ತುಕೊಂಡಿತು. ಇದು ಆರ್‌ಸಿಬಿಗೆ ಎದುರಾದ ರನ್ ಅಂತರದ 2ನೇ ಅತೀ ದೊಡ್ಡ ಸೋಲು. 2008ರಲ್ಲಿ ಕೆಕೆಆರ್ ವಿರಿದ್ಧ ಬೆಂಗಳೂರಿನಲ್ಲೇ 140 ರನ್ನಿನಿಂದ ಸೋತದ್ದು ದಾಖಲೆ.
ಟಾಸ್ ಸೋತು ಬ್ಯಾಟಿಂಗ್ ಮೊದಲು ಅವಕಾಶ ಪಡೆದ ಹೈದರಾಬಾದ್ ಇದರ ಭರಪೂರ ಲಾಭವೆತ್ತಿತು. ಬೇರ್‌ಸ್ಟೊ-ವಾರ್ನರ್ ಸ್ಪರ್ಧೆಗೆ ಬಿದ್ದವರಂತೆ ರನ್ ಪೇರಿಸುತ್ತ ಹೋದರು. ಆರ್‌ಸಿಬಿ ಆಟಗಾರರನ್ನು ಮೈದಾನದ ತುಂಬ ಅಟ್ಟಾಡಿಸಿ ಮಜಾ ಅನುಭವಿಸತೊಡಗಿದರು. ನೋಡನೋಡುತ್ತಲೇ ರನ್ ಪ್ರವಾಹ ಏರತೊಡಗಿತು. ಬೇರ್‌ಸ್ಟೊ ಮೊದಲ ಐಪಿಎಲ್ ಶತಕ ಬಾರಿಸಿ ಸಂಭ್ರಮಿಸಿದರೆ, ಪ್ರಚಂಡ ಫಾರ್ಮ್ ಮುಂದುವರಿಸಿದ ವಾರ್ನರ್ ಕೊನೆಯ ಓವರ್‌ನಲ್ಲಿ ಸೆಂಚುರಿ ಪೂರ್ತಿಗೊಳಿಸಿದರು.
Related Articles
Advertisement
ಆರ್‌ಸಿಬಿ ಸೋಲಿನ ಆಟಆರ್ಸಿಬಿ ಯಾವ ಹಂತದಲ್ಲೂ ಗೆಲುವಿನ ಪ್ರಯತ್ನ ಮಾಡಲಿಲ್ಲ. 2ನೇ ಓವರಿನಿಂದ ನಿರಂತರವಾಗಿ ವಿಕೆಟ್‌ಗಳನ್ನು ಉದುರಿಸುತ್ತಲೇ ಹೋಯಿತು. 35 ರನ್ ಆಗುವಷ್ಟರಲ್ಲಿ ಅರ್ಧ ಡಜನ್ ಆಟಗಾರರನ್ನು ಕಳೆದುಕೊಂಡಿತು. ಆರಂಭಿಕನಾಗಿ ಇಳಿದ ಹೈಟ್‌ಮೈರ್, ಕೊಹ್ಲಿ, ಎಬಿಡಿ, ಅಲಿ, ದುಬೆ ಅವರಿಗೆ “ಡಬಲ್ ಫಿಗರ್’ ಕೂಡ ಸಾಧ್ಯವಾಗಲಿಲ್ಲ. 37 ರನ್ ಮಾಡಿದ ಗ್ರ್ಯಾಂಡ್‌ಹೋಮ್ ಅವರದೇ ಹೆಚ್ಚಿನ ಗಳಿಕೆ.
ಅಫ್ಘಾನಿಸ್ಥಾನದ ಆಫ್ಸ್ಪಿನ್ನರ್ ಮೊಹಮ್ಮದ್ ನಬಿ 11ಕ್ಕೆ 4, ಸಂದೀಪ್ ಶರ್ಮ 19ಕ್ಕೆ 3 ವಿಕೆಟ್ ಕಿತ್ತು ಬೆಂಗಳೂರನ್ನು ಸುಲಭದಲ್ಲಿ ಉರುಳಿಸಿದರು. ದಾಖಲೆಗಳ ಸುರಿಮಳೆ ಟಿ20 ಇತಿಹಾಸದಲ್ಲಿ 4ನೇ ಸಲ, ಐಪಿಎಲ್‌ನಲ್ಲಿ 2ನೇ ಸಲ ಇನ್ನಿಂಗ್ಸ್ ಒಂದರಲ್ಲಿ ಇಬ್ಬರಿಂದ ಶತಕ ದಾಖಲಾಯಿತು. ಗುಜರಾತ್ ಲಯನ್ಸ್ ಎದುರಿನ 2016ರ ಬೆಂಗಳೂರು ಪಂದ್ಯದಲ್ಲಿ ಕೊಹ್ಲಿ ಮತ್ತು ಎಬಿಡಿ ಮೊದಲ ಸಲ ಈ ಸಾಧನೆಗೈದಿದ್ದರು. ವಾರ್ನರ್-ಬೇರ್‌ಸ್ಟೊ ಮೊದಲ ವಿಕೆಟಿಗೆ ಅತ್ಯಧಿಕ ರನ್ ಪೇರಿಸಿ ಐಪಿಎಲ್ ದಾಖಲೆ ಬರೆದರು (185). ಗುಜರಾತ್ ಲಯನ್ಸ್ ಎದುರಿನ 2017ರ ಪಂದ್ಯದಲ್ಲಿ ಕೆಕೆಆರ್‌ನ ಗಂಭೀರ್-ಲಿನ್ ಅಜೇಯ 184 ರನ್ ಬಾರಿಸಿದ ದಾಖಲೆ ಪತನಗೊಂಡಿತು. ವಾರ್ನರ್-ಬೇರ್‌ಸ್ಟೊ ಹೈದರಾಬಾದ್ ಪರ ಮೊದಲ ವಿಕೆಟಿಗೆ ಅತ್ಯಧಿಕ ರನ್ ಪೇರಿಸಿದರು (185). ಕೆಕೆಆರ್ ವಿರುದ್ಧದ 2017ರ ಪಂದ್ಯದಲ್ಲಿ ವಾರ್ನರ್-ಧವನ್ 138 ರನ್ ಒಟ್ಟುಗೂಡಿಸಿದ್ದು ಹಿಂದಿನ ದಾಖಲೆ. ಸನ್‌ರೈಸರ್ ಹೈದರಾಬಾದ್ ಐಪಿಎಲ್‌ನಲ್ಲಿ ತನ್ನ ಸರ್ವಾಧಿಕ ಸ್ಕೋರ್ ದಾಖಲಿಸಿತು (2ಕ್ಕೆ 231). 2017ರಲ್ಲಿ ಕೆಕೆಆರ್ ವಿರುದ್ಧ ಇದೇ ಅಂಗಳದಲ್ಲಿ 209 ರನ್ ಹೊಡೆದದ್ದು ಅತ್ಯಧಿಕ ಮೊತ್ತವಾಗಿತ್ತು. ಆರ್‌ಸಿಬಿ ವಿರುದ್ಧ ತಂಡವೊಂದು 2ನೇ ಅತ್ಯಧಿಕ ರನ್ ಪೇರಿಸಿತು. 2011ರ ಧರ್ಮಶಾಲಾ ಪಂದ್ಯದಲ್ಲಿ ಪಂಜಾಬ್ 2ಕ್ಕೆ 232 ರನ್ ಗಳಿಸಿದ್ದು ದಾಖಲೆ. ವಾರ್ನರ್-ಬೇರ್‌ಸ್ಟೊ ಐಪಿಎಲ್‌ನಲ್ಲಿ ಮೊದಲ ವಿಕೆಟಿಗೆ ಸತತ 3 ಶತಕದ ಜತೆಯಾಟ ದಾಖಲಿಸಿದ ಮೊದಲ ಜೋಡಿ ಎನಿಸಿತು. ಹಿಂದಿನ ಪಂದ್ಯಗಳಲ್ಲಿ ಕೆಕೆಆರ್ ವಿರುದ್ಧ 118, ರಾಜಸ್ಥಾನ್ ವಿರುದ್ಧ 110 ರನ್ ಪೇರಿಸಿದ್ದರು. ಜಾನಿ ಬೇರ್‌ಸ್ಟೊ ಐಪಿಎಲ್‌ನಲ್ಲಿ ಮೊದಲ ಶತಕ ಹೊಡೆದರು.
ವಾರ್ನರ್ ಐಪಿಎಲ್‌ನಲ್ಲಿ 4ನೇ ಶತಕ ಹೊಡೆದು ಜಂಟಿ 2ನೇ ಸ್ಥಾನ ಅಲಂಕರಿಸಿದರು. ಕೊಹ್ಲಿ, ವಾಟ್ಸನ್ ಕೂಡ 4 ಶತಕ ಬಾರಿಸಿದ್ದಾರೆ. 6 ಸೆಂಚುರಿ ಹೊಡೆದ ಗೇಲ್ ಅಗ್ರಸ್ಥಾನಿಯಾಗಿದ್ದಾರೆ. ಹೈದಾರಾಬಾದ್ ಪ್ರಸಕ್ತ ಋತುವಿನ ಮೂರೂ ಪಂದ್ಯಗಳ ಪವರ್ ಪ್ಲೇ ಅವಧಿಯಲ್ಲಿ 50 ಪ್ಲಸ್ ರನ್ ಗಳಿಸಿತು (54, 69 ಮತ್ತು 59 ರನ್). ಆರ್‌ಸಿಬಿಯ ಪ್ರಯಾಸ್ ರಾಯ್ ಬರ್ಮನ್ ಐಪಿಎಲ್ ಆಡಿದ ಅತೀ ಕಿರಿಯ ಆಟಗಾರನೆನಿಸಿದರು (16 ವರ್ಷ, 157 ದಿನ). ಪಂಜಾಬ್‌ನ ಮುಜೀಬ್ ಉರ್ ರೆಹಮಾನ್ ಕಳೆದ ಋತುವಿನಲ್ಲಿ 17 ವರ್ಷ, 11 ದಿನದಲ್ಲಿ ಆಡಿದ್ದು ದಾಖಲೆಯಾಗಿತ್ತು. ಸ್ಕೋರ್‌ಪಟ್ಟಿ
ಸನ್‌ರೈಸರ್ ಹೈದರಾಬಾದ್
ಜಾನಿ ಬೇರ್‌ಸ್ಟೊ ಸಿ ಯಾದವ್ ಬಿ ಚಾಹಲ್ 114
ಡೇವಿಡ್ ವಾರ್ನರ್ ಔಟಾಗದೆ 100
ವಿಜಯ್ ಶಂಕರ್ ರನೌಟ್ 9
ಯೂಸುಫ್ ಪಠಾಣ್ ಔಟಾಗದೆ 6
ಇತರ 2
ಒಟ್ಟು (20 ಓವರ್‌ಗಳಲ್ಲಿ 2 ವಿಕೆಟಿಗೆ) 231
ವಿಕೆಟ್ ಪತನ: 1-185, 2-202.
ಬೌಲಿಂಗ್:
ಮೊಯಿನ್ ಅಲಿ 3-0-29-0
ಉಮೇಶ್ ಯಾದವ್ 4-0-47-0
ಯಜುವೇಂದ್ರ ಚಾಹಲ್ 4-0-44-1
ಮೊಹಮ್ಮದ್ ಸಿರಾಜ್ 4-0-38-0
ಪ್ರಯಾಸ್ ಬರ್ಮನ್ 4-0-56-0
ಕಾಲಿನ್ ಡಿ ಗ್ರ್ಯಾಂಡ್‌ಹೋಮ್ 1-0-16-0
ರಾಯಲ್ ಚಾಲೆಂಜರ್ ಬೆಂಗಳೂರು
ಪಾರ್ಥಿವ್ ಪಟೇಲ್ ಸಿ ಪಾಂಡೆ ಬಿ ನಬಿ 11
ಶಿಮ್ರನ್ ಹೆಟ್‌ಮೈರ್ ಸ್ಟಂಪ್ಡ್ ಬೇರ್‌ಸ್ಟೊ ಬಿ ನಬಿ 9
ವಿರಾಟ್ ಕೊಹ್ಲಿ ಸಿ ವಾರ್ನರ್ ಬಿ ಸಂದೀಪ್ 3
ಎಬಿ ಡಿ ವಿಲಿಯರ್ ಬಿ ನಬಿ 1
ಮೊಯಿನ್ ಅಲಿ ರನೌಟ್ 2
ಶಿವಂ ದುಬೆ ಸಿ ಹೂಡಾ ಬಿ ನಬಿ 5
ಸಿ. ಗ್ರ್ಯಾಂಡ್‌ಹೋಮ್ ರನೌಟ್ 37
ಪ್ರಯಾಸ್ ಬರ್ಮನ್ ಸಿ ಹೂಡಾ ಬಿ ಸಂದೀಪ್ 19
ಉಮೇಶ್ ಯಾದವ್ ರನೌಟ್ 14
ಮೊಹಮ್ಮದ್ ಸಿರಾಜ್ ಔಟಾಗದೆ 3
ಯಜುವೇಂದ್ರ ಚಾಹಲ್ ಸಿ ಹೂಡಾ ಬಿ ಸಂದೀಪ್ 1
ಇತರ 8
ಒಟ್ಟು (19.5 ಓವರ್‌ಗಳಲ್ಲಿ ಆಲೌಟ್) 113
ವಿಕೆಟ್ ಪತನ: 1-13, 2-20, 3-22, 4-30, 5-30, 6-35, 7-86, 8-103, 9-109.
ಬೌಲಿಂಗ್:
ಭುವನೇಶ್ವರ್ ಕುಮಾರ್ 3-0-23-0
ಮೊಹಮ್ಮದ್ ನಬಿ 4-0-11-4
ಸಂದೀಪ್ ಶರ್ಮ 3.5-0-19-3
ಸಿದ್ಧಾರ್ಥ್ ಕೌಲ್ 3-0-16-0
ರಶೀದ್ ಖಾನ್ 4-0-25-0
ವಿಜಯ್ ಶಂಕರ್ 2-0-13-0
ಪಂದ್ಯಶ್ರೇಷ್ಠ: ಜಾನಿ ಬೇರ್‌ಸ್ಟೊ