Advertisement

ಐಪಿಎಲ್‌ ಉದ್ಘಾಟನೆಗೆ ಆರ್‌ಸಿಬಿ-ಚೆನ್ನೈ ಸಜ್ಜು

12:30 AM Mar 23, 2019 | |

ಚೆನ್ನೈ: ಹನ್ನೆರಡನೇ ಐಪಿಎಲ್‌ ಹಣಾಹಣಿಗೆ ಕ್ಷಣಗಣನೆ ಆರಂಭವಾಗಿದೆ. ಚೆನ್ನೈನ “ಎಂ.ಎ. ಚಿದಂಬರಂ ಸ್ಟೇಡಿಯಂ’ನಲ್ಲಿ ಶನಿವಾರ ರಾತ್ರಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್‌ ಕಿಂಗ್ಸ್‌ ಮತ್ತು ರಾಯಲ್‌ ಚಾಲೆಂಜರ್ ಬೆಂಗಳೂರು ತಂಡಗಳು ಸೆಣಸಾಡಲಿವೆ. ಕ್ರಿಕೆಟ್‌ ಪ್ರೇಮಿಗಳು ಧೋನಿ-ಕೊಹ್ಲಿ ತಂಡಗಳ ನಡುವಿನ ಹೋರಾಟವನ್ನು ಕಾಣಲು ತುದಿಗಾಲಲ್ಲಿ ನಿಂತಿದ್ದಾರೆ. ಆರಂಭದ ಪಂದ್ಯವೇ ಹೈ ವೋಲ್ಟೆàಜ್‌ನದ್ದಾಗಿರುವುದರಿಂದ ಈ ಸಲದ ಐಪಿಎಲ್‌ ಜೋಶ್‌ ಒಮ್ಮೆಲೇ ತೀವ್ರಗೊಳ್ಳುವುದರಲ್ಲಿ ಅನುಮಾನವಿಲ್ಲ. 

Advertisement

“ಡ್ಯಾಡ್ಸ್‌ ಆರ್ಮಿ’
2 ವರ್ಷಗಳ ನಿಷೇಧದ ಬಳಿಕ ಕಳೆದ ವರ್ಷ ಐಪಿಎಲ್‌ಗೆ ಮರಳಿದ ಚೆನ್ನೈ 3ನೇ ಸಲ ಟ್ರೋಫಿಯನ್ನೆತ್ತುವ ಮೂಲಕ ಸ್ಮರಣೀಯ ಪುನರಾಗಮನ ಸಾರಿತ್ತು. ತಂಡದಲ್ಲಿ ಬರೀ ಹಿರಿಯ ಆಟಗಾರರೇ ತುಂಬಿದ್ದರಿಂದ ಇದು “ಡ್ಯಾಡ್ಸ್‌ ಆರ್ಮಿ ಸಾಹಸ’ ಎಂದೇ ಸುದ್ದಿಯಾಗಿತ್ತು. ವಯಸ್ಸಿನ ಸರಾಸರಿ ಲೆಕ್ಕಾಚಾರದಲ್ಲಿ ಚೆನ್ನೈ ಉಳಿದೆಲ್ಲ ತಂಡಗಳಿಗಿಂತ ಭಾರೀ ಮುಂದಿದೆ. ಧೋನಿ, ವಾಟ್ಸನ್‌ 37 ವರ್ಷ; ಬ್ರಾವೊ 35 ವರ್ಷ, ಡು ಪ್ಲೆಸಿಸ್‌ 34 ವರ್ಷ, ರಾಯುಡು, ಜಾಧವ್‌ 33 ವರ್ಷದ ಕ್ರಿಕೆಟಿಗರಾಗಿದ್ದಾರೆ. ಇಬ್ಬರು ಸ್ಪಿನ್ನರ್‌ಗಳಂತೂ ತಂಡದ ಹಿರಿಯಣ್ಣಂದಿರೇ ಆಗಿದ್ದಾರೆ. ತಾಹಿರ್‌ಗೆ 39 ವರ್ಷ, ಹರ್ಭಜನ್‌ಗೆ 38 ವರ್ಷ ವಯಸ್ಸಾಗಿದೆ. ರೈನಾ ಸದ್ಯದಲ್ಲೇ 32 ವರ್ಷ ಪೂರ್ತಿಗೊಳಿಸಲಿದ್ದಾರೆ. ಕಣ್‌ì ಶರ್ಮ (31), ಮೋಹಿತ್‌ ಶರ್ಮ (30) ಕೂಡ ಮೂವತ್ತರ ಗಡಿ ದಾಟಿದ್ದಾರೆ. 

ಇಂಥ ಹಿರಿಯ ಆಟಗಾರರನ್ನು ಕಟ್ಟಿಕೊಂಡೂ ಹೊಡಿಬಡಿ ಆಟವಾದ ಟಿ20ಯಲ್ಲಿ ಬೊಂಬಾಟ್‌ ಪ್ರದರ್ಶನ ನೀಡುತ್ತಿರುವುದು ಚೆನ್ನೈ ಪಾಲಿನ ಹೆಗ್ಗಳಿಕೆ. ಕೂಟದಲ್ಲಿ ಅತ್ಯಂತ ಸ್ಥಿರ ಪ್ರದರ್ಶನ ನೀಡುತ್ತಿರುವ ತಂಡವೆಂಬ ಹೆಗ್ಗಳಿಕೆಯನ್ನೂ ಇದು ಹೊಂದಿದೆ. ತವರಿನಲ್ಲೇ ಮೊದಲ ಪಂದ್ಯ ಆಡುತ್ತಿರುವುದರಿಂದ ಸಹಜವಾಗಿಯೇ ಫೇವರಿಟ್‌ ತಂಡವಾಗಿ ಗೋಚರಿಸುತ್ತಿದೆ. ಅಲ್ಲದೇ ಆರ್‌ಸಿಬಿ ವಿರುದ್ಧ ಕಳೆದ ಸತತ 6 ಪಂದ್ಯಗಳನ್ನು ಗೆದ್ದ ಹೆಗ್ಗಳಿಕೆಯನ್ನೂ ಧೋನಿ ಪಡೆ ಹೊಂದಿದೆ.

ನತದೃಷ್ಟ ಆರ್‌ಸಿಬಿ
ರಾಯಲ್‌ ಚಾಲೆಂಜರ್ ಬೆಂಗಳೂರು ಐಪಿಎಲ್‌ನ ನತದೃಷ್ಟ ತಂಡಗಳಲ್ಲೊಂದು. ಈವರೆಗೆ 3 ಸಲ ಫೈನಲ್‌ ಪ್ರವೇಶಿಸಿದರೂ ಒಮ್ಮೆಯೂ ಟ್ರೋಫಿ ಎತ್ತಲು ಸಾಧ್ಯವಾಗಿಲ್ಲ. ಗೇಲ್‌, ಎಬಿಡಿ, ಕೊಹ್ಲಿ ಅವರಂಥ ಘಟಾನುಘಟಿ ಬ್ಯಾಟ್ಸ್‌ಮನ್‌ಗಳನ್ನು ಹೊಂದಿಯೂ ಐಪಿಎಲ್‌ ಪ್ರಶಸ್ತಿ ಮರೀಚಿಕೆಯೇ ಆಗಿ ಉಳಿದಿದೆ. ಅದರಲ್ಲೂ ಚೆನ್ನೈ ವಿರುದ್ಧದ ದಾಖಲೆಯಂತೂ ತೀರಾ ಕಳಪೆ. 2014ರ ಬಳಿಕ ಆಡಿದ ಸತತ 6 ಪಂದ್ಯಗಳಲ್ಲೂ ಆರ್‌ಸಿಬಿ ಚೆನ್ನೈಗೆ ಶರಣಾಗಿದೆ. ಈ ಸೋಲಿನ ಸರಪಳಿಯನ್ನು ಕಡಿದುಕೊಳ್ಳಲು ಕೊಹ್ಲಿ ಪಡೆಗೆ ಸಾಧ್ಯವೇ ಎಂಬುದು ಉದ್ಘಾಟನಾ ಪಂದ್ಯದ ಕುತೂಹಲ. ಈಗ ಗೇಲ್‌ ಇಲ್ಲದಿದ್ದರೂ ತಂಡದ ಸಾಮರ್ಥ್ಯವೇನೂ ಕುಗ್ಗಿಲ್ಲ. ಕೆರಿಬಿಯನ್‌ನವರೇ ಆದ ಬಿಗ್‌ ಹಿಟ್ಟರ್‌ ಶಿಮ್ರನ್‌ ಹೆಟ್‌ಮೈರ್‌ ಮೇಲೆ ಆರ್‌ಸಿಬಿ ಭಾರೀ ನಂಬಿಕೆ ಇರಿಸಿದೆ. ಹೆಟ್‌ಮೈರ್‌ ಇದೇ ಮೊದಲ ಸಲ ಐಪಿಎಲ್‌ ಆಡುತ್ತಿದ್ದಾರೆ. ಬೌಲಿಂಗ್‌ ವಿಭಾಗದಲ್ಲಿ ಚಾಹಲ್‌ ಟ್ರಂಪ್‌ಕಾರ್ಡ್‌ ಆಗುವ ಸಾಧ್ಯತೆ ಇದೆ.

ಆರ್‌ಸಿಬಿಯಲ್ಲಿ ಏಕೈಕ ಕನ್ನಡಿಗ!
ಕರ್ನಾಟಕದ ತಂಡವಾಗಿದ್ದುಕೊಂಡೂ ಆರ್‌ಸಿಬಿ ಕರ್ನಾಟಕದ ಆಟಗಾರರನ್ನು ಸೆಳೆಯಲು ವಿಫ‌ಲವಾಗಿರುವುದೊಂದು ವಿಪರ್ಯಾಸ. ಈ ಕಾರಣಕ್ಕಾಗಿ ಆರ್‌ಸಿಬಿ ನಿಧಾನವಾಗಿ ಕರ್ನಾಟಕದ ಅಭಿಮಾನಿಗಳಿಂದ ವಿಮುಖವಾಗುತ್ತಿದೆ. ರಾಹುಲ್‌, ಪಾಂಡೆ, ಅಗರ್ವಾಲ್‌, ಗೋಪಾಲ್‌, ಪ್ರಸಿದ್ಧ್ ಕೃಷ್ಣ, ನಾಯರ್‌, ಕಾರಿಯಪ್ಪ, ಬಿನ್ನಿ, ಕೆ. ಗೌತಮ್‌ ಮೊದಲಾದವರೆಲ್ಲ ಬೇರೆ ಬೇರೆ ತಂಡಗಳಲ್ಲಿ ಆಡುತ್ತಿದ್ದಾರೆ. ಆರ್‌ಸಿಬಿಯಲ್ಲಿರುವ ರಾಜ್ಯದ ಏಕೈಕ ಆಟಗಾರನೆಂದರೆ ದೇವದತ್ತ ಪಡಿಕ್ಕಲ್‌.

Advertisement

ಅಂಕಿಅಂಶ
ಚೆನ್ನೈ-ಆರ್‌ಸಿಬಿ ಈವರೆಗೆ 23 ಪಂದ್ಯಗಳ ನ್ನಾಡಿವೆ. ಚೆನ್ನೈ 15ರಲ್ಲಿ, ಆರ್‌ಸಿಬಿ 7ರಲ್ಲಿ ಜಯ ಸಾಧಿಸಿವೆ. ಒಂದು ಪಂದ್ಯ ರದ್ದುಗೊಂಡಿದೆ.

ಚೆನ್ನೈ ವಿರುದ್ಧ ಆರ್‌ಸಿಬಿ ಕೊನೆಯ ಜಯ ಸಾಧಿಸಿದ್ದು 2014ರಲ್ಲಿ. ಅನಂತರ ಆಡಿದ ಎಲ್ಲ 6 ಪಂದ್ಯಗಳಲ್ಲೂ ಆರ್‌ಸಿಬಿ ಸೋಲನು ಭವಿಸಿದೆ. ಇದರಲ್ಲಿ 3 ಸೋಲುಗಳು ಬೆಂಗಳೂರಿನಲ್ಲೇ ಎದುರಾಗಿವೆ. 

ಸಂಭಾವ್ಯ ತಂಡಗಳು 
ಆರ್‌ಸಿಬಿ: ಮೊಯಿನ್‌ ಅಲಿ, ಪಾರ್ಥಿವ್‌ ಪಟೇಲ್‌, ವಿರಾಟ್‌ ಕೊಹ್ಲಿ (ನಾಯಕ), ಎಬಿ ಡಿ ವಿಲಿಯರ್, ಶಿಮ್ರನ್‌ ಹೆಟ್‌ಮೈರ್‌, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ಟಿಮ್‌ ಸೌಥಿ/ಕಾಲಿನ್‌ ಡಿ ಗ್ರ್ಯಾಂಡ್‌ಹೋಮ್‌, ಉಮೇಶ್‌ ಯಾದವ್‌, ಯಜುವೇಂದ್ರ ಚಾಹಲ್‌, ಮೊಹಮ್ಮದ್‌ ಸಿರಾಜ್‌.

ಚೆನ್ನೈ: ಅಂಬಾಟಿ ರಾಯುಡು, ಶೇನ್‌ ವಾಟ್ಸನ್‌, ಸುರೇಶ್‌ ರೈನಾ, ಮಹೇಂದ್ರ ಸಿಂಗ್‌ ಧೋನಿ (ನಾಯಕ), ಸ್ಯಾಮ್‌ ಬಿಲ್ಲಿಂಗ್ಸ್‌, ಕೇದಾರ್‌ ಜಾಧವ್‌, ಡ್ವೇನ್‌ ಬ್ರಾವೊ, ರವೀಂದ್ರ ಜಡೇಜ, ದೀಪಕ್‌ ಚಹರ್‌, ಮೋಹಿತ್‌ ಶರ್ಮ, ಇಮ್ರಾನ್‌ ತಾಹಿರ್‌.

Advertisement

Udayavani is now on Telegram. Click here to join our channel and stay updated with the latest news.

Next