Advertisement
ಕಳೆದ ವರ್ಷದ ರನ್ನರ್ ಅಪ್ ತಂಡ ವಾಗಿರುವ ಆರ್‌ಸಿಬಿ 5 ಪಂದ್ಯಗಳಿಂದ 4 ಸೋಲನುಭವಿಸಿ ಚಿಂತಾಜನಕ ಸ್ಥಿತಿಯಲ್ಲಿದೆ. ತವರಿನ “ಎಂ. ಚಿನ್ನಸ್ವಾಮಿ ಸ್ಟೇಡಿಯಂ’ನಲ್ಲೂ ಕೊಹ್ಲಿ ಪಡೆಗೆ ಸೋಲಿನ ಉರುಳು ಬಿಗಿಯಲ್ಪಟ್ಟಿರುವುದು ನಿಜಕ್ಕೂ ದುರಂತ. ಇನ್ನೊಂದೆಡೆ ಸುರೇಶ್ ರೈನಾ ನೇತೃತ್ವದ ಗುಜರಾತ್ ಲಯನ್ಸ್‌ನ ಘರ್ಜನೆ ಕೂಡ ಕ್ಷೀಣಗೊಂಡಿದೆ. ಅದು ನಾಲ್ಕರಲ್ಲಿ ಒಂದು ಪಂದ್ಯವನ್ನಷ್ಟೇ ಗೆದ್ದಿದೆ.
ಬೆಂಗಳೂರು ತಂಡದ ಶಕ್ತಿಯೆಂದರೆ ಸ್ಫೋಟಕ ಬ್ಯಾಟಿಂಗ್. ಗೇಲ್, ಕೊಹ್ಲಿ, ಎಬಿಡಿ, ಜಾಧವ್, ವಾಟ್ಸನ್ ಅವರೆಲ್ಲ ಸಿಡಿದರೆ ಎಂಥ ಎದುರಾಳಿಯೂ ಬೆಚ್ಚಿಬೀಳಬೇಕು. ಆದರೆ ಈ ಬಾರಿ ಇವರೆಲ್ಲರ ಬ್ಯಾಟ್ ಮುಷ್ಕರ ಹೂಡಿದೆ. ಸಣ್ಣ ಮೊತ್ತವನ್ನೂ ಬೆನ್ನಟ್ಟಿಕೊಂಡು ಹೋಗುವ ಸಾಮರ್ಥ್ಯ ಆರ್‌ಸಿಬಿಗೆ ಇಲ್ಲವಾಗಿದೆ. ಇದಕ್ಕೆ ಪುಣೆ ಎದುರಿನ ರವಿವಾರ ರಾತ್ರಿಯ ಪಂದ್ಯವೇ ಸಾಕ್ಷಿ.
Related Articles
Advertisement
ವಿರಾಟ್ ಕೊಹ್ಲಿ ಆಗಮನದಿಂದ ಆರ್‌ಸಿಬಿಯ ಸಾಮರ್ಥ್ಯ ಹೆಚ್ಚಲಿದೆ, ತಂಡದ ಮನೋಸ್ಥೈರ ಹೆಚ್ಚಲಿದೆ, ಎದುರಾಳಿಗಳು ಬೆಚ್ಚಿಬೀಳಲಿದ್ದಾರೆ ಎಂದೆಲ್ಲ ಭಾವಿಸಲಾಗಿತ್ತು. ಇದು ಸಹಜವೂ ಆಗಿತ್ತು. ಆದರೆ ಕಳೆದೆರಡು ಪಂದ್ಯಗಳಲ್ಲಿ ಯಾವ ಪವಾಡವೂ ಸಂಭವಿಸಿಲ್ಲ. ಆರ್‌ಸಿಬಿಗೆ ಬೆಂಗಳೂರಿನಲ್ಲೇ ಮುಂಬೈ ಮತ್ತು ಪುಣೆ ಬಿಸಿ ಮುಟ್ಟಿಸಿವೆ.
ಬೆಂಗಳೂರು ತಂಡ ಈವರೆಗೆ 2 ಪಂದ್ಯಗಳನ್ನು ತವರಿನಾಚೆಯ ಅಂಗಳದಲ್ಲಿ ಆಡಿದ್ದು, ಎರಡರಲ್ಲೂ ಲಾಗ ಹಾಕಿದೆ. ಈ ಸೋಲು ಎದುರಾದದ್ದು ಹೈದರಾಬಾದ್ ಮತ್ತು ಇಂದೋರ್‌ನಲ್ಲಿ. ಇನ್ನು ರಾಜ್‌ಕೋಟ್‌ನಲ್ಲಿ ಏನು ಕಾದಿದೆಯೋ ಎಂಬ ಆತಂಕ ಸಹಜವಾದದ್ದೇ.
ಎಂದಿನಂತೆ ಬೌಲಿಂಗ್ ಬಡತನದಲ್ಲಿರುವ ರಾಯಲ್ ಚಾಲೆಂಜರ್ ಬ್ಯಾಟಿಂಗ್ ಮೂಲಕವೇ ತನ್ನ ತಾಕತ್ತನ್ನು ಪರಿಚಯಿಸ ಬೇಕಾದುದು ಅನಿವಾರ್ಯ ಎಂಬ ಸ್ಥಿತಿ ಈ ವರ್ಷವೂ ಮುಂದುವರಿದಿತ್ತು. ಆದರೆ ಈ 10ನೇ ಐಪಿಎಲ್‌ನಲ್ಲಿ ಬ್ಯಾಟಿಂಗ್ ಬರಗಾಲ ಎನ್ನುವುದು ಈ ಕರ್ನಾಟಕದ ತಂಡದ ಮೇಲೆ ಮುರಕೊಂಡು ಬಿದ್ದಿದೆ.
ಗುಜರಾತ್ ಕೂಡ ಥಂಡಾ!ಗುಜರಾತ್ ಕೂಡ ಸ್ಫೋಟಕ ಬ್ಯಾಟ್ಸ್‌ಮನ್‌ಗಳನ್ನು ಹೊಂದಿರುವ ತಂಡ. ಮೆಕಲಮ್, ರಾಯ್, ಸ್ಮಿತ್, ಫಿಂಚ್, ರೈನಾ, ಕಾರ್ತಿಕ್ ಅವರಲ್ಲಿ ಇಬ್ಬರು ಕ್ರೀಸಿಗೆ ಕಚ್ಚಿಕೊಂಡು ಆಡಿ ದರೂ ಎದುರಾಳಿ ಬೌಲಿಂಗ್ ಪುಡಿ ಪುಡಿಗೊಳ್ಳುತ್ತದೆ. ಆದರೆ ಈವರೆಗೆ ಹಾಗಾಗಲಿಲ್ಲ ಎಂಬುದು ಗುಜರಾತ್ ತಂಡದ ಸಂಕಟವನ್ನು ಸಾರುತ್ತದೆ. ಇತ್ತಂಡಗಳಲ್ಲೂ ಹ್ಯಾಟ್ರಿಕ್ ಹೀರೋಗಳಿದ್ದಾರೆ ಎಂಬುದನ್ನು ಬಿಟ್ಟರೆ ಆರ್‌ಸಿಬಿ-ಗುಜರಾತ್ ಬೌಲಿಂಗ್‌ನಲ್ಲಿ ಯಾವುದೇ ಮೊನಚಿಲ್ಲ. ಬೌಲಿಂಗ್ ಮೂಲಕವೇ ಮ್ಯಾಚ್ ಗೆಲ್ಲುವುದಾದರೆ ರವಿವಾರ ರಾತ್ರಿ ಮುಂಬೈ ವಿರುದ್ಧ ಇದಕ್ಕೆ ಒಳ್ಳೆಯ ಅವಕಾಶವಿತ್ತು. ಆದರೆ ಇದನ್ನೂ ಗುಜರಾತ್ ಕಳೆದುಕೊಂಡಿದೆ. ಮುಂದೇನೋ ಎಂಬ ಪ್ರಶ್ನೆಗೆ ಮಂಗಳವಾರ ರಾತ್ರಿ ಉತ್ತರ ಲಭಿಸಲಿದೆ.