Advertisement

ಐಪಿಎಲ್‌: ರಾಜಸ್ಥಾನ್‌ ರಾಯಲ್ಸ್‌ ವಿರುದ್ಧ ಆರ್‌ಸಿಬಿಗೆ ರೋಚಕ ಜಯ

11:43 PM Apr 05, 2022 | Team Udayavani |

ಮುಂಬೈ: ಮಂಗಳವಾರ ನಡೆದ ಐಪಿಎಲ್‌ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಎದುರಾಳಿ ರಾಜಸ್ಥಾನ್‌ ರಾಯಲ್ಸ್‌ ಎದುರು ರೋಚಕ ಜಯ ಸಾಧಿಸಿದೆ.

Advertisement

ಅಲ್ಲಿಗೆ ಫಾ ಡು ಪ್ಲೆಸಿಸ್‌ ಪಡೆ ಆಡಿದ ಮೂರು ಪಂದ್ಯಗಳಲ್ಲಿ ಸತತ ಎರಡನೇ ಜಯ ಸಾಧಿಸಿದೆ.

ಮೊದಲು ಬ್ಯಾಟ್‌ ಮಾಡಿದ ರಾಜಸ್ಥಾನ್‌ ರಾಯಲ್ಸ್‌ 20 ಓವರ್‌ಗಳಲ್ಲಿ 3 ವಿಕೆಟಿಗೆ 169 ರನ್ನುಗಳ ಉತ್ತಮ ಮೊತ್ತ ಪೇರಿಸಿತು. ಇದನ್ನು ಬೆನ್ನತ್ತಿದ್ದ ಬೆಂಗಳೂರು 19.1 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 173 ರನ್‌ ಗಳಿಸಿತು.

ಬೆಂಗಳೂರಿನ ರನ್‌ ಬೆನ್ನತ್ತುವ ಹೋರಾಟದಲ್ಲಿ ಭರ್ಜರಿ ಹೋರಾಟ ಸಂಘಟಿಸಿದ್ದು ಶಹಬಾಜ್‌ ಅಹ್ಮದ್‌ (45 ರನ್‌, 26 ಎಸೆತ, 4 ಬೌಂಡರಿ, 3 ಸಿಕ್ಸರ್‌) ಮತ್ತು ದಿನೇಶ್‌ ಕಾರ್ತಿಕ್‌ (44 ರನ್‌, 23 ಎಸೆತ, 7 ಬೌಂಡರಿ, 1 ಸಿಕ್ಸರ್‌). ಈ ಇಬ್ಬರೂ ತಂಡದ ಗೆಲುವನ್ನು ಖಾತ್ರಿಪಡಿಸಿದರು.

ರಾಜಸ್ಥಾನ್‌ ಪರ ಟ್ರೆಂಟ್‌ ಬೌಲ್ಟ್, ಯಜುವೇಂದ್ರ ಚಹಲ್‌ ಬೌಲಿಂಗ್‌ ಹೋರಾಟ ವ್ಯರ್ಥವಾಯಿತು.

Advertisement

ಮತ್ತೆ ಸಿಡಿದ ಬಟ್ಲರ್‌: ಮೊದಲು ಬ್ಯಾಟಿಂಗ್‌ ಮಾಡಿದ ರಾಜಸ್ಥಾನ್‌ ಪರ ಜೋಸ್‌ ಬಟ್ಲರ್‌, ದೇವದತ್ತ ಪಡಿಕ್ಕಲ್‌ ಮತ್ತು ಕೊನೆಯಲ್ಲಿ ಶಿಮ್ರಾನ್‌ ಹೆಟ್‌ಮೈರ್‌ ಉತ್ತಮ ಆಟವಾಡಿದರು. ನಾಯಕ ಸ್ಯಾಮ್ಸನ್‌ ಔಟಾದ ಬಳಿಕ ರಾಜಸ್ಥಾನದ ರನ್‌ ವೇಗಕ್ಕೆ ಕಡಿವಾಣ ಬಿತ್ತು. ಆಬಳಿಕ ವಿಕೆಟ್‌ ಬೀಳದಿದ್ದರೂ ವೇಗವಾಗಿ ರನ್‌ ಪೇರಿಸಲು ಸಾಧ್ಯವಾಗಲಿಲ್ಲ. ಬೆಂಗಳೂರಿನ ಬೌಲಿಂಗ್‌ ಕೂಡ ಅಷ್ಟೇ ತೀಕ್ಷ್ಣವಾಗಿತ್ತು. ಆದರೆ ಕೊನೆ ಹಂತದಲ್ಲಿ ಬಟ್ಲರ್‌ ಮತ್ತು ಹೆಟ್‌ಮೈರ್‌ ಸಿಡಿದ ಕಾರಣ ರಾಜಸ್ಥಾನದ ಮೊತ್ತ 169 ರನ್‌ವರೆಗೆ ತಲುಪಿತು.

ಇನಿಂಗ್ಸ್‌ ಪೂರ್ತಿ ಆಡಿದ ಬಟ್ಲರ್‌ ಒಟ್ಟಾರೆ 47 ಎಸೆತ ಎದುರಿಸಿ, 6 ಸಿಕ್ಸರ್‌ ನೆರವಿನಿಂದ 70 ರನ್‌ ಗಳಿಸಿ ಅಜೇಯರಾಗಿ ಉಳಿದರು. ಅವರಿಗೆ ಉತ್ತಮ ಬೆಂಬಲ ನೀಡಿದ ಹೆಟ್‌ಮೈರ್‌ 42 ರನ್‌ ಗಳಿಸಿದರು. 31 ಎಸೆತ ಎದುರಿಸಿದ ಅವರು 4 ಬೌಂಡರಿ ಮತ್ತು 2 ಸಿಕ್ಸರ್‌ ಬಾರಿಸಿದರು.

ಮಿಂಚಿದ ಪಡಿಕ್ಕಲ್‌: ತಂಡವು ಎರಡನೇ ಓವರಿನಲ್ಲಿ ಆರಂಭಿಕ ಯಶಸ್ವಿ ಜೈಸ್ವಾಲ್‌ ಅವರ ವಿಕೆಟನ್ನು ಕಳೆದುಕೊಂಡರೂ ಜೋಸ್‌ ಬಟ್ಲರ್‌ ಮತ್ತು ಕರ್ನಾಟಕದ ದೇವದತ್ತ ಪಡಿಕ್ಕಲ್‌ ತಂಡವನ್ನು ಆಧರಿಸುವ ಪ್ರಯತ್ನ ನಡೆಸಿದರು. 10 ಓವರ್‌ ನಿಭಾಯಿಸಿದ ಅವರಿಬ್ಬರು ದ್ವಿತೀಯ ವಿಕೆಟಿಗೆ 70 ರನ್ನುಗಳ ಜತೆಯಾಟದಲ್ಲಿ ಭಾಗಿಯಾಗಿ ತಂಡವನ್ನು ಆರಂಭಿಕ ಆಘಾತದಿಂದ ಪಾರು ಮಾಡಿದರು.

ಜವಾಬ್ದಾರಿಯಿಂದ ಆಡಿದ ಪಡಿಕ್ಕಲ್‌ 29 ಎಸೆತ ಆಡಿ 2 ಬೌಂಡರಿ ಮತ್ತು 2 ಸಿಕ್ಸರ್‌ ನೆರವಿನಿಂದ 37 ರನ್‌ ಹೊಡೆದು ಹರ್ಷಲ್‌ಗೆ ವಿಕೆಟ್‌ ಒಪ್ಪಿಸಿದರು.

ಆಬಳಿಕ ಬಂದ ನಾಯಕ ಸಂಜು ಸ್ಯಾಮ್ಸನ್‌ ಹೆಚ್ಚು ಹೊತ್ತು ನಿಲ್ಲಲು ವಿಫ‌ಲರಾದರು. 8 ಎಸೆತ ಎದುರಿಸಿದ ಅವರು ಕೇವಲ 8 ರನ್‌ ಗಳಿಸಿ ವನಿಂದು ಹಸರಂಗ ಅವರ ಎಸೆತದಲ್ಲಿ ಔಟಾದರು. ನಾಯಕ ಔಟಾದ ಬಳಿಕ ತಂಡದ ರನ್‌ವೇಗಕ್ಕೂ ಕಡಿವಾಣ ಬಿತ್ತು. ಈ ಪಂದ್ಯದಲ್ಲಿ ಇತ್ತಂಡಗಳ ಆಟಗಾರರಲ್ಲಿ ಯಾವುದೇ ಬದಲಾವಣೆಗಳು ಸಂಭವಿಸಲಿಲ್ಲ.

ಸಂಕ್ಷಿಪ್ತ ಸ್ಕೋರ್‌: ರಾಜಸ್ಥಾನ್‌ ರಾಯಲ್ಸ್‌ 20 ಓವರ್‌, 169/3 (ಜೋಸ್‌ ಬಟ್ಲರ್‌ 70, ಶಿಮ್ರಾನ್‌ ಹೆಟ್‌ಮೈರ್‌ 42, ಪಡಿಕ್ಕಲ್‌ 37, ಹರ್ಷಲ್‌ ಪಟೇಲ್‌ 18ಕ್ಕೆ 1).
ಬೆಂಗಳೂರು 19.1 ಓವರ್‌, 173/6 (ಶಹಬಾಜ್‌ ಅಹ್ಮದ್‌ 45, ದಿನೇಶ್‌ ಕಾರ್ತಿಕ್‌ 44, ಯಜುವೇಂದ್ರ ಚಹಲ್‌ 15ಕ್ಕೆ 2).

Advertisement

Udayavani is now on Telegram. Click here to join our channel and stay updated with the latest news.

Next