ಸಂಕಷ್ಟದಿಂದ ಹೊರಬರುತ್ತಿರುವ ಆರ್ಥಿಕತೆಗೆ ವೇಗ ನೀಡುವ ನಿಟ್ಟಿನಲ್ಲಿ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ರೆಪೋ ದರ ಮತ್ತು ರಿವರ್ಸ್ ರೆಪೋ ದರಗಳಲ್ಲಿ ಯಾವುದೇ ಬದಲಾವಣೆ ಮಾಡದಿ ರುವ ತೀರ್ಮಾನವನ್ನು ಕೈಗೊಂಡಿದೆ. ಇದರಿಂದಾಗಿ ಭಿನ್ನ ರೀತಿಯ ಸಾಲಗಳ ಮೇಲಿನ ಬಡ್ಡಿದರ ಕಡಿಮೆಯಾಗುವ ಸಾಧ್ಯತೆ ಸದ್ಯಕ್ಕಂತೂ ಕಾಣಿಸುತ್ತಿಲ್ಲ. ಅಲ್ಲದೆ ಇದರಿಂದಾಗಿ ನಿಶ್ಚಿತ ಠೇವಣಿಗಳ ಮೇಲೆ ಬ್ಯಾಂಕ್‌ಗಳು ನೀಡುತ್ತಿರುವ ಬಡ್ಡಿದರವೂ ಇಳಿಕೆಯಾಗುವ ಸಾಧ್ಯತೆ ತಗ್ಗಿದೆ. ಆರ್‌ಬಿಐ ರೆಪೋ ದರವನ್ನು 4 ಪ್ರತಿಶತ ಹಾಗೂ ರಿವರ್ಸ್ ರೆಪೋ ದರವನ್ನು 3.35 ಪ್ರತಿಶತದವರೆಗೆ ನಿಗದಿ ಗೊಳಿಸಿದೆ. ಇದರಿಂದ ಸ್ಪಷ್ಟವಾಗುವ ಅಂಶವೆಂದರೆ, ಕೇಂದ್ರೀಯ ಬ್ಯಾಂಕ್ ಸದ್ಯಕ್ಕೆ ಯಾವ ಅಪಾಯವನ್ನೂ ಮೈಮೇಲೆ ಎಳೆದು ಕೊಳ್ಳುವಂಥ ಹೆಜ್ಜೆಗಳನ್ನು ಇಡುತ್ತಿಲ್ಲ ಎನ್ನುವುದು. ಪಾಲಿಸಿ ದರಗಳಲ್ಲಿ ಯಾವುದೇ ರೀತಿಯ ಬದಲಾವಣೆ ಆಗದಿರುವ ಕಾರಣ ವಾಣಿಜ್ಯ ಬ್ಯಾಂಕ್‌ಗಳು ಸಹ ಸದ್ಯಕ್ಕೆ ಸಾಲದ ಮೇಲಿನ ಬಡ್ಡಿದರವನ್ನು ತಗ್ಗಿಸುವುದಿಲ್ಲ. ಇದರ ಹೊರತಾಗಿಯೂ ರಿಸರ್ವ್ ಬ್ಯಾಂಕ್‌ನ ಹಣಕಾಸು ನೀತಿ ಸಮಿತಿಯು, ಒಂದು ವೇಳೆ ಅಗತ್ಯ ಎದುರಾದರೆ ರೆಪೋ ಮತ್ತು ರಿವರ್ಸ್ ರೆಪೋ ದರಗಳನ್ನು ಕೆಳಕ್ಕೆ ಇಳಿಸಲೂಬಹುದು ಎನ್ನುವ ಸಂಕೇತವನ್ನಂತೂ ನೀಡಿದೆ.
ಅರ್ಥವ್ಯವಸ್ಥೆಯಲ್ಲಿ ವೇಗ ತರುವುದಕ್ಕಾಗಿ ಸರಕಾರ ಬಜೆಟ್‌ನಲ್ಲಿ ಘೋಷಿಸಿರುವ ಯೋಜನೆಗಳು, ಅನುದಾನಗಳನ್ನು ಈಡೇರಿಸಲು ಬಹಳ ಹಣದ ಅಗತ್ಯ ಎದುರಾಗಲಿದೆ. ಸರಕಾರಕ್ಕೆ ಸಾಲ ಪಡೆಯದೆ ಇವುಗಳನ್ನು ಈಡೇರಿಸುವುದು ಕಷ್ಟವಾಗಲಿದೆ. ಈ ಕಾರಣಕ್ಕಾಗಿಯೇ ಮಾರುಕಟ್ಟೆಯಲ್ಲಿ ಲಿಕ್ವಿಡಿಟಿಯನ್ನು ತರುವುದು ಆರ್‌ಬಿಐಗೆ ಅತ್ಯಗತ್ಯವಾಗಿದೆ. ಮುಂದಿನ ವಿತ್ತ ವರ್ಷದಲ್ಲಿ ದೇಶದ ಜಿಡಿಪಿ ಬೆಳವಣಿಗೆಯು 10.5 ಪ್ರತಿಶತದವರೆಗೂ ಏರಬಹುದು ಎಂಬ ಭರವಸೆಯಲ್ಲಿದೆ ಆರ್‌ಬಿಐ. ಇದರಿಂದ ಸ್ಪಷ್ಟವಾಗುವುದೇನೆಂದರೆ ಈಗ ಮಾರುಕಟ್ಟೆಯಲ್ಲಿ ಮತ್ತೆ ಬೇಡಿಕೆ ಅಧಿಕವಾಗಿದೆ. ಆದರೆ ಬೇಡಿಕೆ, ಬಳಕೆ ಮತ್ತು ಉತ್ಪಾದನೆಯ ಚಕ್ರ ಸರಿಯಾಗಿ ತಿರುಗಲು ಇನ್ನೂ ಬಹಳ ಸಮಯವೇ ಹಿಡಿಯಲಿದೆ ಎನ್ನುವುದೂ ಸ್ಪಷ್ಟ.
ಇನ್ನು ಆರ್‌ಬಿಐ ಮುಂದಿರುವ ಅನೇಕ ಸವಾಲುಗಳಲ್ಲಿ ಬ್ಯಾಂಕಿಂಗ್ ಕ್ಷೇತ್ರವನ್ನು ಬಲಿಷ್ಠಗೊಳಿಸುವುದೂ ಒಂದು. ಈಗಲೂ ದೇಶದ ಅನೇಕ ಬ್ಯಾಂಕ್‌ಗಳು ಅನುತ್ಪಾದಕ ಆಸ್ತಿಯ ಸಮಸ್ಯೆ ಯಿಂದ ಬಳಲುತ್ತಿವೆ. ಈ ಸಮಸ್ಯೆಯನ್ನು ನಿಭಾಯಿಸುವು ದಕ್ಕಾಗಿಯೇ ಸರಕಾರ ಬಜೆಟ್‌ನಲ್ಲಿ ಬ್ಯಾಡ್ ಬ್ಯಾಂಕ್ ಸ್ಥಾಪನೆಯ ಪ್ರಸ್ತಾವನೆಯನ್ನೂ ಇಟ್ಟಿದೆ. ಒಂದು ವೇಳೆ ಈ ಪ್ರಯತ್ನದಿಂದಾಗಿ ಬ್ಯಾಂಕ್‌ಗಳು ಎನ್‌ಪಿಎ ಸಮಸ್ಯೆಯಿಂದ ಹೊರಬರಲು ಯಶಸ್ವಿ ಯಾದರೆ ಅದರಿಂದ ಬಹಳ ಅನುಕೂಲವಾಗಲಿದೆ. ಮುಂದಿನ ದಿನಗಳಲ್ಲಿ ಹಣದುಬ್ಬರದಲ್ಲೂ ಇಳಿಕೆ ಆಗುವ ಸಾಧ್ಯತೆಯ ಬಗ್ಗೆಯೂ ಆರ್‌ಬಿಐ ಹೇಳುತ್ತಿದೆ. ಆದರೆ ಇವೆಲ್ಲವೂ ಉತ್ಪಾದನೆ ಮತ್ತು ಪೂರೈಕೆಯ ಸ್ಥಿತಿ ಹೇಗಿರುತ್ತದೆ ಎನ್ನುವುದರ ಮೇಲೆ ಅವಲಂಬಿತವಾಗಿದೆ. ಅರ್ಥವ್ಯವಸ್ಥೆಯು ಎಲ್ಲಾ ಕೋನಗಳಿಂದಲೂ ಸವಾಲುಗಳನ್ನು ಎದುರಿಸುತ್ತಾ ಸಾಗುತ್ತಿದೆ ಎನ್ನುವುದರಲ್ಲಿ ಸಂದೇಹವಿಲ್ಲ. ಹೀಗಾಗಿಯೇ ಕೇಂದ್ರೀಯ ಬ್ಯಾಂಕ್‌ನ ಈಗಿನ ಸಂತುಲಿತ ನಡೆ ನಿರೀಕ್ಷಿತವೇ ಆಗಿತ್ತು.