Advertisement
ಸಾಲ ನೀಡುವ ಇಂತಹ ಸಂಸ್ಥೆಗಳು ಉಳಿಯುವುದು ಮತ್ತು ಒಟ್ಟಾರೆ ದೇಶದ ಹಣಕಾಸು ಸಂಸ್ಥೆಗಳು ಸುಸ್ಥಿರ ವಾಗಿರಬೇಕಾದರೆ ಇಂತಹ ನಿಯಮ ಅನಿವಾರ್ಯ ಎಂಬುದು ಆರ್‌ಬಿಐ ವಾದ.ಇಲ್ಲಿ ಮುಖ್ಯವಾಗಿ ವೈಯಕ್ತಿಕ ಸಾಲಗಳ ಮೇಲೆಯೇ ಕಣ್ಗಾವಲು. ಏಕೆಂದರೆ ಇವೆಲ್ಲವೂ ನಾನ್ ಸೆಕ್ಯೂರ್ ಲೋನ್ ಅಂದರೆ ಅಡಮಾನ ರಹಿತ ಮತ್ತು ಯಾವುದೇ ರೀತಿಯ ಭದ್ರತೆ ಇಲ್ಲದೆ ಕೇವಲ ಆತನ/ಆಕೆಯ ಕೆಲವೇ ಸಮಯದ ಆರ್ಥಿಕ ವ್ಯವಹಾರಗಳನ್ನು ನಂಬಿಕೊಂಡು ವಿಶ್ವಾಸದ ಮೇಲೆ ನೀಡುವ ಸಾಲಗಳು. ಇಲ್ಲಿ ಪಡೆದ ಸಾಲಗಳನ್ನು ಗ್ರಾಹಕ ಯಾವುದಕ್ಕೆ ಬಳಸುತ್ತಾನೆ ಎಂಬುದು ಸಾಲ ನೀಡಿದವರಿಗೂ ಗೊತ್ತಿರುವುದಿಲ್ಲ. ಆಸ್ತಿಯಾಗಿ (ಮನೆ, ಜಾಗ, ವಾಹನ, ಆಭರಣ) ಪರಿ ವರ್ತಿಸಿದರೆ ಹೆಚ್ಚಿನ ಸಮಸ್ಯೆಯಾಗದು.
ರಿಸ್ಕ್ ವೆಯ್ ಮೊತ್ತವನ್ನು ಏರಿಸಿರುವುದರಿಂದ ಬ್ಯಾಂಕ್ ಮತ್ತು ಬ್ಯಾಂಕೇತರ ಸಂಸ್ಥೆಗಳಿಗೆ ಸಾಲ ನೀಡಲು ಒದಗುವ ನಿಧಿಯ ಪ್ರಮಾಣ ಕಡಿಮೆ ಯಾಗುತ್ತದೆ. ಇದನ್ನು ಸರಿದೂಗಿಸಲು ಬದಲಿ ಮಾರ್ಗ ವಿಲ್ಲದ ಸಂಸ್ಥೆಗಳು ಅನಿವಾರ್ಯವಾಗಿ ಸಾಲದ ಮೇಲಿನ ಬಡ್ಡಿದರವನ್ನು ಏರಿಸಲೇಬೇಕಾಗುತ್ತದೆ. ಆದರೆ ಹೆಚ್ಚಿನ ಬಡ್ಡಿ ಎಂಬುದು ಮತ್ತೆ ಗ್ರಾಹಕರಿಗೆ ಹೊರೆಯಾಗಲಿದೆ ಮಾತ್ರವಲ್ಲದೆ ವೈಯಕ್ತಿಕವಾಗಿ ಖರ್ಚು-ವೆಚ್ಚದ ಲೆಕ್ಕಾಚಾರಗಳು ತಲೆ ಕೆಳಗಾಗಲಿದೆ. ಇದರಿಂದ ಸಾಲ ಪಡೆಯುವವರ ಸಂಖ್ಯೆ ಇಳಿಕೆಯಾಗಬಹುದು. ಇವಿಷ್ಟೇ ಅಲ್ಲದೆ ಬ್ಯಾಂಕ್‌ಗಳು ಸಾಲ ಮರುಪಾವತಿ ಖಾತರಿಪಡಿಸುವುದಕ್ಕಾಗಿ ಗ್ರಾಹಕರಿಗೆ ಹಲವಾರು ನಿರ್ಬಂಧಗಳನ್ನು ವಿಧಿಸಬಹುದು. ಇದರಿಂದ ಸುಲಭವಾಗಿ ಸಾಲ ಪಡೆಯುವುದು ಕಷ್ಟಕರವಾಗಿ ಮಾರುಕಟ್ಟೆಯಲ್ಲಿ ಹಣದ ಹರಿವು ಇಳಿಕೆ ಯಾಗಬಹುದು. ಇದೇ ರೀತಿ ಕ್ರೆಡಿಟ್ ಕಾರ್ಡ್ ಸಾಲದ ಮೇಲೆ ಮಿತಿ ಹೇರುವುದರಿಂದ ಅಲ್ಲೂ ಖರ್ಚು ಮಾಡುವ ಪ್ರಮಾಣದ ಮೇಲೆ ಪ್ರತಿಕೂಲ ಪರಿಣಾಮ ಉಂಟಾಗಲಿದೆ.
Related Articles
ಇನ್ನೊಂದೆಡೆ ಹಣದುಬ್ಬರ ನಿಯಂತ್ರಣದಲ್ಲಿರಿಸಿ ಕೊಳ್ಳಲು ಆರ್‌ಬಿಐ ಶತ ಪ್ರಯತ್ನ ನಡೆಸುತ್ತಿದೆ. ಪ್ರಸ್ತುತ ಹಣದುಬ್ಬರ ಇಳಿಕೆಯ ಹಾದಿಯಲ್ಲಿದ್ದರೂ ಜಾಗತಿಕ ವಿಪ್ಲವಗಳು ಆತಂಕಕಾರಿಯಾಗಿಯೇ ಇರುವುದರಿಂದ ಹಲವು ತಿಂಗಳುಗಳಿಂದ ರೆಪೊ ದರ ಇಳಿಸುವ ಮನಸ್ಸು ಮಾಡಿಲ್ಲ. ಈ ಹೊಸ ನಿಯಮವೂ ಇದಕ್ಕೆ ಪೂರಕ ವಾಗಿಯೇ ಇದೆ. ಜನರಲ್ಲಿ ಕಾಸಿನ ಓಡಾಟಕ್ಕೆ ಇದು ತಡೆ ಮಾಡಿದರೆ ಖರ್ಚು ಮಾಡುವ ಪ್ರಮಾಣ ಕಡಿಮೆಯಾಗಿ ಹಣದುಬ್ಬರ ನಿಯಂತ್ರಣಕ್ಕೂ ನೆರವಾಗಲಿದೆ ಎಂಬುದು ಇನ್ನೊಂದು ಆಲೋಚನೆ.
Advertisement
ಗೃಹ ಸಾಲ, ವಾಹನ ಸಾಲಕ್ಕೆ ತಡೆಯಾಗುವುದೇ?ಇಲ್ಲ. ಆರ್‌ಬಿಐ ಈ ಕುರಿತು ಸ್ಪಷ್ಟವಾಗಿ ತಿಳಿಸಿದೆ. ಗೃಹ ಸಾಲ, ವಾಹನ ಸಾಲ, ಶಿಕ್ಷಣ ಸಾಲ, ಚಿನ್ನಾಭರಣ ಸಾಲಗಳಿಗೆ ಈ ನಿಯಮ ಅನ್ವಯವಾಗುವುದಿಲ್ಲ. ಅದಕ್ಕೆ ಹಿಂದಿರುವ ನಿಯಮವೇ ಅನ್ವಯ. ಈ ರೀತಿಯ ಸಾಲ ನೀಡುವಾಗ ಬ್ಯಾಂಕ್ ಹೆಚ್ಚುವರಿ ಎಚ್ಚರಿಕೆ ವಹಿ ಸುವ ಅಗತ್ಯವಿರುವುದಿಲ್ಲ. ಆದುದರಿಂದ ಈ ವಲಯದ ಗ್ರಾಹಕರ ಮೇಲೆ ಇದು ಪರಿಣಾಮ ಬೀರುವುದಿಲ್ಲ. ಇಎಂಐ ಸುಲಭವಾಗದು
ಆರ್‌ಬಿಐಯ ಈ ಅಂಕುಶ, ನೇರವಾಗಿ ಗೃಹೋಪಯೋಗಿ ವಸ್ತುಗಳನ್ನು ಸುಲಭ ಮತ್ತು ಆಕರ್ಷಕ ಇಎಂಐ (ಸಮಾನ ಮಾಸಿಕ ಕಂತುಗಳಲ್ಲಿ ಸಾಲ ಪಾವತಿ)ಗಳಲ್ಲಿ ಸಾಲ ನೀಡುವ ಬ್ಯಾಂಕ್ ಮತ್ತು ಬ್ಯಾಂಕೇತರ ಸಂಸ್ಥೆಗಳ ಮೇಲೆ ನೇರ ಪರಿಣಾಮ ಬೀಳಲಿದೆ. ಹೊಸ ನಿಯಮ ಜಾರಿಗೊಳಿಸುವುದಾಗಿ ಪ್ರಕಟಿಸಿದ ಕೂಡಲೇ ಇಂತಹ ಸಾಲ ನೀಡುವ ಸಂಸ್ಥೆಗಳ ಷೇರುಗಳು ಸಾಕಷ್ಟು ನಷ್ಟ ಅನುಭವಿಸಿವೆ (ಶುಕ್ರವಾರ ಒಂದೇ ದಿನ ಬ್ಯಾಂಕೆಕ್ಸ್ ಅಂದರೆ ಬ್ಯಾಂಕ್ ಷೇರುಗಳ ಸೂಚ್ಯಂಕ 740. 92 ಅಂಕ ಕುಸಿದಿತ್ತು). ಸ್ಪರ್ಧಾತ್ಮಕ ರೀತಿ ಯಲ್ಲಿ ಸಾಲ ನೀಡುತ್ತಿರುವ ಇಂತಹ ಸಂಸ್ಥೆಗಳು ಇನ್ನು ಹೆಚ್ಚುವರಿ ನಿಧಿ ಮೀಸಲಿರಿಸ ಬೇಕಿರುವುದರಿಂದ ಹೆಚ್ಚು ವರಿ ಬಡ್ಡಿ ವಿಧಿಸುವುದು ಅನಿವಾರ್ಯವಾಗಬಹುದು. ಮುಖ್ಯವಾಗಿ ಮಧ್ಯಮ ಮತ್ತು ಬೃಹತ್ ನಗರಗಳ ಜನತೆ ಡಿಜಿಟಲ್ ವ್ಯವಹಾರ ಚಾಲ್ತಿಗೊಂಡ ಬಳಿಕ ಹೆಚ್ಚಿನ ಗೃಹೋತ್ಪನ್ನ ವಸ್ತುಗಳ ಖರೀದಿಗೆ ಇಂತಹ ವೈಯಕ್ತಿಕ ಸಾಲಗಳನ್ನೇ ಆಶ್ರಯಿಸಿ ಕೊಂಡಿದ್ದಾರೆ. ಮೊಬೈಲ್‌ನಲ್ಲಿಯೇ ವ್ಯವಹಾರಗಳ ದಾಖಲೆ ನೀಡುವ ಮೂಲಕ ಹೆಚ್ಚೆಚ್ಚು ಸಾಲ ಪಡೆಯಲು ಅವಕಾಶ ನೀಡಿರುವುದು ಸುಲಭ ವ್ಯವಹಾರಕ್ಕೆ ರಹದಾರಿಯಾಗಿದೆ. ಆದರೆ ಹೊಸ ನಿಯಮದಿಂದ ಇಲ್ಲಿ ಬಡ್ಡಿಯೂ ಹೆಚ್ಚಾಗಿ, ದಾಖಲೆ ಪತ್ರಗಳ ಅಲೆದಾಟವೂ ಆರಂಭಗೊಂಡು ಗ್ರಾಹಕರಿಗೆ ಕಿರಿಕಿರಿಯಾಗುವ ಸಾಧ್ಯತೆ ಇದೆ. ಆದರೆ ಇದರ ನಡುವೆ ಆರ್ಥಿಕವಾಗಿ ಬಲಾಡ್ಯ ವಾಗಿರುವ ಸಂಸ್ಥೆಗಳು ಹಿಂದಿನಂತೆಯೇ ವ್ಯವಹಾರ ಮುಂದುವರಿಸುವ ಸಾಧ್ಯತೆಯೂ ಇದೆ ಎಂಬ ಅಭಿಪ್ರಾಯ ಕೆಲವು ಆರ್ಥಿಕ ತಜ್ಞರಲ್ಲಿದೆ. ದತ್ತಾಂಶಗಳ ಪ್ರಕಾರ ವರ್ಷದಿಂದ ವರ್ಷಕ್ಕೆ ವೈಯಕ್ತಿಕ ಸಾಲ ಪ್ರಮಾಣ ಶೇ. 20ರಷ್ಟು ಹೆಚ್ಚಾಗುತ್ತಿದೆ. ಇದು ಒಂದು ನಿರ್ದಿಷ್ಟ ಮಾನದಂಡದಿಂದ ತುಂಬಾ ಹೆಚ್ಚಾಗಿದೆ. ಈ ಅಂಕಿ ಒಂದಂಕಿಯಲ್ಲಿದ್ದರೆ ಉತ್ತಮ ಎನ್ನಲಾಗುತ್ತಿದೆ ಯಾದರೂ ಅದು ಕಷ್ಟ ಸಾಧ್ಯ ಎಂಬ ಅಭಿಪ್ರಾಯವಿದೆ. ಒಟ್ಟಾರೆಯಾಗಿ ಯಾವುದೇ ಸಂಸ್ಥೆ ನಷ್ಟದ ಅಪಾಯ ಎದುರಿಸಬಾರದು ಮತ್ತು ದೇಶದ ಆರ್ಥಿಕ ಸ್ಥಿತಿ ಉತ್ತಮವಾಗಿರಲು ಇಂತಹ ಕ್ರಮ ಅನಿವಾರ್ಯ ಎಂಬುದು ಆರ್‌ಬಿಐಯ ಸಮರ್ಥನೆಯಾಗಿದೆ. ಕೆ. ರಾಜೇಶ್ ಮೂಲ್ಕಿ