Advertisement

ಗೃಹ, ವಾಹನ ಸಾಲದ ಇಎಂಐ ಹೊರೆ ಏರಿಕೆ: ಆರ್ ಬಿಐನಿಂದ ಮತ್ತೆ ರೆಪೋ ದರ ಹೆಚ್ಚಳ

10:46 AM Jun 08, 2022 | |

ನವದೆಹಲಿ: ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ (ಜೂನ್ 08) ದ್ವೈಮಾಸಿಕ ಸಾಲ ನೀತಿಯನ್ನು ಪ್ರಕಟಿಸಿದ್ದು, ಸಾಲದ ಮೇಲಿನ ಬಡ್ಡಿ ದರವನ್ನು 50 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಳ ಮಾಡಿದೆ. ಇದರೊಂದಿಗೆ ಕಾರ್ಪೋರೇಟ್ ಮತ್ತು ಗೃಹ ಸಾಲ ಪಡೆದವರಿಗೆ ಇನ್ನಷ್ಟು ಹೊರೆಯಾದಂತಾಗಿದೆ.

Advertisement

ಇದನ್ನೂ ಓದಿ:ಶೇ.41ರಷ್ಟು ಹೆಚ್ಚಳ: ಭಾರತದಲ್ಲಿ 24 ಗಂಟೆಯಲ್ಲಿ 5,233 ಕೋವಿಡ್ ಪ್ರಕರಣ ಪತ್ತೆ

ಆರ್ ಬಿಐ ಪ್ರಕಟಿಸಿರುವ ಸಾಲ ನೀತಿಯಲ್ಲಿ ರೆಪೋ ದರವನ್ನು ಶೇ.4.90ಕ್ಕೆ ಏರಿಕೆ ಮಾಡಿದೆ. ಕಳೆದ ತಿಂಗಳು ಕೂಡಾ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರವನ್ನು 40 ಬೇಸಿಸ್ ಪಾಯಿಂಟ್ಸ್ ಗಳಷ್ಟು ಹೆಚ್ಚಳ ಮಾಡುವ ಮೂಲಕ ಶೇ.4.40ರಷ್ಟು ಏರಿಕೆ ಮಾಡಿತ್ತು. ಇದರೊಂದಿಗೆ ಎರಡು ವರ್ಷಗಳ ಬಳಿಕ ಇದೇ ಮೊದಲ ಬಾರಿಗೆ ರೆಪೋ ದರವನ್ನು ಹೆಚ್ಚಳ ಮಾಡಿದಂತಾಗಿತ್ತು. ಇದೀಗ ಎರಡನೇ ಬಾರಿಯೂ ರೆಪೋ ದರವನ್ನು ಹೆಚ್ಚಳ ಮಾಡಿರುವುದು ಇಎಂಐ ಕಟ್ಟುವವರಿಗೆ ಹೆಚ್ಚಿನ ಹೊರೆಯಾದಂತಾಗಿದೆ.

ಬುಧವಾರ ರೆಪೋ ದರವನ್ನು ಶೇ.4.90ರಷ್ಟು ಹೆಚ್ಚಳ ಮಾಡಿದ್ದರಿಂದ ಗೃಹ ಮತ್ತು ಇತರ ಸಾಲಗಳ ಮಾಸಿಕ ಕಂತಿನಲ್ಲಿ ಮತ್ತಷ್ಟು ಏರಿಕೆಯಾಗಲಿದೆ. ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ನೇತೃತ್ವದ ಹಣಕಾಸು ನೀತಿ ಸಮಿತಿಯು ಸೋಮವಾರದಿಂದ ತನ್ನ ಮೂರು ದಿನಗಳ ಸಭೆಯ ಆರಂಭಿಸಿದ್ದು, ಬುಧವಾರ ಆರ್ ಬಿಐ ತನ್ನ ನಿರ್ಧಾರವನ್ನು ಪ್ರಕಟಿಸಿದೆ.

ಚಿಲ್ಲರೆ ಹಣದುಬ್ಬರ ಪ್ರಮಾಣವು ಹಲವು ಸಮಯಗಳಿಂದ ನಿರ್ವಹಣೆ ಮಾಡಬಹುದು ಎಂದು ಅಂದಾಜಿಸಲಾಗಿದ್ದ ಶೇ.6ರ ಆಸುಪಾಸಿನಲ್ಲಿ ಇತ್ತು. ಆದರೆ ಕಳೆದ ಏಪ್ರಿಲ್ ನಲ್ಲಿ ಅದು ಶೇ.7.79ಕ್ಕೆ ತಲುಪುವ ಮೂಲಕ 8ವರ್ಷದ ಗರಿಷ್ಠ ಮಟ್ಟ ಮುಟ್ಟಿತ್ತು. ಈ ಹಿನ್ನೆಲೆಯಲ್ಲಿ ಆರ್ ಬಿಐ ಆರ್ಥಿಕ ನೀತಿಯ ಮೂಲಕ ಹಣದುಬ್ಬರ ನಿಯಂತ್ರಣಕ್ಕೆ ಮುಂದಾಗಿದೆ ಎಂದು ವರದಿ ವಿವರಿಸಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next