ನವದೆಹಲಿ: ಏಪ್ರಿಲ್ ತಿಂಗಳಿನಲ್ಲಿಯೂ ಭಾರತೀಯ ರಿಸರ್ವ್ ಬ್ಯಾಂಕ್ ರೆಪೋ ದರ ಹೆಚ್ಚಿಸುವ ಸಾಧ್ಯತೆ ಇದೆ ಎಂಬ ಮಾಧ್ಯಮಗಳ ಸುದ್ದಿಯ ನಡುವೆಯೇ ರೆಪೋ ದರದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ ಎಂದು ಆರ್ ಬಿಐ ಗವರ್ನರ್ ಶಕ್ತಿಕಾಂತ್ ದಾಸ್ ಗುರುವಾರ (ಏಪ್ರಿಲ್ 06) ಘೋಷಿಸಿದ್ದಾರೆ.
ಇದನ್ನೂ ಓದಿ:ಕೊನೆಗೂ Congress ಎರಡನೇ ಪಟ್ಟಿ ರಿಲೀಸ್: ಉಡುಪಿ ಸೇರಿ 42 ಕ್ಷೇತ್ರಗಳಿಗೆ ಟಿಕೆಟ್ ಫೈನಲ್
ಹಣಕಾಸು ನೀತಿ ಸಮಿತಿಯ ಮೂರು ದಿನಗಳ ಸಭೆಯಲ್ಲಿ ಶೇ.6.5ರ ರೆಪೋ ದರದಲ್ಲಿ ಯಾವುದೇ ಬದಲಾವಣೆ ಮಾಡದಿರಲು ನಿರ್ಧರಿಸಲಾಗಿದೆ ಎಂದು ಶಕ್ತಿಕಾಂತ್ ದಾಸ್ ತಿಳಿಸಿದ್ದಾರೆ. ಇದರೊಂದಿಗೆ ಗೃಹ, ವಾಹನ ಸಾಲಗಳ ಇಎಂಐ ಪಾವತಿದಾರರಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ.
ದೇಶದಲ್ಲಿನ ಹಣದುಬ್ಬರವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಆರ್ ಬಿಐನ ಹಣಕಾಸು ನೀತಿ ಸಮಿತಿಯು ಕಳೆದ ವರ್ಷ ಮೇ ತಿಂಗಳಿನಿಂದ 2023ರ ಮಾರ್ಚ್ ವರೆಗೆ 250 ಬೇಸಿಸ್ ಪಾಯಿಂಟ್ಸ್ ಗಳಷ್ಟು ಏರಿಕೆ ಮಾಡಿತ್ತು.
ಫೆಬ್ರುವರಿ ತಿಂಗಳಿನಲ್ಲಿ ಚಿಲ್ಲರೆ ಹಣದುಬ್ಬರವು ಶೇ.6.44ಕ್ಕೆ ಏರಿಕೆಯಾಗಿತ್ತು. ಜನವರಿ ತಿಂಗಳಿನಲ್ಲಿ ಶೇ.6.52ರಷ್ಟಿತ್ತು. ಆದರೂ ಭಾರತೀಯ ರಿಸರ್ವ್ ಬ್ಯಾಂಕ್ ಚಿಲ್ಲರೆ ಹಣದುಬ್ಬರ ಶೇ.6ಕ್ಕೆ ತಲುಪುವ ನಿರೀಕ್ಷೆ ಇರಿಸಿಕೊಂಡಿತ್ತು.