ಮುಂಬಯಿ: ನಾಲ್ಕು ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಆರ್.ಬಿ.ಐ. ರೆಪೋ ದರವನ್ನು ಶೇ.0.25ರಷ್ಟು ಹೆಚ್ಚಿಸಿದೆ. ಹೀಗಾಗಿ ವಾಹನ, ಗೃಹ ಸೇರಿದಂತೆ ಎಲ್ಲಾ ರೀತಿಯ ಸಾಲಗಳ ಮೇಲಿನ ಬಡ್ಡಿ ದರದಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ. ಇದರಿಂದಾಗಿ ಸಾಲಗಳ ಮೇಲಿನ ಮಾಸಿಕ ಕಂತಿನ ಮೊತ್ತ ಕೂಡ ಏರಿಕೆಯಾಗಲಿದೆ. ಮುಂಬಯಿಯಲ್ಲಿ ಬುಧವಾರ ನಡೆದ ಆರು ಮಂದಿ ಸದಸ್ಯರಿರುವ ಹಣಕಾಸು ನೀತಿ ನಿರ್ವಹಣಾ ಸಮಿತಿ ಸದಸ್ಯರ ಸಭೆಯಲ್ಲಿ ರೆಪೋ ದರ ಪರಿಷ್ಕರಣೆಗೆ ನಿರ್ಧಾರ ಕೈಗೊಳ್ಳಲಾಗಿದೆ. ಎಲ್ಲಾ ಸದಸ್ಯರೂ ಕೂಡ ರೆಪೋ ದರ ಪರಿಷ್ಕರಣೆಯ ಬಗ್ಗೆ ಒಮ್ಮತದಿಂದ ನಿರ್ಧಾರ ಕೈಗೊಂಡಿದ್ದಾರೆ. 2014ರಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ ಸರಕಾರ ಅಧಿಕಾರಕ್ಕೆ ಏರಿದ ಬಳಿದ ಆರ್.ಬಿ.ಐ. ಮೊದಲ ಬಾರಿಗೆ ರೆಪೋ ದರ ಏರಿಸಿದೆ. ಗಮನಾರ್ಹ ಅಂಶವೆಂದರೆ ಮುಂದಿನ ವರ್ಷ ಲೋಕಸಭೆ ಚುನಾವಣೆಯೂ ನಡೆಯಲಿರುವುದರಿಂದ ಬುಧವಾರದ ನಿರ್ಧಾರ ಕೇಂದ್ರ ಸರಕಾರಕ್ಕೆ ತೊಡಕಾಗಿ ಪರಿಣಮಿಸುವ ಸಾಧ್ಯತೆಗಳೇ ಅಧಿಕ. ಬ್ಯಾಂಕ್ ಗಳಿಂದ ಆರ್.ಬಿ.ಐ. ಪಡೆಯುವ ರಿವರ್ಸ್ ರೆಪೋ ದರವನ್ನೂ ಶೇ.6ಕ್ಕೆ ಏರಿಸಲಾಗಿದೆ. ಕಚ್ಚಾ ತೈಲದ ಬೆಲೆ ಏರಿಕೆಯಿಂದ ಉಂಟಾಗಿರುವ ಹಣದುಬ್ಬರ ಪರಿಸ್ಥಿತಿ ನಿಯಂತ್ರಿಸಲು ಈ ಕ್ರಮ ಕೈಗೊಳ್ಳಲಾಗಿದೆ. ಹಿಂದಿನ ಸಂದರ್ಭಗಳಲ್ಲಿ ಆರು ಬಾರಿ ರೆಪೋ ದರವನ್ನು ಇಳಿಕೆ ಮಾಡಲಾಗಿತ್ತು.
ಏರಿಕೆಯಾಗಿತ್ತು: ಜೂ.4ರಂದು ಎಸ್.ಬಿ.ಐ., ಐ.ಸಿ.ಐ.ಸಿ.ಐ., ಐ.ಡಿ.ಬಿ.ಐ., ಪಂಜಾಬ್ ನ್ಯಾಷನಲ್ ಬ್ಯಾಂಕ್ ಸೇರಿದಂತೆ ಹಲವು ಬ್ಯಾಂಕ್ ಗಳ ಬಡ್ಡಿ ದರವನ್ನು (ಎಂ.ಸಿ.ಎಲ್.ಆರ್.) ಶೇ.0.25ರಷ್ಟು ಹೆಚ್ಚಿಸಿದ್ದವು.
ಹಣದುಬ್ಬರ ಏರಿಕೆ ನಿರೀಕ್ಷೆ: ಪ್ರಸಕ್ತ ಹಣಕಾಸು ವರ್ಷದ ಎಪ್ರಿಲ್ – ಸೆಪ್ಟೆಂಬರ್ ಅವಧಿಯಲ್ಲಿ ಹಣದುಬ್ಬರ ಶೇ.4.6ರಷ್ಟು ವೃದ್ಧಿಯಾಗಬಹುದೆಂದು ಆರ್.ಬಿ.ಐ. ನಿರೀಕ್ಷೆ ಮಾಡಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗಿರುವುದರಿಂದ ಹೀಗಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಸದ್ಯ ಚಿಲ್ಲರೆ ಮಾರುಕಟ್ಟೆ ಕ್ಷೇತ್ರದ ಹಣದುಬ್ಬರ ಶೇ.4.58ರಷ್ಟಿದೆ.
ಜಿಡಿಪಿ ದರ ಯಥಾಸ್ಥಿತಿ: ದೇಶದ ಜಿಡಿಪಿ ಬೆಳವಣಿಗೆ ದರವನ್ನು ಆರ್.ಬಿ.ಐ. ಶೇ.7.4ರಷ್ಟು ಯಥಾ ಸ್ಥಿತಿಯಲ್ಲಿರಿಸಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಹೆಚ್ಚಿನ ಪ್ರಮಾಣದ ಬಂಡವಾಳ ಹೂಡಿಕೆ ಮತ್ತು ಗ್ರಾಹಕರು ಹೆಚ್ಚಿನ ಪ್ರಮಾಣದಲ್ಲಿ ಖರೀದಿ ನಡೆಸಲಿದ್ದಾರೆ ಎಂಬ ನಿರೀಕ್ಷೆಯಿಂದ ಅದನ್ನು ಯಥಾ ಸ್ಥಿತಿಯಲ್ಲಿರಿಸಲಾಗಿದೆ ಎಂದಿದ್ದಾರೆ ಆರ್.ಬಿ.ಐ. ಗವರ್ನರ್ ಡಾ| ಊರ್ಜಿತ್ ಪಟೇಲ್.
ಸೆನ್ಸೆಕ್ಸ್ ಏರಿಕೆ: ಬಡ್ಡಿ ದರ ಏರಿಕೆ ಮಾಡಿದ ನಿರ್ಧಾರದಿಂದಾಗಿ ಬಾಂಬೆ ಸ್ಟಾಕ್ ಎಕ್ಸ್‌ಚೇಂಜ್ ಸೂಚ್ಯಂಕ 276 ಪಾಯಿಂಟ್‌ಗಳಷ್ಟು ಏರಿಕೆಯಾಗಿದೆ. ಹೀಗಾಗಿ ಬುಧವಾರದ ಅಂತ್ಯಕ್ಕೆ ಸೂಚ್ಯಂಕ 35,178.88ರಲ್ಲಿ ಮುಕ್ತಾಯವಾಗಿದೆ. ನಿಫ್ಟಿ ಸೂಚ್ಯಂಕ ಕೂಡ 91.50 ಅಂಕಗಳಷ್ಟು ಏರಿಕೆ ಕಂಡಿದೆ.
ಗೃಹ ಸಾಲಕ್ಕೆ ಅನುಕೂಲ
ಆದ್ಯತೆಯ ವಲಯದ ಸಾಲ ಮಿತಿಯನ್ನು ಭಾರತೀಯ ರಿಸರ್ವ್ ಬ್ಯಾಂಕ್ ಹೆಚ್ಚಿಸಿದ್ದು, ಇದರಿಂದಾಗಿ ಕಡಿಮೆ ವೆಚ್ಚದ ಮನೆಗಳ ಸಾಲದ ಬಡ್ಡಿ ದರ ಇಳಿಕೆಯಾಗುವ ನಿರೀಕ್ಷೆಯಿದೆ. ಆದ್ಯತೆಯ ವಲಯದ ಸಾಲಗಳ ಅರ್ಹತೆಯನ್ನು ನಗರ ಪ್ರದೇಶಗಳಲ್ಲಿ 28 ಲಕ್ಷ ರೂ.ಯಿಂದ 35 ಲಕ್ಷ ರೂ.ಗೆ ಏರಿಸಲಾಗಿದ್ದು, ಇತರ ಭಾಗಗಳಲ್ಲಿ 20 ಲಕ್ಷ ರೂ.ಯಿಂದ 25 ಲಕ್ಷ ರೂ.ಗೆ ಏರಿಸಲಾಗಿದೆ. ಇದು ಗೃಹ ನಿರ್ಮಾಣ ವಲಯಕ್ಕೆ ಉತ್ತೇಜನ ನೀಡಲಿದೆ ಎಂದು ಹಣಕಾಸು ಸೇವೆಗಳ ಕಾರ್ಯದರ್ಶಿ ರಾಜೀವ್ ಕುಮಾರ್ ಹೇಳಿದ್ದಾರೆ. ಆದ್ಯತೆ ವಲಯದ ಸಾಲದ ಅಡಿಯಲ್ಲಿ ನೀಡಲಾಗುವ ಸಾಲಗಳು ಇತರ ಸಾಮಾನ್ಯ ಸಾಲಗಳಿಗಿಂತ ಕಡಿಮೆ ಬಡ್ಡಿ ದರವನ್ನು ಹೊಂದಿರುತ್ತವೆ. ಈ ಮಧ್ಯೆ ದಿವಾಳಿತನ ಕಾಯ್ದೆ 2018ರ ತಿದ್ದುಪಡಿಗೆ ಅಧ್ಯಾದೇಶ ಹೊರಡಿಸಲಾಗಿದ್ದು, ರಿಯಲ್ ಎಸ್ಟೇಟ್ ಕಂಪೆನಿ ದಿವಾಳಿಯಾದರೆ, ಮನೆ ಖರೀದಿಗಾಗಿ ಆ ಕಂಪೆನಿಗೆ ಹಣ ಪಾವತಿ ಮಾಡಿದವರಿಗೆ ಜಪ್ತಿ ಮಾಡಿಕೊಂಡ ಸ್ವತ್ತಿನಲ್ಲಿ ಪಾಲು ನೀಡುವ ಪ್ರಸ್ತಾವನೆಯಿದೆ.
ಮನೆ ನಿರ್ಮಾಣ ಕ್ಷೇತ್ರದಲ್ಲಿ ಈ ದರ ಏರಿಕೆ ಯಾವುದೇ ಪರಿಣಾಮ ಉಂಟುಮಾಡುವುದಿಲ್ಲ. ಆದರೆ ದೀರ್ಘಕಾಲೀನ ಸನ್ನಿವೇಶದಲ್ಲಿ ಬಡ್ಡಿ ದರ ಇಳಿಕೆಗೆ ಆದ್ಯತೆ ನೀಡುತ್ತೇವೆ. ಇತರ ಮಾರುಕಟ್ಟೆಗಳ ಮೇಲೆ ಬಡ್ಡಿ ದರ ಏರಿಕೆ ಪರಿಣಾಮ ಬೀರಲಿದೆ.
– ನಿರಂಜನ್ ಹಿರಾನಂದಾನಿ, ನಾರೆಡ್ಕೊ ರಾಷ್ಟ್ರೀಯ ಅಧ್ಯಕ್ಷ