ಹೊಸದಿಲ್ಲಿ : 2019ರ ಹಣಕಾಸು ವರ್ಷದ ಮೊದಲ ದ್ವೆ„ಮಾಸಿಕ ಹಣಕಾಸು ನೀತಿಯನ್ನು ಇಂದು ಪ್ರಕಟಿಸಿರುವ ಆರ್‌ಬಿಐ ನಿರಂತರ ನಾಲ್ಕನೇ ಬಾರಿಗೆ ತನ್ನ ಬಡ್ಡಿದರಗಳನ್ನು ಯಥಾವತ್ತಾಗಿ ಉಳಿಸಿಕೊಂಡಿದೆ. ಹಾಗಾಗಿ ಬ್ಯಾಂಕ್ ಸಾಲಗಾರರಿಗೆ ಯಾವುದೇ ರಿಲೀಫ್ ಸಿಕ್ಕಿಲ್ಲ.
ಆರ್‌ಬಿಐ ಗವರ್ನರ್ ಊರ್ಜಿತ್ ಪಟೇಲ್ ನೇತೃತ್ವದ ಆರು ಸದಸ್ಯರ ಹಣಕಾಸು ನೀತಿ ಸಮಿತಿಯು ರಿಪೋ ದರವನ್ನು ಈಗಿನ ಶೇ.6ರಲ್ಲೂ, ರಿವರ್ಸ್ ರಿಪೋ ದರವನ್ನು ಈಗಿನ ಶೇ.5.75ರಲ್ಲೂ ಯಥಾವತ್ ಉಳಿಸಿಕೊಳ್ಳಲು ನಿರ್ಧರಿಸಿತು.
ಈ ಬಡ್ಡಿ ದರಗಳನ್ನು ಯಥಾವತ್ ಉಳಿಸಿಕೊಳ್ಳಲು 5-1 ಮತಗಳಲ್ಲಿ ತೀರ್ಮಾನಿಸಲಾಯಿತು. ದೇಶದ ಆರ್ಥಿಕತೆಯು ನಿಧಾನಗತಿಯಲ್ಲಿ ಸಾಗುತ್ತಿರುವುದನ್ನು ಪರಿಗಣಿಸಿ ಅಗತ್ಯ ಬೆಂಬಲ ನೀಡುವ ನಿಟ್ಟಿನಲ್ಲಿ ಬಡ್ಡಿ ದರಗಳನ್ನು ಯಥಾವತ್ ಉಳಿಸಿಕೊಳ್ಳಲು ನಿರ್ಧರಿಸಲಾಯಿತು ಎಂದು ಸಮಿತಿ ಹೇಳಿದೆ.
ಆರ್‌ಬಿಐ ಕಳೆದ ವರ್ಷ ಆಗಸ್ಟ್‌ನಲ್ಲಿ ಶೇ.0.25ರಷ್ಟು ಕಡಿತ ಮಾಡುವ ಮೂಲಕ ರಿಪೋ ದರವನ್ನು ಶೇ.6ಕ್ಕೆ ಇಳಿಸಿತ್ತು. 2015ರಲ್ಲಿ ಅಸಾಮಾನ್ಯ ಕಡಿಮೆ ಹಣದುಬ್ಬರದ ಲಾಭವನ್ನು ಎತ್ತಿಕೊಂಡು ಆರ್‌ಬಿಐ ಒಟ್ಟಾರೆಯಾಗಿ 200 ಮೂಲಾಂಕದಷ್ಟು ಬಡ್ಡಿ ದರ ಕಡಿತ ಮಾಡಿತ್ತು.
2018-19ರ ಸಾಲಿನ ಮೊದಲ ಅರೆ ವರ್ಷದಲ್ಲಿ ಹಣದುಬ್ಬರವು ಶೇ.4.7 – ಶೇ.5.1ರ ಒಳಗೆ ಮತ್ತು ಎರಡನೇ ಅರೆ ವರ್ಷದಲ್ಲಿ ಶೇ.4.4ರ ಹಣದುಬ್ಬರ ಇರುವುದೆಂದು ಆರ್‌ಬಿಐ ತನ್ನ ತಾಜಾ ಹಣಕಾಸು ನೀತಿಯಲ್ಲಿ ಅಂದಾಜಿಸಿದೆ.
ಅಂತೆಯೇ ಜಿಡಿಪಿ 2019ರ ಹಣಕಾಸು ವರ್ಷದಲ್ಲಿ ಶೇ.7.4ಕ್ಕೆ ಹಿಗ್ಗುವುದೆಂದು ಅಂದಾಜಿಸಿದೆ. 2017-18ರಲ್ಲಿ ಜಿಡಿಪಿ ಶೇ.6.6 ರಲ್ಲಿ ದಾಖಲಾಗಿದೆ. ಹಾಲಿ ಹಣಕಾಸು ಸಾಲಿನ ಮೊದಲ ಅರೆ ವರ್ಷದಲ್ಲಿ ಜಿಡಿಪಿ ಶೇ.7.3 -ಶೇ. 7.4ರಲ್ಲೂ ಎರಡನೇ ಅರೆ ವರ್ಷದಲ್ಲಿ ಶೇ.7.3 – ಶೇ.7.6ರಲ್ಲೂ ದಾಖಲಾಗುವ ನಿರೀಕ್ಷೆಯನ್ನು ಆರ್‌ಬಿಐ ಹೊಂದಿರುವುದಾಗಿ ಹಣಕಾಸು ನೀತಿ ಹೇಳಿದೆ.