Advertisement

ಚಿನ್ನದ ಮೌಲ್ಯದ ಶೇ. 90ರಷ್ಟು ಸಾಲ ನೀಡಲು ಆರ್‌ಬಿಐ ಅವಕಾಶ

07:55 PM Aug 06, 2020 | Karthik A |

ಮಣಿಪಾಲ: ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಚಿನ್ನದ ಸಾಲ ನೀಡುವ ಮಾನದಂಡಗಳನ್ನು ಸಡಿಲಗೊಳಿಸಿದೆ.

Advertisement

ಗ್ರಾಹಕರು ಈಗ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಇಡುವ ತಮ್ಮ ಚಿನ್ನಕ್ಕಾಗಿ ದೊಡ್ಡ ಮೊತ್ತದ ಸಾಲವನ್ನು ಪಡೆಯಬಹುದಾಗಿದೆ.

ಈ ಕುರಿತಾಗಿ ಕೆಲವು ನಿರ್ದೇಶನಗಳನ್ನು ಆರ್‌ಬಿಐ ನೀಡಿದೆ. ವಿಶೇಷವಾಗಿ ಕೊರೊನಾ ಸಂಕಷ್ಟದ ಕಾರಣಕ್ಕೆ ನೆರವಾಗುವ ಉದ್ದೇಶದಿಂದ ಈ ಸೌಲಭ್ಯವನ್ನು ಒದಗಿಸುತ್ತಿದೆ.

ಏನಿದು ಹೊಸ ಅವಕಾಶ
ಪ್ರಸ್ತುತ ಅಡಮಾನ ಕ್ರಮದಲ್ಲಿ ಚಿನ್ನದ ಮೌಲ್ಯದ ಶೇ. 75ರ ವರೆಗೆ ಸಾಲ ನೀಡಲಾಗುತ್ತಿದೆ. ಆದರೆ ಇನ್ನು ಮುಂದೆ ಶೇ. 90ರಷ್ಟು ಸಾಲ ಪಡೆಯಬಹುದು. ಮುಂದಿನ ಮಾರ್ಚ್‌ 31ರ ವರೆಗೆ ಈ ಸೌಲಭ್ಯ ಲಭ್ಯವಾಗಲಿದೆ. ಅಂದ ಹಾಗೇ ನೀವು ಶೇ. 90ರಷ್ಟು ಸಾಲ ಪಡೆದರೆ ಬಡ್ಡಿದರವೂ ಹೆಚ್ಚಾಗಲಿದೆ.

ಶೇ. 90 ಅಂದರೆ ಹೇಗೆ?
ಆರ್‌ಬಿಐ ಎಟಿವಿ (ಲೋನ್‌ ಟು ವ್ಯಾಲು)ಯ ಅನುಪಾತವನ್ನು ಹೆಚ್ಚಿಸಿದೆ. ಇದರ ಫ‌ಲವಾಗಿ ಗ್ರಾಹಕರು ಶೇ. 90ರಷ್ಟು ಸಾಲ ಪಡೆಯಬಹುದು. ಉದಾಹರಣೆಗೆ ಪ್ರಸ್ತುತ ಚಾಲ್ತಿಯಲ್ಲಿದ್ದ ಕ್ರಮದಂತೆ, ಹಣಕಾಸು ಸಂಸ್ಥೆಗಳಲ್ಲಿ ಚಿನ್ನದ ಮೌಲ್ಯದ ಶೇ. 75ರಷ್ಟು ಸಾಲವನ್ನು ನೀಡಲಾಗುತ್ತದೆ. ಅಂದರೆ ಇಲ್ಲಿ ನಿಮ್ಮ ಚಿನ್ನದ ಮೌಲ್ಯ 1 ಲಕ್ಷ ಇರಲೇಬೇಕಾಗಿದೆ. ಅಂದರೆ ನೀವು 75,000 ರೂ. ಅನ್ನು ಸಾಲದ ರೂಪದಲ್ಲಿ ಪಡೆದುಕೊಳ್ಳಬಹುದು. ಆದರೆ ಈಗ ಅದರ ಪ್ರಮಾಣವನ್ನು ಹೆಚ್ಚಿಸಲಾಗಿದೆ. ನಿಮ್ಮ ಚಿನ್ನದ ಮೌಲ್ಯ 1 ಲಕ್ಷವಾಗಿದ್ದರೆ ಅದರ ಶೇ. 90 ಅಂದರೆ 90 ಸಾವಿರವನ್ನು ಸಾಲದ ರೂಪದಲ್ಲಿ ಪಡೆಯಲು ಅವಕಾಶ ಕಲ್ಪಿಸಲಾಗಿದೆ.

Advertisement

ಗೋಲ್ಡ್‌ ಲೋನ್‌ ಪ್ರಮಾಣ ಹೆಚ್ಚಳ
ಕೋವಿಡ್‌-19 ಆರಂಭವಾದಾಗಿನಿಮದ ಚಿನ್ನದ ಮೇಲೆ ಸಾಲ ಪಡೆಯುವವರ ಪ್ರಮಾನ ಗಮನಾರ್ಹ ಏರಿಕೆಯಾಗಿದೆ. ಯಾಕೆಂದರೆ ಇದು ಬಹಳ ಬೇಗನೆ ದೊರೆಯುವುದು ಮಾತ್ರವಲ್ಲದೇ ಈ ಸಾಲಗಳು ಸುರಕ್ಷಿತವಾಗಿದೆ. ವೈಯಕ್ತಿಕ ಸಾಲಗಳಿಗೆ ಹೋಲಿಸಿದರೆ ಗೋಲ್ಡ್‌ಲೋನ್‌ನ ಬಡ್ಡಿದರಗಳು ಕಡಿಮೆ. ಚಿನ್ನದ ಬೆಲೆಯಲ್ಲಿನ ಏರಿಕೆಯು ಈ ಸಾಲಗಳ ಬೇಡಿಕೆಯನ್ನು ಹೆಚ್ಚಿಸಿದೆ. ತಮ್ಮಲ್ಲಿರುವ ಚಿನ್ನಕ್ಕೆ ಹೆಚ್ಚಿನ ಸಾಲವನ್ನು ಪಡೆಯಬಹುದು.

ಚಿನ್ನ ದುಬಾರಿ
ದೇಶೀಯ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಈ ವರ್ಷದ ಎಪ್ರಿಲ್‌ನಿಂದ ಚಿನ್ನದ ಬೆಲೆ ಶೇ. 30ರಷ್ಟು ಹೆಚ್ಚಾಗಿದೆ. ಕಳೆದ ಒಂದು ವರ್ಷದಲ್ಲಿ ಚಿನ್ನದ ಬೆಲೆಗಳು ಶೇ. 42ಕ್ಕಿಂತ ಹೆಚ್ಚಾಗಿದೆ. ಆಗಸ್ಟ್‌ 2019ರಂದು ಚಿನ್ನದ ಬೆಲೆ 38,950 ರೂ. ಆಗಿತ್ತು. ಇದೀಗ 10 ಗ್ರಾಂ.ಗೆ 55,500 ರೂ. ಆಗಿದೆ. ಕೊರೊನಾ ಕಾಲದಲ್ಲಿ ಇದೇ ಅನಿಶ್ಚಿತತೆ ಮುಂದುವರಿದರೆ ಅದರ ಬೆಲೆ ಮತ್ತಷ್ಟು ಹೆಚ್ಚಾಗಲಿದೆ.

Advertisement

Udayavani is now on Telegram. Click here to join our channel and stay updated with the latest news.

Next