ಮುಂಬೈ: ಕುಸಿಯುತ್ತಿರುವ ಆರ್ಥಿಕತೆಗೆ ಚೇತರಿಕೆ ನೀಡುವ ನಿಟ್ಟಿನಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಬುಧವಾರ ರೆಪೋ ದರವನ್ನು 35 ಮೂಲಾಂಶ ಇಳಿಕೆ ಮಾಡಿದೆ. ಸತತ ನಾಲ್ಕನೇ ಬಾರಿಗೆ ಇಳಿಕೆ ಮಾಡಿದ ಪರಿಣಾಮ ಸದ್ಯ ದೇಶದ ರೆಪೋ ದರವು ಕಳೆದ 9 ವರ್ಷಗಳ ಕನಿಷ್ಠ ಮಟ್ಟದಲ್ಲಿದೆ. ಹೀಗಾಗಿ, ಬ್ಯಾಂಕ್‌ಗಳಿಂದ ಗ್ರಾಹಕರು ಪಡೆಯುವ ವಾಹನ, ಗೃಹ ಸೇರಿದಂತೆ ಹಲವು ಸಾಲಗಳ ಬಡ್ಡಿ ದರ ಮತ್ತಷ್ಟು ಇಳಿಕೆಯಾಗಿ, ಇಎಂಐ ಮೊತ್ತ ಕಡಿಮೆಯಾಗಲಿದೆ.
ಬುಧವಾರ ಮುಂಬೈನಲ್ಲಿ ನಡೆದ ಆರ್‌ಬಿಐ ದ್ವೈಮಾಸಿಕ ಸಭೆಯಲ್ಲಿ ರೆಪೋ ದರವನ್ನು ಶೇ. 5.75 ರಿಂದ ಶೇ. 5.40 ಕ್ಕೆ ಇಳಿಕೆ ಮಾಡಲಾಗಿದೆ. ಒಟ್ಟಾರೆ ಇಡೀ ವರ್ಷದಲ್ಲಿ ಶೇ. 1.1 ರಷ್ಟು ರೆಪೋ ದರ ಇಳಿಕೆಯಾದಂತಾಗಿದೆ.ರಿವರ್ಸ್ ರೆಪೊ ದರವನ್ನು ಶೇ. 5.15ಕ್ಕೆ ಇಳಿಕೆ ಮಾಡಲಾಗಿದೆ. ಇದೇ ವೇಳೆ ದೇಶದ ಅಭಿವೃದ್ಧಿಯ ದರ ಶೇ.7ಕ್ಕಿಂತ ಕಡಿಮೆ ಇರುವ ಮುನ್ಸೂಚನೆ ನೀಡಿದೆ ಆರ್‌ಬಿಐ.
ಎನ್‌ಇಎಫ್ಟಿ ವ್ಯವಸ್ಥೆಯ ಮೂಲಕ ಹಣ ವರ್ಗಾವಣೆಯನ್ನು ಡಿಸೆಂಬರ್‌ನಿಂದ ಇಡೀ ದಿನ ನಡೆಸಲು ಆರ್‌ಬಿಐ ನಿರ್ಧರಿಸಿದೆ. ಸದ್ಯ ಎನ್‌ಇಎಫ್ಟಿ ಬೆಳಗ್ಗೆ 8 ಗಂಟೆಯಿಂದ ಸಂಜೆ 7 ಗಂಟೆಯವರೆಗಷ್ಟೇ ಲಭ್ಯವಿದೆ. ಎರಡನೇ ಹಾಗೂ ನಾಲ್ಕನೇ ಶನಿವಾರವನ್ನು ಹೊರತುಪಡಿಸಿ ಉಳಿದ ಎಲ್ಲ ದಿನಗಳಲ್ಲೂ ಈ ಸೇವೆ ಲಭ್ಯವಿರುತ್ತದೆ. ಗರಿಷ್ಠ 2 ಲಕ್ಷ ರೂ. ವರೆಗೆ ಹಣ ವರ್ಗಾವಣೆ ಮಾಡಲು ಎನ್‌ಇಎಫ್ಟಿ ವಿಧಾನವನ್ನು ಬಳಸಲಾಗುತ್ತದೆ. ಈ ಹಿಂದಿನ ದ್ವೈಮಾಸಿಕ ಸಭೆಯಲ್ಲಿ ಎನ್‌ಇಎಫ್ಟಿ ಹಾಗೂ ಆರ್‌ಟಿಜಿಎಸ್ ಮೂಲಕ ನಡೆಸಿದ ಹಣ ವಹಿವಾಟಿಗೆ ಶುಲ್ಕ ರದ್ದುಗೊಳಿಸಿತ್ತು.
ನಾಡಿದ್ದಿನಿಂದ ಎಸ್‌ಬಿಐ ಸಾಲ ಅಗ್ಗ
ಆರ್‌ಬಿಐ ನಿರ್ಧಾರ ಪ್ರಕಟವಾಗುತ್ತಿದ್ದಂತೆಯೇ ಎಸ್‌ಬಿಐ ತನ್ನ ಎಲ್ಲಾ ಸಾಲಗಳ ಮೇಲಿನ ಬಡ್ಡಿಯನ್ನು ಶೇ.0.15ರಷ್ಟು ತಗ್ಗಿಸಿದೆ. ಆ.10ರಿಂದ ಪರಿಷ್ಕೃತ ನಿರ್ಧಾರ ಜಾರಿಯಾಗಲಿದೆ. ಎಸ್‌ಬಿಐನಿಂದ ಗೃಹ, ವಾಹನ ಮತ್ತು ಇತರ ಸಾಲಗಳನ್ನು ಪಡೆದುಕೊಳ್ಳುವವರಿಗೆ ಅದು ನೆರವಾಗಲಿದೆ.