ಬೈಲಹೊಂಗಲ: ಬ್ರಿಟಿಷರ ವಿರುದ್ಧ ಹೋರಾಡಿ ಮಡಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ನೆನಪಿಗಾಗಿ ಪಟ್ಟಣದ ತೋಟಗಾರಿಕೆ ಇಲಾಖೆ ಬಳಿ ಸ್ಥಾಪಿಸಲಾದ ಸಂಗೊಳ್ಳಿ ರಾಯಣ್ಣ ಪ್ರತಿಮೆಯ ಮುಸುಕು ಬೆಳಗಾವಿ ಚಳಿಗಾಲ ಅಧಿವೇಶನದಂದು ಮುಕ್ತವಾಗಬಹುದೇ ಎನ್ನುವ ಆಶಾಭಾವ ರಾಯಣ್ಣ ಅಭಿಮಾನಿಗಳಲ್ಲಿ ಇದೆ.
ಬ್ರಿಟಿಷರ ವಿರುದ್ಧ ಹೋರಾಟದಲ್ಲಿ ಕ್ರಾಂತಿಯ ಕಿಡಿ ಹೊತ್ತಿಸಿದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹೆಸರು ಅಜರಾಮರವಾಗಿದೆ. ಕಿತ್ತೂರ ಸಂಸ್ಥಾನ ಪತನದ ನಂತರ ಕಿತ್ತೂರ ರಾಣಿ ಚೆನ್ನಮ್ಮನ ಬಲ ಕೈ, ಬಂಟ ಕಿತ್ತೂರಿನ ಸಂಸ್ಥಾನ ಪುನರ್ ನಿರ್ಮಾಣಕ್ಕೆ ನಡೆಸಿದ ಹೋರಾಟ ಅಗಾಧವಾದುದು.
ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಪ್ರಾರಂಭಿಸಿ ಆತನ ಕುರುಹುಗಳನ್ನು ರಕ್ಷಿಸುವ ಕಾರ್ಯ ನಡೆಸಲಾಗುತ್ತಿದೆ. ಪಟ್ಟಣದಲ್ಲಿ ರಾಯಣ್ಣನ ಹೆಸರಿನ ಉದ್ಯಾನವನ, ವೃತ್ತವೂ ಇದೆ. ಆದರೆ ರಾಯಣ್ಣನ ಹೆಸರಿನ ಮೂರ್ತಿ ಇಲ್ಲದಿರುವುದರಿಂದ ಮೂರ್ತಿ ಸ್ಥಾಪನೆಗೆ ಬಹು ವರ್ಷಗಳಿಂದ ಬೇಡಿಕೆ ಇತ್ತು. ಇದಕ್ಕಾಗಿ ರಾಯಣ್ಣನ ಅಭಿಮಾನಿಗಳು, ಹೋರಾಟಗಾರರು ಹೋರಾಟ ನಡೆಸಿದ್ದರು.
ಉದ್ಘಾಟನೆ ಕಾಣದ ರಾಯಣ್ಣನ ಮೂರ್ತಿ: ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪನೆಗೆ ಮಾಜಿ ಶಾಸಕ ಡಾ.ವಿಶ್ವನಾಥ ಪಾಟೀಲ ಅವಧಿಯಲ್ಲಿ ತೋಟಗಾರಿಕೆ ಇಲಾಖೆ ಮುಂಭಾಗದಲ್ಲಿ ಸ್ಥಳ ಗುರುತಿಸಿ ಮೂರ್ತಿ ನಿರ್ಮಾಣ ಕಾರ್ಯ ನಡೆದಿತ್ತು. 10.50 ಲಕ್ಷ ರೂ. ಸರಕಾರದ ಅನುದಾನದಲ್ಲಿ ಪ್ರತಿಮೆ ನಿರ್ಮಾಣ ಮಾಡಲಾಯಿತು. ಸಿದ್ಧವಾಗಿ ನಿಂತ ಮೂರ್ತಿ ಮುಸುಕುಧಾರಿಯಾಗಿ ನಿಂತಿದೆ. ಆದರೆ ಇಲ್ಲಿಯವರೆಗೆ ಉದ್ಘಾಟನೆ ಭಾಗ್ಯ ಕಂಡಿಲ್ಲ. ಕಿತ್ತೂರು ರಾಣಿ ಚೆನ್ನಮ್ಮನ ಉತ್ಸವದ ಸಂದರ್ಭದಲ್ಲಾದರೂ ರಾಯಣ್ಣನ ಮೂರ್ತಿ ಉದ್ಘಾಟನೆ ಮಾಡಬೇಕಾಗಿತ್ತು. ಆದರೆ ಕಿತ್ತೂರು ಉತ್ಸವ ಮುಗಿದು ಹೋದರೂ ಉದ್ಘಾಟನೆ ಬಗ್ಗೆ ಸುಳಿವು ಇಲ್ಲದಿರುವುದು ರಾಯಣ್ಣ ಅಭಿಮಾನಿಗಳ ಆಕ್ರೋಶಕ್ಕೆ ಕಾರಣವಾಗಿದೆ.
ಕಿತ್ತೂರು ಅಭಿವೃದ್ಧಿ ಪ್ರಾಧಿಕಾರದಿಂದ ಸಿದ್ಧಗೊಂಡಿರುವ ರಾಯಣ್ಣನ ಪ್ರತಿಮೆ ಮೂಲೆಯಲ್ಲಿ ಕಳೆದ ಒಂದು ವರ್ಷಗಳಿಂದ ಅನಾಥವಾಗಿ ನಿಂತಿದ್ದರೂ ಅಧಿಕಾರಿಗಳು, ಜನಪ್ರತಿನಿ ಧಿಗಳು ಇದರತ್ತ ಗಮನಹರಿಸಿಲ್ಲ. ಈ ಕುರಿತು ರಾಯಣ್ಣನ ಅಭಿಮಾನಿಗಳು ಪ್ರಾಧಿಕಾರ ಅಧಿಕಾರಿಗಳಿಗೆ ಮನವಿ ಮಾಡಿಕೊಂಡಿದ್ದರೂ ಪ್ರಾಧಿಕಾರ ಸ್ಪಂದಿಸಿಲ್ಲ. ಶಾಸಕ ಮಹಾಂತೇಶ ಕೌಜಲಗಿ, ಬೈಲಹೊಂಗಲ ಉಪವಿಭಾಗಾಧಿಕಾರಿ, ಸಂಗೊಳ್ಳಿ ರಾಯಣ್ಣ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತ ಶಿವಾನಂದ ಭಜಂತ್ರಿ ಇತ್ತ ಗಮನ ಹರಿಸಿ ಕಿತ್ತೂರು ನಾಡಿನ ಜನತೆ ಹೋರಾಟಕ್ಕಿಳಿಯುವ ಮುಂಚೆ ಪ್ರತಿಮೆ ಅನಾವರಣಗೊಳಿಸಿ ವೀರರ ತ್ಯಾಗ, ಬಲಿದಾನವನ್ನು ಗೌರವಿಸಬೇಕಿದೆ.
ಸಂಗೊಳ್ಳಿ ರಾಯಣ್ಣನ ಮೂರ್ತಿ ಅನಾವರಣಕ್ಕೆ ದಿನ ನಿಗದಿ ಬಗ್ಗೆ ಹಲವು ಬಾರಿ ಚರ್ಚೆ ನಡೆಸಲಾಗಿದೆ. ಆದರೆ ಇನ್ನೂ ಕಾಲ ಕೂಡಿ ಬಂದಿಲ್ಲ. ಚಳಿಗಾಲ ವಿಧಾನಸಭೆ ಅಧಿವೇಶನದ ಸಂದರ್ಭದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಗಳನ್ನು ಅಹ್ವಾನಿಸಿ ಮೂರ್ತಿ ಉದ್ಘಾಟನೆ(ಅನಾವರಣಕ್ಕೆ) ಕ್ರಮ ಕೈಗೊಳ್ಳುವ ವಿಚಾರ ಹೊಂದಲಾಗಿದೆ.
. ಮಹಾಂತೇಶ ಕೌಜಲಗಿ, ಶಾಸಕರು ಬೈಲಹೊಂಗಲ.
ಸಂಗೊಳ್ಳಿ ರಾಯಣ್ಣನ ಮೂರ್ತಿ ಸ್ಥಾಪಿಸಿ ಬಹುದಿನಗಳು ಕಳೆದಿವೆ. ರಾಜಕಾರಣಿಗಳ ಇಚ್ಛಾಶಕ್ತಿ ಇಲ್ಲದಿರುವುದರಿಂದ ಮೂರ್ತಿ ಅನಾವರಣಗೊಂಡಿಲ್ಲ. ಇನ್ನಾದರೂ ಇತ್ತ ಜನಪ್ರತಿನಿಧಿಗಳು, ರಾಯಣ್ಣ ಅಭಿವೃದ್ಧಿ ಪ್ರಾಧಿಕಾರ ಗಮನ ಹರಿಸುವುದು ಅಗತ್ಯವಾಗಿದೆ.
.ಬಸವರಾಜ ಕಮತ,
ಇತಿಹಾಸ ತಜ್ಞ
ಸಿ.ವೈ.ಮೆಣಶಿನಕಾಯಿ