Advertisement

ರಾಯಣ್ಣಗೆ ಇಲ್ಲಿ ನಿತ್ಯ ಪೂಜೆ

04:28 PM Aug 15, 2018 | |

ಬೈಲಹೊಂಗಲ: ದೇಶಕ್ಕಾಗಿ ಬಲಿದಾನ ಮಾಡಿದ ವ್ಯಕ್ತಿ ದೇವರಿಗೆ ಸಮಾನ ಎಂದು ಪೂಜಿಸುವ ಪರಿಪಾಠ ನಮ್ಮಲ್ಲಿದೆ. ಅದರಂತೆ ಅಪ್ರತಿಮ ವೀರ, ಸ್ವಾತಂತ್ರ್ಯ  ಸೇನಾನಿ, ಹುತಾತ್ಮ, ಸ್ವಾಭಿಮಾನಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಜನ್ಮಸ್ಥಳ ಸಂಗೊಳ್ಳಿಯಲ್ಲಿ ಪ್ರತಿನಿತ್ಯ ಪೂಜೆ ನಡೆದುಕೊಂಡು ಬರುತ್ತಿದೆ.

Advertisement

ಸಂಗೊಳ್ಳಿಯ ಡೊಳ್ಳಿನ ಮನೆತನದವರು ನಾಲ್ಕು ತಲೆಮಾರಿನಿಂದ ಪೂಜೆ ನಡೆಸಿಕೊಂಡು ಬಂದಿರುವುದು ಇತಿಹಾಸದಲ್ಲಿ ಅಪರೂಪವಾಗಿದೆ. ಕ್ರಿ.ಶ 1829 ರಲ್ಲಿ ಬ್ರಿಟಿಷ ಸರಕಾರ ಕಿತ್ತೂರ ನಾಡಿನ ಇನಾಂ ಭೂಮಿಗಳ ಮೇಲೆ ಕಂದಾಯ ವಿಧಿಸಿತು. ಇದನ್ನು ವಿರೋ ಧಿಸಿ ವೀರ ರಾಯಣ್ಣ ಹಾಗೂ ತಾಯಿ ಕೆಂಚವ್ವ ಕಾಯ್ದೆಗೆ ವಿರೋಧ ವ್ಯಕ್ತ ಪಡಿಸುತ್ತಾರೆ. ರಾಯಣ್ಣ ಗೆಳೆಯ ಚನಬಸ್ಸು, ಮತ್ತಿತರ ಸಂಗಡಿಗರು ಗುಂಪು ಕಟ್ಟಿಕೊಂಡು ಬ್ರಿಟಿಷರನ್ನು ಸದೆ ಬಡಿಯಲು ಅಣಿಯಾಗುತ್ತಾರೆ. ಸಂಪಗಾವ, ಬೀಡಿ, ನಂದಗಡ, ಖಾನಾಪುರ ಸೇನಾ ಠಾಣೆ, ಸರಕಾರಿ ಕಚೇರಿ ಸುಡುತ್ತಾರೆ. ನೇರವಾಗಿ ರಾಯಣ್ಣನನ್ನು ಎದುರಿಸಲಾಗದ ಬ್ರಿಟಿಷರು ಆತನನ್ನು ಮೋಸದಿಂದ ಬಂಧಿಸುತ್ತಾರೆ. 1831 ರಲ್ಲಿ ಜನೇವರಿ 26 ರಂದು ಗಲ್ಲಿಗೇರಿಸುತ್ತಾರೆ.

ಸಂಗೊಳ್ಳಿಯಲ್ಲಿ ವೀರ ಪ್ರತಿಜ್ಞೆ ಮಾಡಿದ ರಾಯಣ್ಣ ಕಟ್ಟೆ ಎಂದು ಕರೆಯಲಾಗುವ ಸ್ಥಳ ಇಂದಿಗೂ ಇದೆ. ಇಲ್ಲಿ ತಾಲೀಮಿನ ಶಕ್ತಿಗಲ್ಲು, ಲೋಡು ಇಡಲಾಗಿದೆ. ಅವುಗಳನ್ನು ರಕ್ಷಿಸಿ ಪೂಜಿಸಲಾಗುತ್ತಿದೆ. ರಾತ್ರಿಯೆಲ್ಲ ಡೊಳ್ಳು ಬಾರಿಸುವ ಮೂಲಕ ಶ್ರದ್ದಾಂಜಲಿ ಸಲ್ಲಿಸಲಾಗುತ್ತದೆ. ಸರಕಾರದಿಂದ ದೇವಸ್ಥಾನ ನಿರ್ಮಿಸಲಾಗಿದೆ.

ರಾಯಪ್ಪನ ಮಗನಾದ ಲಕ್ಷ್ಮಣ ಡೊಳ್ಳಿನ ಇಂದು ಪೂಜೆ ಕಾರ್ಯ ನೆರವೇರಿಸುತ್ತಾರೆ. ವೀರನಿಗೆ ಊರಲ್ಲಿ ಯಾವುದೇ ಕಾರ್ಯ ನಡೆದರೂ ಅಗ್ರ ಪೂಜೆ ಮಾಡಲಾಗುತ್ತದೆ. ಹೊಸದಾಗಿ ಮದುವೆಯಾದ ದಂಪತಿ ದೇವಸ್ಥಾನಕ್ಕೆ ತೊಟ್ಟಿಲು ಕಟ್ಟಿ ಗಂಡು ಮಗುವಿಗೆ ಹರಕೆ ಸಲ್ಲಿಸುತ್ತಾರೆ. ಪ್ರತಿವರ್ಷ ಜನೆವರಿ 12,13 ರಂದು ಸಂಗೊಳ್ಳಿ ಉತ್ಸವ ನಡೆಯುತ್ತದೆ. ಮಲಪ್ರಭಾ ಪವಿತ್ರ ಜಲದಿಂದ ಅಭಿಷೇಕ, ಉತ್ತತ್ತಿ, ಕುಂಕುಮ, ಭಂಡಾರ ಪೂಜೆ ನಡೆಸಲಾಗುತ್ತದೆ. ಅ. 15 ರಂದು ರಾಯಣ್ಣ ಜಯಂತಿ, ಜ.26 ರಂದು ಹುತಾತ್ಮ ಸ್ಮರಣೆ ಕಾರ್ಯಕ್ರಮ ನಡೆಯುತ್ತದೆ. ಸಂಗೊಳ್ಳಿ ಗ್ರಾಮಸ್ಥರು ರಾಯಣ್ಣನ ಜಾತ್ರೆಯನ್ನು ದವನದ ಹುಣ್ಣಿಮೆಯಂದು 3 ದಿನ ಜಾತ್ರೆ ಕಾರ್ಯಕ್ರಮ ನಡೆಸಿ ರಾಯಣ್ಣನನ್ನು ಸ್ಮರಿಸಲಾಗುತ್ತದೆ.

ಸಂಗೊಳ್ಳಿ ಗ್ರಾಮದ ಹತ್ತಿರದ ಮಲಪ್ರಭಾ ನದಿ ದಡದ ಮೇಲೆ ದೊರೆ ಮಲ್ಲಸರ್ಜನ ಮೊದಲ ಪತ್ನಿ ರಾಣಿ ರುದ್ರಮ್ಮಾಜಿ ಸಮಾಧಿ ಅವಸಾನದ ಅಂಚು ತಲುಪಿದೆ ಅದನ್ನು ರಾಜ್ಯ ಪುರಾತತ್ವ ಇಲಾಖೆ ಸುರಕ್ಷಿತ ಸ್ಮಾರಕವೆಂದು ಘೋಷಿಸುವ ಅಗತ್ಯತೆಯಿದೆ.

Advertisement

ರುದ್ರಮ್ಮಾಜಿ ಸಮಾಧಿ ನಿರ್ಲಕ್ಷ್ಯ 
ಕಿತ್ತೂರ ಚೆನ್ನಮ್ಮನ ಸಂಸ್ಥಾನ ಉಳಿವಿಗೆ ಹೋರಾಡಿದ ರುದ್ರಮ್ಮಾಜಿ ಸ್ಮರಣೆಗೆ ದೊರೆ ಮಲ್ಲಸರ್ಜ ಕಟ್ಟಿದ ಸಮಾಧಿ 1947 ರಲ್ಲಿ ನಯಾನಗರ ಹತ್ತಿರ ಮಲಪ್ರಭಾ ದಂಡೆ ಮೇಲೆ ಆಣೆಕಟ್ಟೆ ಕಟ್ಟಿದ ಬಳಿಕ ನದಿಯಲ್ಲಿ ಮುಳುಗಿತು. ಈಗಲೂ ಬೇಸಿಗೆಯಲ್ಲಿ ಈ ಸಮಾಧಿ ಕಂಡು ಬರುತ್ತದೆ. ಸದ್ಯ ಇದರ ಕಲ್ಲು ಕಳಚಿ ಬೀಳುತ್ತಿವೆ. ಅವುಗಳನ್ನು ಇತಿಹಾಸದ ಕುರುಹಾಗಿ ರಕ್ಷಣೆ ಮಾಡುವ ಅಗತ್ಯವಿದೆ. ಸಮಾಧಿ  ಸ್ಥಳದ ರಕ್ಷಣೆಗೆ ಸರಕಾರಕ್ಕೆ ಹಲವು ಬಾರಿ ಮನವಿ ಸಲ್ಲಿಸಲಾಗಿದೆ. ಆದರೆ ಇನ್ನೂ ಸಂರಕ್ಷಣೆ ಕಾರ್ಯ ನಡೆದಿಲ್ಲ. ರಾಯಣ್ಣ ಪ್ರಾ ಧಿಕಾರದಿಂದ ಸಂಗೊಳ್ಳಿಯಲ್ಲಿರುವ ದೇವಸ್ಥಾನವನ್ನು ಅಭಿವೃದ್ಧಿ ಪಡಿಸಬೇಕಿದೆ. 
 ಬಸವರಾಜ ಕಮತ, ಸಂಗೊಳ್ಳಿ
ಪ್ರಾಧಿಕಾರದ ತಜ್ಞ ಸಮಿತಿ ಸದಸ್ಯ, ಸಂಶೋಧಕ

Advertisement

Udayavani is now on Telegram. Click here to join our channel and stay updated with the latest news.

Next