Advertisement

ಸಮಸ್ಯೆ ಇಲ್ಲವೆಂದು ದಾರಿ ತಪ್ಪಿಸಬೇಡಿ

05:05 PM May 17, 2019 | Naveen |

ರಾಯಚೂರು: ನೀವು ಎಲ್ಲಿಯೂ ನೀರಿನ ಸಮಸ್ಯೆಯೇ ಇಲ್ಲ ಎಂದು ಹೇಳುತ್ತೀರಿ. ಆದರೆ, ಜನ ನಮಗೆ ಫೋನ್‌ ಮಾಡಿ ಸಮಸ್ಯೆ ಹೇಳಿಕೊಳ್ಳುತ್ತಿದ್ದಾರೆ. ಇರುವ ಸಮಸ್ಯೆಗಳನ್ನು ಇದ್ದ ರೀತಿಯಲ್ಲಿ ತಿಳಿಸಿ. ದಾರಿ ತಪ್ಪಿಸಬೇಡಿ ಎಂದು ಜಿಲ್ಲಾ ಮಟ್ಟದ ಅಧಿಕಾರಿಗಳಿಗೆ ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್‌ ನಾಡಗೌಡ ಎಚ್ಚರಿಸಿದರು.

Advertisement

ನಗರದ ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ಗುರುವಾರ ನಡೆದ ಬರ ನಿರ್ವಹಣೆ ಕಾಮಗಾರಿಗಳ ಪ್ರಗತಿ ಪರಿಶೀಲನೆ ಸಭೆಯಲ್ಲಿ ಮಾತನಾಡಿದ ಅವರು, ಬರದಿಂದ ಜಿಲ್ಲೆಯಲ್ಲಿ ಸಾಕಷ್ಟು ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಸಮಸ್ಯೆ ನಿವಾರಣೆಗೆ ಕ್ರಮ ಕೈಗೊಳ್ಳದ ಅಧಿಕಾರಿಗಳನ್ನು ಅಮಾನತು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ರಾಯಚೂರು ತಾಲೂಕಿನಲ್ಲಿ ಸಮಸ್ಯೆ ಇಲ್ಲ ಎಂದು ನೀವು ಹೇಳುತ್ತಿದ್ದೀರಿ. ಆದರೆ, ಕ್ಷೇತ್ರದ ಶಾಸಕರು ಕುಡಿಯುವ ನೀರಿನ ಸಮಸ್ಯೆ ಇರುವ 18 ಪಟ್ಟಿಯನ್ನು ನೀಡಿದ್ದಾರೆ. ನಾವು ಯಾರನ್ನು ನಂಬಬೇಕು. ಸಮಸ್ಯೆ ಏನು ಎಂಬುದನ್ನು ನೀವು ಹೇಳಿದರೆ ಮಾತ್ರ ನಮಗೆ ತಿಳಿಯುತ್ತದೆ. ನೀವೇ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದ ಅವರು, ಸಭೆಗೆ ತಪ್ಪು ಮಾಹಿತಿ ನೀಡದಂತೆ ತಾಕೀತು ಮಾಡಿದರು.

ಅಧಿಕಾರಿಗೆ ನೋಟಿಸ್‌ ಕೊಡಿ: ಜಿಲ್ಲೆಯಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಜವಾಬ್ದಾರಿ ವಹಿಸಿಕೊಂಡಿರುವ ಕೆಆರ್‌ಐಡಿಎಲ್ನ ಎಇಇ ಅನಿಲಕುಮಾರ ಸಭೆಗೆ ತಪ್ಪು ಮಾಹಿತಿ ನೀಡಿದ್ದನ್ನ ಗಮನಿಸಿದ ಸಚಿವರು. ಮನಸ್ಸಿಗೆ ಬಂದಿದ್ದನ್ನು ಹೇಳಬೇಡಿ. ಸಭೆಗೆ ತಪ್ಪು ಮಾಹಿತಿ ನೀಡದರೆ, ಸಭೆಯಿಂದಲೇ ಹೊರಹಾಕಬೇಕಾಗುತ್ತದೆ. ಮಾಹಿತಿ ಇಲ್ಲದೇ ಸಭೆಗೆ ಯಾಕೆ ಬರುತ್ತಿರಿ. ನಿಮ್ಮ ಇಇ ಜೆ.ಎಂ. ಕೊರಗು ಎಲ್ಲಿದ್ದಾರೆ..? ಮಿನಿಸ್ಟರ್‌ ಸಭೆ ನಡೆಸಿದರೂ ಬಾರದಂಥ ಕೆಲಸ ಏನಿದೆ ಅವರಿಗೆ ? ಕೂಡಲೇ ಅವರಿಗೆ ನೋಟಿಸ್‌ ಕೊಡಿ ಎಂದು ಸಿಇಒಗೆ ಸೂಚನೆ ನೀಡಿದರು.

ಜಿಪಂ ಸಿಇಒ ನಲಿನ್‌ ಅತುಲ್ ಮಾತನಾಡಿ, ಕುಡಿಯುವ ನೀರಿಗೆ ಸಂಬಂಧಿಸಿದ ಕಾಮಗಾರಿಗಾಗಿ ಸಿಆರ್‌ಎಫ್‌ ಯೋಜನೆಯಡಿ ಟಾಸ್ಕ್ಫೋರ್ಸ್‌ ಸಮಿತಿಯಿಂದ ಒಟ್ಟು 7.09 ಕೋಟಿ ರೂ. ಬಂದಿದ್ದು, ಪ್ರತಿ ತಾಲೂಕಿಗೆ 1.50 ಕೋಟಿ ಅಂದಾಜು ಮೊತ್ತದಂತೆ ಈಗಾಗಲೇ 5.24 ಕೋಟಿ ರೂ. ಅನುದಾನ ಬಿಡುಗಡೆಗೊಳಿಸಲಾಗಿದೆ. ಇದರಲ್ಲಿ 3.60 ಕೋಟಿ ಮಾತ್ರ ವೆಚ್ಚವಾಗಿದೆ ಎಂದು ವಿವರಿಸಿದರು. ಥರ್ಡ್‌ ಪಾರ್ಟಿ ಇನ್‌ಸ್ಪೆಕ್ಷನ್‌ ಕಾರ್ಯ ವಿಳಂಬವಾಗುತ್ತಿರುವ ಕಾರಣ ಖರ್ಚು ಮಾಡಲು ಸಾಧ್ಯವಾಗುತ್ತಿಲ್ಲ ಎಂದರು.

Advertisement

ಲಿಂಗಸುಗೂರಲ್ಲಿ ಸಮಸ್ಯೆ ಇಲ್ಲ: ಮಾಧ್ಯಮಗಳಲ್ಲಿ ವರದಿಯಾದಂತೆ ಲಿಂಗಸುಗೂರು ತಾಲೂಕಿನಲ್ಲಿ ಕುಡಿಯುವ ನೀರಿನ ಸಮಸ್ಯೆ ಇಲ್ಲ. ಆದರೆ, ಅಲ್ಲಿ ಕೆಲ ತಾಂಡಾಗಳಿಗೆ ವಿದ್ಯುತ್‌ ಸಂಪರ್ಕ ಇಲ್ಲದೆ ನೀರಿನ ಸಮಸ್ಯೆ ಎದುರಾಗಿದೆ. ಲಿಂಗಸುಗೂರು ತಾಲೂಕಿನ ಕೆಲ ತಾಂಡಾಗಳಲ್ಲಿ ಸಮಸ್ಯೆಗಳಿದ್ದು, ಅಧಿಕಾರಿಗಳು ಕೂಡಲೇ ಗಂಭೀರವಾಗಿ ಪರಿಗಣಿಸಿ ಎಂದು ಸೂಚಿಸಿದರು.

ಹಣದ ಸಮಸ್ಯೆಯಿಲ್ಲ: ಜಿಲ್ಲಾಧಿಕಾರಿ ಶರತ್‌ ಮಾತನಾಡಿ ಈಗಾಗಲೇ ಟಾಸ್ಕ್ಫೋರ್ಸ್‌ಗಳಿಗೆ 1.10 ಕೋಟಿ ರೂ. ಹಣ ನೀಡಲಾಗಿದೆ ಎಂದು ವಿವರಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಚಿವರು, ಕುಡಿಯುವ ನೀರಿನ ಯೋಜನೆಗಳಿಗೆ ಹಣದ ಕೊರತೆ ಇಲ್ಲ. ಮೊದಲು ನಿಮಗೆ ನೀಡಿದ ಹಣ ಖರ್ಚು ಮಾಡಿದರೆ ಸರ್ಕಾರಕ್ಕೆ ಹೆಚ್ಚಿನ ಹಣ ಕೇಳಲು ಸಾಧ್ಯ. ಹಣ ಇದ್ದರೂ ಖರ್ಚು ಮಾಡದಿದ್ದರೆ ಹೇಗೆ ಎಂದರು.

ಜಿಲ್ಲಾಧಿಕಾರಿ ಶರತ್‌ ಬಿ ಮಾತನಾಡಿ, ಕುಡಿಯುವ ನೀರಿಗೆ ಸಂಬಂಧಿಸಿದಂತೆ ಜೆಸ್ಕಾಂ ಹಾಗೂ ತಾಪಂ ಅಧಿಕಾರಿಗಳು ಸಭೆ ನಡೆಸಬೇಕು. ಯಾವುದೇ ಕಾರಣಕ್ಕೂ ಕುಡಿಯುವ ನೀರು ಪೂರೈಕೆಗೆ ವಿದ್ಯುತ್‌ ಸಮಸ್ಯೆಯಾಗದಂತೆ ಗಮನ ಹರಿಸಬೇಕು ಎಂದು ಸರ್ಕಾರದ ಆದೇಶವಾಗಿದೆ ಎಂದು ಜೆಸ್ಕಾಂ ಅಧಿಕಾರಿಗಳಿಗೆ ಸೂಚಿಸಿದರು.

ಕೃಷಿ ಇಲಾಖೆ ಜಂಟಿ ನಿರ್ದೇಶಕ ಜಿಯಾವುಲ್ಲಾ ಮಾತನಾಡಿ, ಈ ವರ್ಷ ಮುಂಗಾರು ವಿಳಂಬವಾಗಿ ಆರಂಭವಾಗುವ ಮುನ್ಸೂಚನೆಗಳಿವೆ. ಈವರೆಗೆ ಶೇ.96ರಷ್ಟು ಪ್ರಮಾಣದಲ್ಲಿ ಮಳೆ ಕೊರತೆಯಾಗಿದೆ. ಮಳೆ ಕೊರತೆಯಿಂದ 18-19ನೇ ಸಾಲಿನಲ್ಲಿ ಶೇ.66ರಷ್ಟು ಪ್ರಮಾಣದಲ್ಲಿ ಬೆಳೆಹಾನಿಯಾಗಿದೆ. ಎನ್‌ಡಿಆರ್‌ಎಫ್‌ ಮಾರ್ಗಸೂಚಿಯನ್ವಯ 164.42 ಕೋಟಿ ರೈತರಿಗೆ ಇನ್‌ಫುಟ್ ಸಬ್ಸಿಡಿಗಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ವಿವರಿಸಿದರು.

ಸಚಿವ ನಾಡಗೌಡ ಮಾತನಾಡಿ, ಫಸಲ್ಬಿಮಾ ಯೋಜನೆಯಡಿ ವಿಮೆ ನೋಂದಣಿ ಮಾಡಿದ ರೈತರಿಗೆ ವಿಮೆ ಹಣ ಬರುವಲ್ಲಿ ವಿಳಂಬವಾಗುತ್ತಿದೆ. ಇದರಿಂದ ವಿಮೆ ಮಾಡಲು ರೈತರು ಹಿಂಜರಿಯುತ್ತಿದ್ದಾರೆ ಎಂದರು.

ಎಡಿಸಿ ಟಿ.ವೆಂಕಟೇಶ, ಎಸಿ ಶಿಲ್ಪಾ ಶರ್ಮಾ, ಜಿಪಂ ಉಪ ಕಾರ್ಯದರ್ಶಿ ಎಂ.ಡಿ.ಯೂಸೂಫ್‌, ಜಿಲ್ಲಾ ಮುಖ್ಯ ಯೋಜನಾಧಿಕಾರಿ ಟಿ.ರೋಣಿ ಸೇರಿ ಇತರರಿದ್ದರು.

ಆರ್‌ಒ ಪ್ಲಾಂಟ್ ಸ್ಕೀಂ ವರ್ಸ್ಡ್
ಕುಡಿಯುವ ನೀರು ಶುದ್ಧೀಕರಣ ಘಟಕಗಳ ಸಮಸ್ಯೆ ಮಿತಿ ಮೀರಿದ್ದು, ಅದೊಂದು ವರ್ಸ್ಡ್ ಯೋಜನೆ ಎಂದು ಸಚಿವ ನಾಡಗೌಡ ಬೇಸರ ವ್ಯಕ್ತಪಡಿಸಿದರು. ಶುದ್ಧ ಕುಡಿಯುವ ನೀರಿನ ಘಟಕಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ. ಕೆಲವೆಡೆ ಯಂತ್ರಗಳನ್ನು ಕಿತ್ತುಕೊಂಡು ಹೋಗಿದ್ದು ಬರೀ ಕಟ್ಟಡಗಳು ಮಾತ್ರ ಉಳಿದಿವೆ. ಯಾವುದೇ ಕಾರಣಕ್ಕೂ ಆರ್‌ಒ ಪ್ಲಾಂಟ್‌ಗಳಿಗೆ ಕೆರೆಗಳಿಂದ ನೀರಿನ ಸಂಪರ್ಕ ಕಲ್ಪಿಸಬೇಡಿ ಎಂದು ತಾಕೀತು ಮಾಡಿದರು.
ಫೋನ್‌ ಆಫ್‌ ಮಾಡಬೇಡಿ
ಯಾವುದೇ ಕಾರಣಕ್ಕೂ ಅಧಿಕಾರಿಗಳು ಫೋನ್‌ ಆಫ್‌ ಮಾಡಬೇಡಿ. ನಮ್ಮ ಫೋನ್‌ಗಳು ಕೂಡ ಸದಾ ಚಾಲ್ತಿಯಲ್ಲಿರುತ್ತವೆ. ಪಂಚಾಯಿತಿ ಅಧಿಕಾರಿಗಳು ಸ್ಪಷ್ಟ ಸೂಚನೆ ನೀಡಬೇಕು. ಅದರ ಜತೆಗೆ ಸಹಾಯವಾಣಿ ಸಂಖ್ಯೆ ಎಲ್ಲರಿಗೂ ತಲುಪುವಂತೆ ಪ್ರಚಾರ ಮಾಡಿ. ಯಾವುದೇ ದೂರು ಬಂದರೆ ತಕ್ಷಣ ಇತ್ಯರ್ಥಗೊಳಿಸಿ.
ವೆಂಕಟರಾವ್‌ ನಾಡಗೌಡ,
ಜಿಲ್ಲಾ ಉಸ್ತುವಾರಿ ಸಚಿವ
Advertisement

Udayavani is now on Telegram. Click here to join our channel and stay updated with the latest news.

Next