Advertisement

ಮಳೆ-ಬೆಳೆ ಇಲ್ಲದೆ ಗುಳೆ ಹೊರಟ ‘ಮತದಾರ’!

12:41 PM Apr 19, 2019 | Naveen |

ರಾಯಚೂರು/ಲಿಂಗಸುಗೂರು: 371ಜೆ ಕಲಂ ತಿದ್ದುಪಡಿ ಮಾಡುವ ಮೂಲಕ ವಿಶೇಷ ಸ್ಥಾನಮಾನ ಪಡೆದರೂ ಹೈದರಾಬಾದ್‌-ಕರ್ನಾಟಕ ಭಾಗದ ಗ್ರಾಮೀಣ ಜನರ ಜೀವನ ಮಟ್ಟ ಸುಧಾರಿಸಿಲ್ಲ. ಇಂದಿಗೂ ದುಡಿದು ತಿನ್ನಲು ಗುಳೆ ಹೋಗುವ
ಸಂಪ್ರದಾಯ ಚಾಲ್ತಿಯಲ್ಲಿದ್ದು, ಚುನಾವಣೆ ಹೊತ್ತಲ್ಲಿ ಮತದಾರರೇ ಪಲಾಯನ ನಡೆಸಿದಂತಾಗಿದೆ. ಇದು ಮತದಾನ ಪ್ರಮಾಣ ಹೆಚ್ಚಳ ಮಾಡಬೇಕೆಂಬ ಆಯೋಗದ ಕಸರತ್ತಿಗೆ ಅಡ್ಡಿಯಾಗಿದೆ.

Advertisement

ಈ ಭಾಗದಲ್ಲಿನ ಭೀಕರ ಕ್ಷಾಮ ದುಡಿಯುವ ಜನರನ್ನು ಮಹಾನಗರಗಳತ್ತ ದೂಡುತ್ತಿದ್ದು, ಹಳ್ಳಿಗಳು ಬಾಲಮಂದಿರ, ವೃದ್ಧಾಶ್ರಮಗಳಾಗಿ ಮಾರ್ಪಡುತ್ತಿವೆ. ಆದರೆ, ಐದು ವರ್ಷಕ್ಕೊಮ್ಮೆ ಬರುವ ಚುನಾವಣೆಗಳು ಮಾತ್ರ ಗುಳೆ ಹೋದ ಜನರಲ್ಲಿ ಕೆಲವರನ್ನಾದರೂ ಪತ್ತೆ ಹಚ್ಚಿ ಕರೆ ತರುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂಬುದೇ ವಿಶೇಷ. ಈಗ ಲೋಕಸಭೆ ಚುನಾವಣೆಗೂ
ಅಂಥದ್ದೇ ಪ್ರಹಸನ ಶುರುವಾಗಿದ್ದು, ಹಳ್ಳಿಗಳಲ್ಲಿ ಪ್ರಮುಖ ಪಕ್ಷಗಳ ಕಾರ್ಯಕರ್ತರು ಮತದಾರರ ಪಟ್ಟಿ ಹಿಡಿದು ವಿಳಾಸ ಪತ್ತೆಗೆ ಮುಂದಾಗಿದ್ದಾರೆ. ಗುಳೆ ಹೋದ ಜನರ ಬಂಧು ಬಳಗದವರನ್ನು ಸಂಪರ್ಕಿಸಿ ಚುನಾವಣೆ ದಿನ ಬಂದು ಹೋಗುವಂತೆ ಮನವಿ ಮಾಡುತ್ತಿದ್ದಾರೆ. ಆದರೆ, ಒಂದೆಡೆ ಗುಳೆ ಹೋದವರ ವಿಳಾಸ ಹುಡುಕುತ್ತಿದ್ದರೆ, ಮತ್ತೊಂದೆಡೆ ಹೊರಟು ನಿಂತವರನ್ನು ತಡೆಯುವವರೇ ಇಲ್ಲದ ಸ್ಥಿತಿ ಇದೆ. ಹೀಗಾಗಿ ಮತದಾನ ಪ್ರಮಾಣ ಕಡಿಮೆಯಾಗುವ ಸಾಧ್ಯತೆ ಇದೆ.

ಬರಕ್ಕೆ ಇಂಥದ್ದೇ ಊರು ಎಂಬ ಭೇದವಿಲ್ಲ. ಈ ಬಾರಿಯಂತೂ ಮುಂಗಾರು-ಹಿಂಗಾರು ಸಂಪೂರ್ಣ ಕೈ ಕೊಟ್ಟು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಕಳೆದ ವರ್ಷ ಜಿಲ್ಲೆಯಲ್ಲಿ ಉದ್ಯೋಗ ಖಾತ್ರಿಯಡಿ 1.7 ಕೋಟಿ ಮಾನವ ದಿನಗಳನ್ನು ಸೃಜಿಸಿ ದಾಖಲೆ ಮಾಡಿದ್ದಾಗಿ ಜಿಲ್ಲಾಡಳಿತವೇ ಹೇಳಿಕೊಂಡಿತ್ತು. ಆದರೆ, ಹಳ್ಳಿಗಳ ಜನ ಮಾತ್ರ ನಮಗೆ ಕೆಲಸವೇ ಇಲ್ಲ. ಊರಲ್ಲಿದ್ದರೆ ಗಂಜಿಗೇನು ಮಾಡುವುದು ಎನ್ನುತ್ತಿದ್ದಾರೆ. ಹೀಗಾಗಿ ಜನ ಗಂಟು ಮೂಟೆ ಕಟ್ಟಿಕೊಂಡು ತಂಡೋಪತಂಡವಾಗಿ ಊರು ತೊರೆಯುತ್ತಿದ್ದಾರೆ.

ಹೆಚ್ಚುವರಿ ಸಾರಿಗೆ ಸೌಲಭ್ಯ: ಕೂಲಿ ಅರಸಿ ಬೆಂಗಳೂರು, ಚಿಕ್ಕಮಗಳೂರು, ಪುಣೆ, ಮುಂಬೈ, ಗೋವಾ ಸೇರಿ ವಿವಿಧೆಡೆ ಜನ ಗುಳೆ ಹೋಗುತ್ತಿದ್ದು, ಸಾರಿಗೆ ಸಂಸ್ಥೆಯೇ ಹೆಚ್ಚುವರಿ ಬಸ್‌ ಓಡಿಸುತ್ತಿದೆ. ಪ್ರಮುಖ ಡಿಪೋಗಳಲ್ಲಿ ವಾರಾಂತ್ಯದಲ್ಲಿ ಅಂದಾಜು 8-10 ಬಸ್‌ಗಳು ಗುಳೆ ಜನರಿಗಾಗಿ ಓಡಿಸಲಾಗುತ್ತಿದೆ. ಲಿಂಗಸುಗೂರು, ದೇವದುರ್ಗ, ಸಿಂಧನೂರು,
ಮಾನ್ವಿ ತಾಲೂಕುಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಗುಳೇ ಹೋಗುತ್ತಿದ್ದಾರೆ. ಕೆಲವೆಡೆ ಖಾಸಗಿ ವಾಹನಗಳಲ್ಲಿ ಹೋಗುತ್ತಿದ್ದರೆ, ಇನ್ನೂ ಸಾಕಷ್ಟು ಜನ ರೈಲುಗಳಲ್ಲಿ ಹೋಗುತ್ತಿದ್ದಾರೆ. ತಾಲೂಕಿನ ಅರೋಲಿ, ಅರಷಣಿಗಿ, ದುಗನೂರು, ತುರಕನಡೋಣಿ, ಮಾನ್ವಿ
ತಾಲೂಕಿನ ಹರವಿ, ಕುರ್ಡಿ, ನಸ್ಲಾಪುರ ಹಾಗೂ ಲಿಂಗಸುಗೂರು, ಸಿಂಧನೂರು ತಾಲೂಕಿನ ಹಳ್ಳಿಗಳ ಜನ ಬೆಂಗಳೂರಿಗೆ ತೆರಳಿದರೆ, ದೇವದುರ್ಗ ತಾಲೂಕಿನ ಬಹುತೇಕ ತಾಂಡಾಗಳ ಜನ ಪುಣೆಗೆ
ಹೋಗುತ್ತಿದ್ದಾರೆ.

ನೀರಾವರಿ ಭಾಗಕ್ಕೂ ಬಿಸಿ: ಲಿಂಗಸುಗೂರು ತಾಲೂಕಿನಲ್ಲಿ ನಾರಾಯಣಪುರ ಬಲದಂಡೆ ಹಾಗೂ ರಾಂಪುರ ಏತ ನೀರಾವರಿ ಯೋಜನೆ ವ್ಯಾಪ್ತಿಯ ಕೆಲವು ಪ್ರದೇಶ ನೀರಾವರಿಗೆ ಒಳಪಟ್ಟರೂ ಸಮರ್ಪಕ ನೀರು ಸಿಗದೆ ರೈತರು ಸಂಕಷ್ಟ ಅನುಭವಿಸುವಂತಾಗಿದೆ. ಮಳೆಯಾಶ್ರಿತ ಪ್ರದೇಶದಲ್ಲಿ ಮಳೆ ಇಲ್ಲದೇ ಬೆಳೆ ಇಲ್ಲ. ಹೀಗಾಗಿ ಕೆಲಸ ಇಲ್ಲದಂತಾಗಿದೆ. ಇದರಿಂದ
ವಿಧಿ ಇಲ್ಲದೇ ಸಂಜೆಯಾದರೆ ಸಾಕು ಗ್ರಾಮೀಣ ಪ್ರದೇಶದಿಂದ ಹತ್ತಾರು ಕ್ರೂಸರ್‌ಗಳಲ್ಲಿ ಜನ ಬದುಕಿನ ಬವಣೆ ನೀಗಿಸಿಕೊಳ್ಳಲು ನಗರಗಳತ್ತ ಪ್ರಯಾಣ ಆರಂಭಿಸಿದ್ದಾರೆ.

Advertisement

ಬೀಗ ಹಾಕಿದ ಮನೆಗಳ ಸ್ವಾಗತ
ಮತದಾನ ಪ್ರಮಾಣ ಹೆಚ್ಚಿಸಲು ಅಧಿಕಾರಿಗಳು ಗ್ರಾಮೀಣ ಭಾಗದಲ್ಲಿ ಬೀದಿ ನಾಟಕ, ಕಲಾತಂಡ ಪ್ರದರ್ಶನ, ಬಾಜಾ ಭಜಂತ್ರಿಯೊಂದಿಗೆ, ಜಾಗೃತಿ ಜಾಥಾ, ಮತದಾನಕ್ಕೆ ಆಮಂತ್ರಣ ಪತ್ರಿಕೆ ನೀಡುವ ನಾನಾ ಕಸರತ್ತು ನಡೆಸುತ್ತಿದ್ದಾರೆ. ಆದರೆ ಅ ಧಿಕಾರಿಗಳು ಯಾವ ಗ್ರಾಮಕ್ಕೆ ಹೋದರೂ ಅವರಿಗೆ ಕಾಣಸಿಗುವುದು ಬೀಗ ಹಾಕಿದ ಮನೆಗಳೇ. ಬಸ್‌ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿ ವಿವಿಧೆಡೆ ಇಂಥ ಜಾಗೃತಿ ಮೂಡಿಸಲಾಗುತ್ತಿದೆ.
ಮತದಾನ ದಿನ ಬಂದು ಕಡ್ಡಾಯವಾಗಿ ಮತ ಚಲಾಯಿಸುವಂತೆ ಮನವಿ ಮಾಡಲಾಗುತ್ತಿದೆ.

ಮತದಾನ ದಿನ ಪ್ರತ್ಯಕ್ಷ!
ಗುಳೆ ಹೋದ ಜನ ಮತದಾನ ದಿನ ಪ್ರತ್ಯಕ್ಷವಾಗುತ್ತಾರೆ. ತಮ್ಮ ಹಕ್ಕು ಚಲಾಯಿಸಿ ಹೋಗುತ್ತಾರೆ. ಅದಕ್ಕೆ ರಾಜಕೀಯ ನಾಯಕರ ಇಚ್ಛಾಶಕ್ತಿಯೇ ಕಾರಣ. ಸಂಬಂಧಿಗಳಿಂದ ಗುಳೆ ಹೋದವರ ವಿಳಾಸ ಪಡೆದು ಬಂದು ಹೋಗುವ ವ್ಯವಸ್ಥೆ ಮಾಡುತ್ತಾರೆ. ಜತೆಗೆ ಒಬ್ಬರಿಗೆ ಇಂತಿಷ್ಟು ಎಂದು ಹಣ ನೀಡುತ್ತಾರೆ. ಆಯಾ ಸಮಾಜದ ಮುಖಂಡರಿಗೆ ಈ ಹೊಣೆ ವಹಿಸಲಾಗುತ್ತಿದೆ. ಆದರೆ, ಗುಳೆ ಹೋಗುವುದನ್ನು ತಡೆಗಟ್ಟಲು ಯಾವ ಯೋಜನೆ ರೂಪಿಸಬೇಕು, ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬ ಚಿಂತನೆ ಮಾತ್ರ ಯಾವುದೇ
ರಾಜಕೀಯ ಪಕ್ಷಗಳು ತಮ್ಮ ಪ್ರಚಾರದಲ್ಲಿ ಹೇಳುತ್ತಿಲ್ಲ.

ಗುಳೆ ಹೋಗುವುದನ್ನು ತಪ್ಪಿಸಲೆಂದೇ ಉದ್ಯೋಗ ಖಾತ್ರಿ ಯೋಜನೆ
ಪರಿಣಾಮಕಾರಿಯಾಗಿ ಜಾರಿ ಮಾಡಿದ್ದೇವೆ. ಕಳೆದ ವರ್ಷ ನಿರೀಕ್ಷಿತ ಗುರಿ ಮೀರಿ ಮಾನವ ದಿನಗಳನ್ನು ಸೃಜನೆ ಮಾಡಿದ್ದು, ನಮ್ಮ
ಜಿಲ್ಲೆಯೇ ಮೊದಲ ಸ್ಥಾನದಲ್ಲಿತ್ತು. ಆದರೂ ಜನ ಗುಳೆ ಹೋಗುವ ಪ್ರಕಿಯೇ ಸಂಪೂರ್ಣ ತಡೆಯಲು ಆಗಿಲ್ಲ. ಮತದಾನ ದಿನದಂದು
ಕಡ್ಡಾಯವಾಗಿ ಮತ ಚಲಾಯಿಸುವಂತೆ ರೈಲು ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ಜಾಗೃತಿ ಮೂಡಿಸುತ್ತಿದ್ದೇವೆ. ಅಲ್ಲದೇ, ಅಂದು ವೇತನ ಸಹಿತ ರಜೆ ನೀಡಬೇಕು ಎಂಬ ಆದೇಶ ಕೂಡ ಜಾರಿ ಮಾಡಲಾಗಿದೆ. ತಮ್ಮ ಹಕ್ಕು ಚಲಾಯಿಸಲು ಜನ ಇಚ್ಛಾಶಕ್ತಿ ತೋರಬೇಕು.
ನಲಿನ್‌ ಅತುಲ್‌,
ಸಿಇಒ, ಜಿಪಂ, ರಾಯಚೂರು

ಶಿವರಾಜ್‌ ಕೆಂಭಾವಿ

Advertisement

Udayavani is now on Telegram. Click here to join our channel and stay updated with the latest news.

Next