Advertisement
ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ವಿವಿಧೆಡೆ ಪ್ರತಿಭಟನೆಗಳೂ ನಡೆದಿವೆ. ಈ ಪ್ರಕರಣ ಈಗಾಗಲೇ ರಾಜ್ಯಮಟ್ಟದಲ್ಲಿ ಸುದ್ದಿಯಾಗಿದೆ. ನಾವು ಕೂಡ ಇದನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಕೆಲವರು ಸಾಮಾಜಿಕ ಜಾಲತಾಣ ಹಾಗೂ ಮಾಧ್ಯಮಗಳಲ್ಲಿ ತಪ್ಪು ಸಂದೇಶ ಹರಡುತ್ತಿದ್ದಾರೆ. ಆದರೆ, ತಪ್ಪು ಯಾರೇ ಮಾಡಿರಲಿ ಅವರಿಗೆ ತಕ್ಕ ಶಿಕ್ಷೆಯಂತೂ ಆಗಲಿದೆ. ಯಾರನ್ನು ರಕ್ಷಿಸುವ ಉದ್ದೇಶವಿಲ್ಲ ಎಂದು ಬಳ್ಳಾರಿ ಡಿಐಜಿ ಎಂ.ನಂಜುಂಡಸ್ವಾಮಿ ಶನಿವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆರಂಭದಲ್ಲಿ ಅವರ ಪಾಲಕರು ನೀಡಿದ ಮಾಹಿತಿ ಮೇರೆಗೆ ಅನುಮಾನಸ್ಪದ ಸಾವು ಎಂದು ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಅವರು ಅತ್ಯಾಚಾರ ಮತ್ತು ಕೊಲೆ ಎಂದು ಹೇಳಿದ್ದರಿಂದ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ಬಂಧಿ ಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರ ಬಾಬು ಹೇಳಿದರು. ಡಿವೈಎಸ್ಪಿ ಹರಿಬಾಬು ನೇತೃತ್ವದಲ್ಲಿ ತನಿಖಾ ತಂಡ ರಚಿಸಲಾಗಿದೆ. ಲಭ್ಯ ಮಾಹಿತಿ ಆಧರಿಸಿ ತನಿಖೆ ಕೈಗೊಳ್ಳಲಾಗುತ್ತಿದೆ. ಇನ್ನೂ ಶವಪರೀಕ್ಷೆ ವರದಿ ಬಂದಿಲ್ಲ. ಅದು ಬಂದ ಮೇಲೆ ನಿಖರ ಕಾರಣ ತಿಳಿದು ಬರಲಿದೆ. ತಕ್ಷಣಕ್ಕೆ ದೂರು ಸ್ವೀಕರಿಸದ ಹಿನ್ನೆಲೆಯಲ್ಲಿ ಪೊಲೀಸರ ವಿರುದ್ಧವೂ ವಿದ್ಯಾರ್ಥಿನಿ ಪಾಲಕರು ಆರೋಪಿಸಿದ್ದಾರೆ. ಈ ಕುರಿತು ಸಂಬಂಧಿಸಿದ ಪೊಲೀಸರ ವಿಚಾರಣೆ ಮಾಡಲಾಗುವುದು ಎಂದು ತಿಳಿಸಿದರು.
Related Articles
Advertisement
ಆರೋಪಿ ಸುದರ್ಶನ್ ಯಾದವ್ ಕಿರಿಕಿರಿ ಮಾಡುತ್ತಿದ್ದಾನೆ ಎಂದು ಆತನ ಸಹೋದರಿಗೂ ನಮ್ಮ ಮಗಳು ತಿಳಿಸಿದ್ದಳು. ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಮಗಳ ಬಗ್ಗೆ ಇಲ್ಲ ಸಲ್ಲದ ವಿಷಯ ಹರಡಲಾಗುತ್ತಿದೆ. ದಯವಿಟ್ಟು ಅಂಥ ಪೋಸ್ಟ್‌ಗಳನ್ನು ಹಾಕದಂತೆ ಮನವಿ ಮಾಡಿದ ಅವರು, ಇಂಟರ್ನಲ್ ಪರೀಕ್ಷೆಗೆ ತೆರಳಿದ ಮಗಳು ಪುನಃ ಬರಲೇ ಇಲ್ಲ. ಸಂಜೆಯೇ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದರೆ ದೂರು ಸ್ವೀಕರಿಸಲಿಲ್ಲ. ಮರುದಿನ ಬೆಳಗ್ಗೆ ಅವರೇ ಕರೆದು ನಮ್ಮ ಮಗಳ ಮೊಬೈಲ್ ಮತ್ತು ಬೈಕ್ ಕೀಲಿ ನೀಡಿದ್ದಾರೆ ಎಂದು ವಿವರಿಸಿದರು.
ವಿಶ್ವಕರ್ಮ ಸಮಾಜದ ಜಿಲ್ಲಾಧ್ಯಕ್ಷ ಗುರು ವಿಶ್ವಕರ್ಮಮಾತನಾಡಿ, ಮಗಳು ಕಾಣೆಯಾದ ಕೂಡಲೇ ಹೆತ್ತವರು ದೂರು ನೀಡಿದರೆ ಪೊಲೀಸರು ಪರಿಗಣಸಿಲ್ಲ. ವಿನಾಕಾರಣ ಕಾಲಹರಣ ಮಾಡಿದ್ದಾರೆ. ಬಂಧಿ ತ ಆರೋಪಿ ಆರು ತಿಂಗಳಿನಿಂದ ಮೃತ ವಿದ್ಯಾರ್ಥಿನಿಗೆ ಕಿರುಕುಳ ನೀಡುತ್ತಿದ್ದ. ವಿದ್ಯಾರ್ಥಿನಿ ತಂದೆ ಬುದ್ಧಿವಾದ ಹೇಳಿದ್ದರೂ ಕೇಳಿಲ್ಲ. ಆರೋಪಿ ಮೇಲೆ ಸಂಶಯ ಹೆಚ್ಚಾಗಿದೆ. ಘಟನೆ ಖಂಡಿಸಿ ವಿಶ್ವಕರ್ಮ ಸಮಾಜ ಹಾಗೂ ವಿವಿಧ ಸಂಘಟನೆಗಳಿಂದ ಏ. 25ರಂದು ನಗರದಲ್ಲಿ ಬೃಹತ್ ಪ್ರತಿಭಟನೆ ನಡೆಸಲಾಗುತ್ತದೆ. ಯುವತಿ ಶವ ಪತ್ತೆಯಾದ ಸ್ಥಳದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು ಎಂದು ತಿಳಿಸಿದರು. ಹರ್ಷಿಕಾ-ಭುವನ್ ಆಕ್ರೋಶ: ರಾಯಚೂರು ಶಾಂತಿಗೆ ಹೆಸರಾದ ನಾಡು. ಇಂಥ ಸ್ಥಳದಲ್ಲಿ ಕ್ರೂರ ಕೃತ್ಯ ಎಸಗಿರುವುದು ನಿಜಕ್ಕೂ ನಂಬಲಸಾಧ್ಯ. ಮೃತ ಯುವತಿ ಆತ್ಮಕ್ಕೆ ಶಾಂತಿ ಸಿಗಬೇಕಾದರೆ ಮಾನವೀಯತೆ ಮರೆತು ಇಂಥ ಹೇಯ ಕೃತ್ಯ ಎಸಗಿದವರಿಗೆ ಶಿಕ್ಷೆ ಆಗಲೇಬೇಕು ಎಂದು ನಟಿ ಹರ್ಷಿಕಾ ಪೂಣಚ್ಚ ಹೇಳಿದರು. ನಟ ಭುವನ್ ಮಾತನಾಡಿ, ಇದೊಂದು ಕ್ರೂರವಾದ
ಕೃತ್ಯ. ಹೆಣ್ಣು ಮಗಳಿಗೆ ಆಗಿರುವ ಅನ್ಯಾಯ ಮರೆ ಆಗಬಾರದು. ಜಿಲ್ಲಾಡಳಿತ, ಸರ್ಕಾರದ ಮೇಲೆ ಒತ್ತಡ
ಹಾಕಲೆಂದೇ ನಾವು ಇಲ್ಲಿಗೆ ಬಂದಿದ್ದೇವೆ ಎಂದರು.