Advertisement
ಕಳೆದ ಚುನಾವಣೆಗೆ ಹೋಲಿಸಿದರೆ ಈ ಬಾರಿ ಮತದಾನ ಪ್ರಮಾಣ ಸ್ವಲ್ಪ ಮಟ್ಟಿಗೆ ಕಡಿಮೆ ಆಗಿದೆ. ವಿಶೇಷ. ಎಂಟು ವಿಧಾನಸಭೆ ಕ್ಷೇತ್ರಗಳನ್ನೊಗೊಂಡ ರಾಯಚೂರು ಲೋಕಸಭೆ ಕ್ಷೇತ್ರದಲ್ಲಿ ಬೆಳಗ್ಗೆ 7 ಗಂಟೆಯಿಂದಲೇ ಮತದಾನ ಪ್ರಕ್ರಿಯೆ ಶುರುವಾಯಿತು. ಎಳೆ ಬಿಸಿಲಲ್ಲಿ ಮತಗಟ್ಟೆಗಳತ್ತ ಮುಖ ಮಾಡಿದ ಮತದಾರರು ತಮ್ಮ ಹಕ್ಕು ಚಲಾಯಿಸಿದರು. ಈ ಬಾರಿ ಮಹಿಳೆಯರು ಅತ್ಯುತ್ಸಾಹದಿಂದ ಮತ ಚಲಾಯಿಸಿದ್ದು ಕಂಡು ಬಂತು. ಪ್ರಮುಖ ಪಕ್ಷಗಳ ಅಭ್ಯರ್ಥಿಗಳಾದ ಕಾಂಗ್ರೆಸ್‌ನ ಬಿ.ವಿ.ನಾಯಕ ಸ್ವಗ್ರಾಮ ಅರಕೇರಾದ 187ನೇ ಮತಗಟ್ಟೆಯಲ್ಲಿ ಮತ ಚಲಾಯಿಸಿದರು. ಬಿಜೆಪಿ ಅಭ್ಯರ್ಥಿ ರಾಜಾ ಅಮರೇಶ್ವರ ನಾಯಕ ಗುರುಗುಂಟಾದ ಮತಗಟ್ಟೆ 16ರಲ್ಲಿ ಹಕ್ಕು ಚಲಾಯಿಸಿದರು. ಪ್ರಜಾಕೀಯ ಪಕ್ಷದ ಅಭ್ಯರ್ಥಿ ನಿರಂಜನ ನಾಯಕ ಕೂಡ ಅರಕೇರಾದಲ್ಲಿ ಹಕ್ಕು ಚಲಾಯಿಸಿದರೆ, ಎಸ್‌ಯುಸಿಐ ಕಮ್ಯುನಿಸ್ಟ್ ಪಕ್ಷದ ಸೋಮಶೇಖರ ಯಾದಗಿರಿಯಲ್ಲಿ ಹಕ್ಕು ಚಲಾಯಿಸಿದರು. ಬಿಎಸ್ಪಿ ಅಭ್ಯರ್ಥಿ ಬಿ.ವೆಂಕನಗೌಡ ನಾಯಕ ದೇವದುರ್ಗ ತಾಲೂಕಿನ ಕೆ.ಇರಬಗೇರಾದ ಗ್ರಾಮದಲ್ಲಿ ಹಕ್ಕು ಚಲಾಯಿಸಿದರು.
Related Articles
Advertisement
ಕೆಲವೆಡೆ ನೋಟಾ ಚಲಾವಣೆ: ಸಂಪೂರ್ಣ ಮದ್ಯ ನಿಷೇಧಿಸಬೇಕು ಎಂದು ಆಗ್ರಹಿಸಿ ಕ್ಷೇತ್ರದ ಕೆಲ ಹಳ್ಳಿಗಳಲ್ಲಿ ಮತದಾರರು ನೋಟಾ ಮತದಾನ ಮಾಡುವ ಮೂಲಕ ವಿನೂತನ ಹೋರಾಟ ನಡೆಸಿದರು. ಮತಗಟ್ಟೆಗಳ ಮುಂದೆಯೇ ಮದ್ಯ ನಿಷೇಧಿಸಬೇಕು ಎಂಬ ಫಲಕ ಪ್ರದರ್ಶಿಸಿ ಆಕ್ರೋಶ ವ್ಯಕ್ತಪಡಿಸಿದರು. ಬಳಿಕ ನೋಟಾ ಚಲಾಯಿಸಿ ತಮ್ಮ ಬೆಂಬಲ ಯಾವ ಅಭ್ಯರ್ಥಿಗೂ ಇಲ್ಲ ಎಂಬ ಸಂದೇಶ ಸಾರಿದರು. ತಾಲೂಕಿನ ಯದ್ಲಾಪುರ, ಮುರಾನ್‌ಪುರ, ಸುಲ್ತಾನಪುರ ಸೇರಿ ಬೇರೆ ಸಿಂಧನೂರು, ಮಸ್ಕಿ ತಾಲೂಕುಗಳಲ್ಲೂ ಹೋರಾಟ ನಡೆಸಲಾಯಿತು. ಇನ್ನು ನಗರದ ನವೋದಯ ಕಾಲೇಜಿನ ಯುವತಿ ಅನುಮಾನಾಸ್ಪದ ಸಾವು ಖಂಡಿಸಿ ತಾಲೂಕಿನ ಶಕ್ತಿನಗರ, ದೇವಸೂಗೂರಿನಲ್ಲಿ ಯುವಕರು ಕೈಗೆ ಕಪ್ಪು ಪಟ್ಟಿ, ಕಪ್ಪು ಬಟ್ಟೆಗಳನ್ನು ಧರಿಸುವ ಮೂಲಕ ಮತ ಚಲಾಯಿಸಿ ಖಂಡನೆ ವ್ಯಕ್ತಪಡಿಸಿದರು.
ಮತದಾರ ಪಟ್ಟಿ ಗೊಂದಲ: ನಗರದ ಅರಬ್ ಮೊಹಲ್ಲಾ, ಗಾಲೀಬ್ ನಗರ, ಮಂಗಳವಾರ ಪೇಟೆ, ಎಲ್ಬಿಎಸ್ ನಗರ ಸೇರಿ ವಿವಿಧೆಡೆ ಮತದಾರರ ಪಟ್ಟಿಯಲ್ಲಿ ಸಾಕಷ್ಟು ಗೊಂದಲ ಸೃಷ್ಟಿಸಿದ್ದು, ಹೆಸರುಗಳು ತಪ್ಪಾಗಿದೆ ಎಂಬ ಆರೋಪ ಕೇಳಿ ಬಂದಿತ್ತು. ಇದರಿಂದ ಸಾಕಷ್ಟು ಜನ ಮತದಾನ ವಂಚಿತರಾಗುವ ಸಾಧ್ಯತೆ ಇದೆ ಎಂಬ ಆತಂಕ ವ್ಯಕ್ತವಾಗಿತ್ತು. ಆದರೆ, ಇದಕ್ಕೆ ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು, ಮತಗಟ್ಟೆಗೆ ಬಂದ ಜನರಿಗೆ ಚುನಾವಣೆಯ ಅಪ್ಲಿಕೇಶನ್ ಸಹಾಯದಿಂದ ಅವರ ಮತ ಯಾವ ಮತಗಟ್ಟೆಯಲ್ಲಿದೆ ಎಂದು ಹೇಳಿ ಕಳುಹಿಸಿದರು. ಇದರಿಂದ ತಕ್ಕಮಟ್ಟಿಗೆ ಸಮಸ್ಯೆ ನಿವಾರಣೆಯಾಯಿತು. ಆದರೂ ಶೇ.10ರಷ್ಟು ಜನ ಮತದಾನದಿಂದ ವಂಚಿತರಾಗಿರುವ ಸಾಧ್ಯತೆ ಇದೆ ಎಂದು ಹೋರಾಟಗಾರ ಡಾ| ರಜಾಕ್ ಉಸ್ತಾದ್ ದೂರಿದ್ದಾರೆ.
ತಾಂಡಾಗಳು ಥಂಡ ಥಂಡಾ..: ಕಳೆದ ವಿಧಾನಸಭೆ ಚುನಾವಣೆಯಲ್ಲಿ ಮತದಾರರಿಂದ ಕಳೆಗಟ್ಟಿದ್ದ ತಾಂಡಾಗಳು ಈ ಬಾರಿ ಖಾಲಿ ಖಾಲಿ ಕಂಡು ಬಂದವು. ಈ ತಾಂಡಾಗಳಲ್ಲಿ ಬಹುತೇಕರು ಗುಳೆ ಹೋಗುತ್ತಿದ್ದು, ಅವರನ್ನು ಚುನಾವಣೆ ವೇಳೆ ಕರೆ ತರಲಾಗುತ್ತಿತ್ತು. ಪುಣೆ, ಬಾಂಬೆ, ಬೆಂಗಳೂರು, ಗೋವಾ ಸೇರಿ ಅನೇಕ ಕಡೆ ಜನ ದುಡಿಯಲು ಹೋಗಿದ್ದಾರೆ. ಆದರೆ, ಈ ಬಾರಿ ಗುಳೆ ಹೋದವರನ್ನು ಕರೆ ತರುವ ಪ್ರಯಾಸವನ್ನು ಯಾವ ಅಭ್ಯರ್ಥಿಗಳು ಮಾಡಿದಂತೆ ಕಂಡು ಬರಲಿಲ್ಲ. ಹೀಗಾಗಿ ತಾಂಡಾಗಳಲ್ಲಿ ಸ್ಥಾಪಿಸಿದ್ದ ಮತಗಟ್ಟೆಗಳಲ್ಲಿ ತಾಂಡಾದಲ್ಲಿರುವ ಜನರೇ ಮತ ಚಲಾಯಿಸುತ್ತಿದ್ದದ್ದು ಕಂಡು ಬಂತು.
ಆಕರ್ಷಕ ಸಖೀ ಮತಗಟ್ಟೆ: ಮಹಿಳೆಯರಿಗಾಗಿ ಸ್ಥಾಪಿಸಿದ್ದ ಸಖೀ ಮತಗಟ್ಟೆಗಳು ಮತದಾರರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು. ಸ್ವಾಗತ ಕೋರುವ ಕಮಾನು, ತಳಿರು ತೋರಣದ ಚಿತ್ರಗಳು, ಮಕ್ಕಳಿಗೆ ಆಟದ ಸಾಮಾನುಗಳು, ವಿಶೇಷ ಅನುಭೂತಿ ಕಲ್ಪಿಸಿದರೆ, ಸೆಲ್ಫಿ ಪಾಯಿಂಟ್‌ನಲ್ಲಿ ಯುವಕ ಯುವತಿಯರು ಸೆಲ್ಫಿ ತೆಗೆದುಕೊಂಡು ಸಂಭ್ರಮಿಸಿದ್ದು ಕಂಡು ಬಂತು. ಕ್ಷೇತ್ರದಲ್ಲಿ 23 ಸಖೀ ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು.
ಗಣ್ಯರ ಮತ ಚಲಾವಣೆ: ಅಭ್ಯರ್ಥಿಗಳನ್ನು ಹೊರತು ಪಡಿಸಿ ಜಿಲ್ಲೆಯ ವಿವಿಧೆಡೆ ಗಣ್ಯರು ತಮ್ಮ ಹಕ್ಕು ಚಲಾಯಿಸಿದರು. ಜಿಲ್ಲಾಧಿಕಾರಿ ಶರತ್ ಬಿ., ಸಿಇಒ ನಲಿನ ಅತುಲ್ ಕೆಇಬಿ ಸರ್ಕಾರಿ ಶಾಲೆಯಲ್ಲಿ ಸ್ಥಾಪಿಸಿದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಇದೇ ಮತಗಟ್ಟೆಯಲ್ಲಿ ಎಂಎಲ್ಸಿ ಎಸ್.ಎಸ್.ಬೋಸರಾಜ, ನಗರ ಶಾಸಕ ಡಾ| ಶಿವರಾಜ ಪಾಟೀಲ ಹಕ್ಕು ಚಲಾಯಿಸಿದರು. ಗ್ರಾಮೀಣ ಕ್ಷೇತ್ರದ ಶಾಸಕ ದದ್ದಲ್ ಬಸನಗೌಡ ಮಾನ್ವಿ ತಾಲೂಕು ದದ್ದಲ್ ಗ್ರಾಮದಲ್ಲಿ ಹಕ್ಕು ಚಲಾಯಿಸಿದರೆ. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಿ.ಕಿಶೋರಬಾಬು ನಗರದ ಎಪಿಎಂಸಿಯಲ್ಲಿ ಸ್ಥಾಪಿಸಿದ್ದ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು. ಕಿಲ್ಲೆ ಬೃಹನ್ಮಠದ ಸ್ವಾಮೀಜಿ ಬೇರೂನ್ ಕಿಲ್ಲಾದಲ್ಲಿ ಮತಗಟ್ಟೆಯಲ್ಲಿ ಹಕ್ಕು ಚಲಾಯಿಸಿದರು.