Advertisement

ಈ ಚುನಾವಣೆಯಲ್ಲಿ ಇಲ್ಲ ಮೋದಿ ಅಲೆ: ಮೊಯ್ಲಿ

03:26 PM Apr 22, 2019 | Naveen |

ರಾಯಚೂರು: ಪ್ರಧಾನಿ ಮೋದಿ ಏನು ಸಾಧಿಸಿದ್ದಾರೆ ಎಂಬ ಕಾರಣಕ್ಕೆ ದೇಶದಲ್ಲಿ ಅವರ ಅಲೆಯಿದೆ? 2014ರಲ್ಲಿ ಅಲ್ಪ ಪ್ರಮಾಣದಲ್ಲಿದ್ದ ಅಲೆ ಈ ಚುನಾವಣೆಯಲ್ಲಿ ಸಂಪೂರ್ಣ ಇಲ್ಲದಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯ್ಲಿ ತಿಳಿಸಿದರು.

Advertisement

ನಗರದ ಪತ್ರಿಕಾ ಭವನದಲ್ಲಿ ರವಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿ ಬಿಜೆಪಿ 5-6 ಸೀಟು ಗೆಲ್ಲಬಹುದಷ್ಟೇ. ದಕ್ಷಿಣ ಭಾರತದ ಆಂಧ್ರ-ತೆಲಂಗಾಣ, ತಮಿಳುನಾಡು ಮತ್ತು ಕೇರಳದಲ್ಲಿ ಬಿಜೆಪಿಗೆ ನೆಲೆಯೇ ಇಲ್ಲ. ಇನ್ನು ರಾಜಸ್ಥಾನ, ಛತ್ತೀಸಗಢ್, ಮಧ್ಯಪ್ರದೇಶದಲ್ಲಿ ಬೀಸಿದ ಗಾಳಿಯೇ ಇಲ್ಲೂ ಬೀಸಿದರೆ ಬಿಜೆಪಿ ಸಂಪೂರ್ಣ ನೆಲಕಚ್ಚಲಿದೆ ಎಂದರು.

ಮೋದಿ ಬಗ್ಗೆ ನಮಗೆ ಯಾವುದೇ ಆತಂಕವಿಲ್ಲ. ಈ ಬಾರಿ ನಮಗೆ ಜನರು ಬೆಂಬಲಿಸುವ ವಿಶ್ವಾಸವಿದೆ. ಅಧಿಕಾರಕ್ಕೆ ಬರುವ ಮುನ್ನ ನರೇಂದ್ರ ಮೋದಿ ನೀಡಿದ್ದ ಭರವಸೆಗಳೆಲ್ಲವೂ ಹುಸಿಯಾಗಿವೆ. ಕಪ್ಪು ಹಣ ವಾಪಸ್‌ ತರುವುದು, ಉದ್ಯೋಗ ಸೃಷ್ಟಿ, ಬಡವರ ಖಾತೆಗೆ ಹಣ ಹಾಕುವುದು ಸೇರಿ ಅವರು ನೀಡಿದ ಯಾವ ಭರವಸೆ ಈಡೇರಿಲ್ಲ. ಬದಲಿಗೆ ನೋಟ್ ಬ್ಯಾನ್‌, ಜಿಎಸ್‌ಟಿ ಜಾರಿಗೊಳಿಸಿ ಜನರಿಗೆ ಸಂಕಷ್ಟ ತಂದೊಡ್ಡಿದರು ಎಂದು ದೂರಿದರು.

ಮಹಾಘಟಬಂಧನ್‌ ರಚಿಸಿದ್ದೇ ಬಿಜೆಪಿಯನ್ನು ಅಧಿಕಾರದಿಂದ ಕೆಳಗಿಳಿಸುವ ಉದ್ದೇಶದಿಂದ. ಇದಕ್ಕೆ ಕೈ ಜೋಡಿಸಿದ ನಾಯಕರಲ್ಲಿ ಯಾವುದೇ ಗೊಂದಲಗಳಿಲ್ಲ. 27 ಪಕ್ಷಗಳು ಒಮ್ಮತದಿಂದಿದ್ದು, ಯಾವ ಪಕ್ಷ ಹೆಚ್ಚು ಸ್ಥಾನ ಪಡೆಯುವುದೋ ಆ ಪಕ್ಷದವರಿಗೆ ಪಿಎಂ ಸ್ಥಾನ ನೀಡುವ ಬಗ್ಗೆ ಮಾತುಕತೆ ಆಗಿದೆ. ಕಾಂಗ್ರೆಸ್‌ ದೊಡ್ಡ ಪಕ್ಷವಾಗಿ ಹೊರಹೊಮ್ಮುವ ವಿಶ್ವಾಸವಿದ್ದು, ರಾಹುಲ್ ಗಾಂಧಿ ಪ್ರಧಾನಿ ಆಗುವುದು ನಿಶ್ಚಿತ ಎಂದರು.

ರಾಹುಲ್ ಗಾಂಧಿ ಚುನಾವಣೆಗೆ ಸ್ಪರ್ಧಿಸುತ್ತಿರುವುದು ಇದೇ ಮೊದಲಲ್ಲ. ಈ ಹಿಂದೆ ಎರಡ್ಮೂರು ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ ಹಾಗೆಲ್ಲ ಸುಮ್ಮನ್ನಿದ್ದವರು ಈಗ ಅವರ ಪೌರತ್ವ ವಿಚಾರ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದರು.

Advertisement

ತುಂಗಭ‌ದ್ರಾ ಹೂಳಿನ ಸಮಸ್ಯೆ, ನಾರಾಯಣಪುರ ಬಲದಂಡೆ ಕಾಲುವೆ ಆಧುನೀಕರಣದ ಬಗ್ಗೆ ಕಾಳಜಿ ವಹಿಸದ ಕೇಂದ್ರದ ಬಿಜೆಪಿ ಸರ್ಕಾರ ಮಹಾದಾಯಿ ಮತ್ತು ಕಾವೇರಿ ನೀರಿನ ವಿಷಯದಲ್ಲಿ ಮಲತಾಯಿ ಧೋರಣೆ ತೋರಿದೆ. ಹೈ-ಕ ಭಾಗಕ್ಕೆ 371ಜೆ ತಿದ್ದುಪಡಿ ಮಾಡಿ ವಿಶೇಷ ಸ್ಥಾನಮಾನ ನೀಡಿದ್ದು ಕಾಂಗ್ರೆಸ್‌ ಹೊರತು ಬಿಜೆಪಿಯಲ್ಲ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎ.ವಸಂತಕುಮಾರ, ಕಾಂಗ್ರೆಸ್‌ ಜಿಲ್ಲಾಧ್ಯಕ್ಷ ರಾಮಣ್ಣ ಇರಬಗೇರಾ, ಮಾಜಿ ಶಾಸಕ ಸೈಯ್ಯದ್‌ ಯಾಸಿನ್‌, ಮುಖಂಡರಾದ ಕೆ.ಶಾಂತಪ್ಪ, ರುದ್ರಪ್ಪ ಅಂಗಡಿ, ಪಾರಸಮಲ್ ಸುಖಾಣಿ, ಜಿ.ಬಸವರಾಜರೆಡ್ಡಿ, ನಿರ್ಮಲಾ ಬೆಣ್ಣೆ ಇದ್ದರು.

ಈ ಚುನಾವಣೆಯಲ್ಲಿ ಕಾಂಗ್ರೆಸ್‌ ಪರ ಒಲವಿದ್ದು, ಹೆಚ್ಚು ಸ್ಥಾನ ಗೆಲ್ಲುವ ಮೂಲಕ ಅಧಿಕಾರದ ಚುಕ್ಕಾಣಿ ಹಿಡಿಯುವ ವಿಶ್ವಾಸವಿದೆ. ಯಾವುದೇ ಕಾರಣಕ್ಕೂ ಮೋದಿ ಮತ್ತೂಮ್ಮೆ ಪ್ರಧಾನಿಯಾಗುವುದಿಲ್ಲ. ಮೋದಿ ಅಲೆ ಎಲೆಯಾಗಿ ಮಾರ್ಪಟ್ಟಿದ್ದು, ಆ ಎಲೆ ಕೂಡ ಒಣಗಿ ಹೋಗಿದೆ.
ವೀರಪ್ಪ ಮೊಯ್ಲಿ,
ಮಾಜಿ ಸಿಎಂ

Advertisement

Udayavani is now on Telegram. Click here to join our channel and stay updated with the latest news.

Next