Advertisement

ನೌಕರಿ ಕೊಡಿಸುವುದಾಗಿ ಹಣ ಪಡೆದ ಅಧಿಕಾರಿ ಹುಡುಕುತ್ತ ಬಂದ ದಂಪತಿ!

04:12 PM Jun 19, 2019 | Naveen |

ರಾಯಬಾಗ: ನೌಕರಿ ಕೊಡಿಸುವುದಾಗಿ ಆಮೀಷಯೊಡ್ಡಿ ಲಕ್ಷಾಂತರ ರೂ. ತೆಗೆದುಕೊಂಡು ವರ್ಗಾವಣೆಗೊಂಡ ಅಧಿಕಾರಿಯನ್ನು ಹುಡುಕಿಕೊಂಡು ದಂಪತಿ ಯೊಬ್ಬರು ಬೀದರದಿಂದ ಪಟ್ಟಣಕ್ಕೆ ಆಗಮಿ ಸಿದ್ದು, ಮಂಗಳವಾರ ಬೆಳಕಿಗೆ ಬಂದಿದೆ.

Advertisement

ಪ್ರಸ್ತುತ ರಾಯಬಾಗ ಸಿಡಿಪಿಒ ಆಗಿ ಕಾರ್ಯನಿರ್ವಹಿಸುತ್ತಿರುವ ಡಿ.ಎಚ್. ಪಾಯಕ ಎಂಬ ಅಧಿಕಾರಿ ಈ ಹಿಂದೆ 2011ರಿಂದ 2017 ರವರೆಗೆ ಬೀದರ ಜಿಲ್ಲೆಯ ಔರಾದ ತಾಲೂಕಿನಲ್ಲಿ ಕಾರ್ಯ ನಿರ್ವಹಿಸಿದ್ದಾರೆ. ಈ ವೇಳೆಯಲ್ಲಿ 2013ರಲ್ಲಿ ಅಂಗನವಾಡಿ ಕಾರ್ಯಕರ್ತೆ ನೇಮಕ ಸಂದರ್ಭದಲ್ಲಿ ಔರಾದ ತಾಲೂಕಿನ ಜ್ಯೋತಿ ಗಣೇಶ ಎಂಬುವರಿಗೆ ಕೆಲಸ ಕೊಡಿಸುವುದಾಗಿ ಹೇಳಿ 1.50 ಲಕ್ಷ ರೂ. ಪಡೆದಿದ್ದಾರೆ. ಈಗ ನೌಕರಿಯನ್ನು ಕೊಡಿಸದೆ, ಹಣವನ್ನು ಮರಳಿ ನೀಡದೆ ಇಲ್ಲಿಗೆ ವರ್ಗವಾಗಿರುವ ಅಧಿಕಾರಿಯನ್ನು ಹುಡುಕಿಕೊಂಡು ಬಂದಿದ್ದಾಗಿ ರಾಮರಾವ್‌ ರಾಠೊಡ ದಂಪತಿ ತಿಳಿಸಿದ್ದಾರೆ. ಏಕಾಏಕಿ ಔರಾದದಿಂದ ವರ್ಗಗೊಂಡ ಅಧಿಕಾರಿಯನ್ನು ಹುಡುಕುತ್ತ ಕಳೆದ 4-5 ದಿನಗಳ ಹಿಂದೆ ಪಟ್ಟಣಕ್ಕೆ ಬಂದಿರುವ ರಾಮರಾವ್‌ ರಾಠೊಡ ದಂಪತಿ, ಸ್ಥಳೀಯರ ಸಹಾಯದಿಂದ ಅಧಿಕಾರಿಯನ್ನು ಪತ್ತೆ ಹಚ್ಚಿ, ನೀಡಿದ ಹಣ ಮರಳಿ ಕೊಡುವಂತೆ ಬೇಡಿಕೊಂಡಿದ್ದಾರೆ. ಅದಕ್ಕೆ ಎರಡ್ಮೂರು ಸಲ ನೋಡೋಣ ಎಂದ ಅಧಿಕಾರಿ, ಮಂಗಳವಾರ ತಾವು ಯಾರು ಎಂಬುದೇ ತನಗೆ ಗೊತ್ತಿಲ್ಲವೆಂದು ತಿರುಗಿ ಬಿದ್ದಿದ್ದಾನೆ ಎಂದು ಹೇಳಲಾಗಿದೆ. ಈ ವೇಳೆ ಸುದ್ದಿಗಾರರೊಂದಿಗೆ ಮಾತನಾಡಿದ ರಾಮರಾವ್‌ ರಾಠೊಡ, ಊರಿನ ಪಂಚರು ಕೂಡಿ ಅಧಿಕಾರಿಯಿಂದ ಹಣ ವಸೂಲಿ ಮಾಡಿಸಿಕೊಡುವುದಾಗಿ ಹೇಳಿದ್ದಾರೆ. ಮತ್ತು ಹಣ ನೀಡಿದಕ್ಕೆ ನಮ್ಮ ಬಳಿ ಯಾವುದೇ ದಾಖಲೆ ಇಲ್ಲದ್ದರಿಂದ ಪೊಲೀಸರಿಗೆ ದೂರು ನೀಡಿಲ್ಲವೆಂದು ತಿಳಿಸಿದರು.

1999ರಿಂದ 2003 ಮತ್ತು 2011ರಿಂದ 2017 ರವರೆಗೆ ಔರಾದದಲ್ಲಿ ಕಾರ್ಯ ನಿರ್ವಹಿಸಿದ್ದೇನೆ. ಇವರು ಯಾವಾಗ ನನ್ನ ಕಡೆಗೆ ಬಂದಿದ್ದರು ಅಂತ ನನಗೆ ಗೊತ್ತಿಲ್ಲ. ನನಗೆ ಮತ್ತು ಇವರಿಗೆ ಏನೂ ಸಂಬಂಧವಿಲ್ಲ. ಇದರಲ್ಲಿ ನನ್ನದೇನು ಪಾತ್ರವಿಲ್ಲ.
ಡಿ.ಎಚ್. ಪಾಯಕ, ಸಿಡಿಪಿಒ

Advertisement

Udayavani is now on Telegram. Click here to join our channel and stay updated with the latest news.

Next