ಬೆಂಗಳೂರು: ಕರ್ನಾಟಕ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದ 3 ಸಾವಿರ ಹಳ್ಳಿಗಳಿಗೆ ಅನುಕೂಲವಾಗುವಂತೆ 33 ನದಿಗಳ ಪುನಶ್ಚೇತನ ಮಾಡಲಿದ್ದೇವೆ ಎಂದು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ರವಿಶಂಕರ್ ಗುರೂಜಿ ಘೋಷಿಸಿದರು.
ಅಂತಾರಾಷ್ಟ್ರೀಯ ಮಾನವೀಯ ಮೌಲ್ಯಗಳ ಸಂಸ್ಥೆಯ (ಐಎಎಚ್‌ವಿ)ಸಹಯೋಗದೊಂದಿಗೆ ಕನಕಪುರ ರಸ್ತೆಯ ಆರ್ಟ್ ಆಫ್ ಲಿವಿಂಗ್‌ನಲ್ಲಿ ಹಮ್ಮಿಕೊಂಡಿರುವ ನದಿಗಳ ಪುನಶ್ಚೇತನ ಸಮಾವೇಶಕ್ಕೆ ಮಂಗಳವಾರ ಚಾಲನೆ ನೀಡಿ ಮಾತನಾಡಿದರು.
ಕೇರಳದ 1, ಕರ್ನಾಟಕದ 3, ತಮಿಳುನಾಡಿನ 4, ಮಹಾರಾಷ್ಟ್ರದ 25 ನದಿ ಸೇರಿ 33 ನದಿಗಳ ಪುನಶ್ಚೇತನ ಯೋಜನೆಯನ್ನು ವಿವಿಧ ಸಂಸ್ಥೆಗಳ ಸಹಯೋಗದಲ್ಲಿ ಹಮ್ಮಿಕೊಳ್ಳಲಾಗಿದೆ. ಇದರಿಂದ ನಾಲ್ಕು ರಾಜ್ಯದ 3 ಸಾವಿರ ಹಳ್ಳಿಗಳ ಜನರಿಗೆ ಲಾಭವಾಗಲಿದೆ. ರಾಜ್ಯದ ವೇದಾವತಿ, ಕುಮುದ್ವತಿ ಮತ್ತು ಪಾಲಾವರ್ ನದಿಗಳ ಪುನಶ್ಚೇತನ ಕಾರ್ಯವನ್ನು ಆದಷ್ಟು ಬೇಗ ಆರಂಭಿಸಲಿದ್ದೇವೆ ಎಂದರು.
ಕುಮುದ್ವತಿ ನದಿ ಪುನಶ್ಚೇತನದಿಂದ ತಿಪ್ಪಗೊಂಡನಹಳ್ಳಿ ಜಲಾಶಯ ತುಂಬಲಿದೆ. ಇದರಿಂದ ಬೆಂಗಳೂರು ನಗರದ ಶೇ.60ರಷ್ಟು ಪ್ರದೇಶಕ್ಕೆ ನೀರು ಸಿಗಲಿದೆ. ನದಿಗಳ ಪುನಶ್ಚೇತನಕ್ಕೆ ಸರ್ಕಾರ 100 ಕೋಟಿ ರೂ. ಅಂದಾಜು ಹಾಕಿದೆ. ಉತ್ಸಾಹಿ ಕಾರ್ಯಕರ್ತರ ಸಹಾಯದಿಂದ 12 ಕೋಟಿ ರೂ.ಗಳಲ್ಲಿ ಪುನಶ್ಚೇತನ ಕಾರ್ಯ ಮಾಡಲಿದ್ದೇವೆ ಎಂಬ ಮಾಹಿತಿ ನೀಡಿದರು.
ನಿವೃತ್ತ ನ್ಯಾಯಮೂರ್ತಿ ಎಂ.ಎನ್. ವೆಂಕಟಾಚಲಯ್ಯ ಮಾತನಾಡಿದರು. ಇಸ್ರೋ ಅಧ್ಯಕ್ಷ ಕಿರಣ್ ಕುಮಾರ್, ಎಚ್‌ಎಎಲ್ ಸಂಸ್ಥೆಯ ಅಧ್ಯಕ್ಷ ಟಿ.ಸುವರ್ಣ ರಾಜು, ಕಾರ್ಡಿಫ್ ವಿವಿ ಪ್ರೊ.ರೋಜರ್ ಎ.ಫಾಲ್ಕನರ್ ಮೊದಲಾದವರು ಉಪಸ್ಥಿತರಿದ್ದರು.
ಆರ್ಟ್ ಆಫ್ ಲಿವಿಂಗ್‌ನ ನದಿ ಪುನಶ್ಚೇತನ ಕಾರ್ಯಕ್ಕೆ ಇಸ್ರೋ ಸಂಪೂರ್ಣ ಬೆಂಬಲ ನೀಡಲಿದೆ. ಉಪಗ್ರಹಗಳ ಮೂಲಕ ನದಿಗಳ ನೀರಿನ ಮಟ್ಟ ಮತ್ತು ಸಾಮರ್ಥ್ಯದ ದತ್ತಾಂಶ ಕಲೆಹಾಕುತ್ತಿದ್ದೇವೆ. 42 ಉಪಗ್ರಹ ಈ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸುತ್ತಿದೆ. ಈ ಮಾಹಿತಿ ಆಧಾರದಲ್ಲಿ ಸರ್ಕಾರಗಳು ಸುಲಭವಾಗಿ ನದಿ ಪುಶ್ಚೇತನ ಮಾಡಬಹುದು.
-ಎ.ಎಸ್.ಕಿರಣ ಕುಮಾರ್, ಇಸ್ರೋ ಅಧ್ಯಕ್ಷ