Advertisement

ಅಪ್ಪ ಕೊಡಿಸಿದ ಸೈಕಲ್‌ನಲ್ಲೇ ಊರು ಸುತ್ತುವ ರವೀಂದ್ರ ಕುಮಾರ್‌ :36 ವರ್ಷಗಳಿಂದ ಸೈಕಲೇ ಆಧಾರ

11:10 PM Jan 22, 2021 | Team Udayavani |

ಕಾರ್ಕಳ:  ಪೋಸ್ಟ್‌ ಮ್ಯಾನ್‌ ಎಂದರೆ ನಡೆದುಕೊಂಡು, ಸೈಕಲ್‌ನಲ್ಲೇ ಹೋಗುತ್ತಿದ್ದ ಕಾಲವಿತ್ತು. ಆದರೆ ಈಗ ಸೈಕಲ್‌ನಲ್ಲಿ ಹೋಗುವವರು ಇಲ್ಲವೇ ಇಲ್ಲ ಎಂದು ಹೇಳಬಹುದು. ಮೋಟಾರು ವಾಹನಗಳ ಭರಾಟೆಯ ಈ ದಿನಗಳಲ್ಲಿ ಅಪ್ಪನ ಮೇಲಿನ ಪ್ರೀತಿಗೆ, ಅವರೇ ತೆಗೆಸಿಕೊಟ್ಟ ಸೈಕಲನ್ನು  ಏರಿ ಕಳೆದ 36 ವರ್ಷಗಳಿಂದ ಅಂಚೆ ಬಟೆವಾಡೆ ಮಾಡುವ  ಪೋಸ್ಟ್‌ಮ್ಯಾನ್‌  ಒಬ್ಬರು  ಬೈಲೂರಿನಲ್ಲಿದ್ದಾರೆ.

Advertisement

ನಿಟ್ಟೆ ನಿವಾಸಿ ರವೀಂದ್ರ ಕುಮಾರ್‌ ಅವರು. ಬೈಲೂರಿನ ಅಂಚೆ ಕಚೇರಿಯಲ್ಲಿ ಪೋಸ್ಟ್‌ ಮ್ಯಾನ್‌. ವಯಸ್ಸು 58. 1984ರಲ್ಲಿ ಕೆಲಸಕ್ಕೆ ಸೇರಿದ್ದರು. ಅಂದಿನಿಂದ ಇಂದಿನವರೆಗೂ ಇವರು ಸೈಕಲ್‌ ತ್ಯಜಿಸಿಲ್ಲ.  ಇವರು ದಿನಕ್ಕೆ 35 ಕಿ.ಮೀ. ಸೈಕಲ್‌ನಲ್ಲಿ ಸುತ್ತು ತ್ತಾ ರೆ.

ಅಪ್ಪ ಕೊಡಿಸಿದ ಸೈಕಲ್‌  :

ದಿ| ಕೆ ರಘುರಾಮ್‌ ರಾವ್‌-ವಾರಿಜಾ ದಂಪತಿಯ ಪುತ್ರರಿವರು. ತಂದೆ ಸಿಂಡಿಕೇಟ್‌ ಬ್ಯಾಂಕ್‌ ಉದ್ಯೋಗಿಯಾಗಿದ್ದರು. ಓಡಾಟಕ್ಕೆ ಸೈಕಲ್‌ಬಳಸುತ್ತಿದ್ದರು. ಮಕ್ಕಳಿಗೆ ಸೈಕಲ್‌ ಸವಾರಿ ಆರೋಗ್ಯಕ್ಕೆ ಒಳ್ಳೆಯದು ಎಂದು ಹಿತ ವಚನ ನೀಡುತ್ತಿದ್ದರು. ಸೈಕಲ್‌ನಲ್ಲೇ ವೃತ್ತಿ ನಡೆಸಿ, ಮಗನಿಗೂ ತೆಗೆಸಿಕೊಟ್ಟಿದ್ದರು.

ಅಂದು ಅಪ್ಪ ತೆಗೆಸಿಕೊಟ್ಟ ಸೈಕಲ್‌ ಅನ್ನು ಹಾಗೆಯೇ ಅವರ ನೆನಪಿಗಾಗಿ ಉಳಿಸಿ, ಬಳಸುತ್ತಿದ್ದಾರೆ. ಅಪ್ಪನ ಮೇಲಿನ ಪ್ರೀತಿಗಾಗಿ ನಿವೃತ್ತಿ ತನಕವೂ ಬಳಸುವುದಾಗಿ ಅಭಿಮಾನದಿಂದ ಹೇಳುತ್ತಾರೆ.

Advertisement

ಬೆಳಗ್ಗೆ 10 ಗಂಟೆಯಿಂದ 2 ಗಂಟೆ ತನಕ ಸೈಕಲ್‌ ಏರಿ ಹೊರಟು ಗಾಳಿ-ಮಳೆ ಎನ್ನದೆ ಸೈಕಲ್‌ ತುಳಿಯುತ್ತಾರೆ. ಅನಾರೋಗ್ಯದಿಂದ ಆಪರೇಷನ್‌ಗೆ ಒಳಗಾಗಿ ಸೈಕಲ್‌ ಬಳಸದಂತೆ ವೈದ್ಯರು ಸಲಹೆ ನೀಡಿದ್ದರೂ ಸೈಕಲ್‌ ತುಳಿಯುವುದು  ಬಿಟ್ಟಿಲ್ಲ. ಇದರೊಂದಿಗೆ ಸಾಮಾಜಿಕ ಚಟುವಟಿಕೆಗಳು, ವ್ಯಸನಗಳ ವಿರುದ್ಧ ಜಾಗೃತಿಯಲ್ಲೂ ಭಾಗಿಯಾಗಿ ಭಾಷಣಗಳನ್ನು ಮಾಡುತ್ತಾರೆ.

ಅಪಹಾಸ್ಯ, ಮೆಚ್ಚುಗೆ  ಎರಡೂ ಕೇಳಿದ್ದೇನೆ :

ಸೈಕಲ್‌ ತುಳಿದು ತೆರಳುವಾಗೆಲ್ಲ ಸಮಾಜ ದಿಂದ ಅಪಹಾಸ್ಯ, ನಿಂದನೆ ಮಾತು ಕೇಳಿದ್ದೇನೆ. ಗುಜರಿ ಸೈಕಲ್‌ ಬಿಟ್ಟು ಮೋಟಾರು ವಾಹನ ಖರೀದಿಸು. ಓಬಿರಾಯನ ಕಾಲದಲ್ಲಿದ್ದೀಯ  ಅಂತ ಹೇಳುತ್ತಾರೆ. ಖರೀದಿಸುವಷ್ಟು  ಸ್ಥಿತಿವಂತನಾದರೂ  ಅಪ್ಪನ  ಪ್ರೀತಿಗೆ ಸೈಕಲ್‌ ತೊರೆಯಲ್ಲ ಎನ್ನುತ್ತಾರೆ  ಪೋಸ್ಟ್‌ಮ್ಯಾನ್‌.

ಸೈಕಲ್‌ ಸವಾರಿ  ಮಾಡಿದರೆ ಮಾಲಿನ್ಯ ತಗ್ಗುತ್ತದೆ, ದೇಹಕ್ಕೆ ವ್ಯಾಯಾಮವೂ ಸಿಗುತ್ತದೆ. ದೇಹ ಉಲ್ಲಾಸದಿಂದ ಇರುತ್ತದೆ. ಇಂಧನ ಸಂಪತ್ತೂ ಉಳಿಯುತ್ತದೆ.  ರವೀಂದ್ರಕುಮಾರ್‌ ಕೆ. 

Advertisement

Udayavani is now on Telegram. Click here to join our channel and stay updated with the latest news.

Next