ಜೇವರ್ಗಿ: ಪಟ್ಟಣದ ಹಳೆಯ ತಾಲೂಕು ಪಂಚಾಯತ ಕಟ್ಟಡದ ಸ್ಥಳದಲ್ಲಿ ನಿರ್ಮಾಣವಾಗುತ್ತಿರುವ 1.95 ಕೋಟಿ ರೂ. ವೆಚ್ಚದ ಪುರಭವನ ಕಾಮಗಾರಿಯನ್ನುಅ ಶುಕ್ರವಾರ ಶಾಸಕ ಡಾ| ಅಜಯಸಿಂಗ್ ಬುಧವಾರ ವೀಕ್ಷಿಸಿದರು.
ಪಟ್ಟಣದ ಲೋಕೋಪಯೋಗಿ ಬಂದರು ಮತ್ತು ಒಳನಾಡು ಜಲಸಾರಿಗೆ ಇಲಾಖೆಯ 2014-15ನೇ ಸಾಲಿನ ಎಚ್‌ಕೆಆರ್‌ಡಿಬಿ ವತಿಯಿಂದ ನಿರ್ಮಿಸಲಾಗುತ್ತಿರುವ ಪುರಭವನ ಕಾಮಗಾರಿ ವೀಕ್ಷಿಸಿ ಮಾತನಾಡಿದ ಶಾಸಕ ಡಾ| ಅಜಯಸಿಂಗ್, ಪುರಭವನ ಕಾಮಗಾರಿ ನಿಗದಿತ ಅವಧಿಯಲ್ಲಿ ಪೂರ್ಣಗೊಳ್ಳಬೇಕು.
ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದ ಮಾದರಿಯಲ್ಲಿ ಪುರಭವನ ನಿರ್ಮಿಸಲಾಗುವುದು ಎಂದರು. ಗುಣಮಟ್ಟದಿಂದ ಕಾಮಗಾರಿ ನಿರ್ಮಿಸುವಂತೆ ಸ್ಥಳದಲ್ಲಿರುವ ಅ ಧಿಕಾರಿಗಳಿಗೆ ಸೂಚಿಸಿದರು. ಡಿಸೆಂಬರ್ ಅಂತ್ಯದೊಳಗೆ ಎಲ್ಲ ಕಾಮಗಾರಿಗಳು ಮುಗಿಯಬೇಕು.
ಸರಕಾರದ ಅನುದಾನವನ್ನು ಸಮರ್ಥವಾಗಿ ಬಳಸಿಕೊಳ್ಳಲಾಗುತ್ತಿದೆ. ಪಟ್ಟಣದಲ್ಲಿಯೇ ಕೊಟ್ಯಂತರ ರೂ.ಅನುದಾನದಲ್ಲಿ ಹಲವಾರು ಅಭಿವೃದ್ಧಿ ಕಾಮಗಾರಿಗಳನ್ನು ಮಾಡಲಾಗುತ್ತಿದ್ದು, ಸರಕಾರದಿಂದ ತಾಲೂಕಿನ ಅಭಿವೃದ್ಧಿಗೆ ಸಾಕಷ್ಟು ಹಣ ಬಿಡುಗಡೆಯಾಗಿದೆ ಎಂದು ಹೇಳಿದರು.
ಪಟ್ಟಣದ ಮಾದರಿಯಲ್ಲಿ ಎಲ್ಲ ಹೋಬಳಿಗಳಲ್ಲಿಯೂ ಸರಕಾರದ ಯೋಜನೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಪಟ್ಟಣ ಮತ್ತು ಗ್ರಾಮೀಣ ಜನರಿಗೆ ಅನುಕೂಲವಾಗುವ ಯೋಜನೆಗಳನ್ನು ತಾಲೂಕಿಗೆ ತರಲು ಶ್ರಮಿಸಲಾಗುತ್ತಿದೆ. ಮರಳು ಮತ್ತು ಅನುದಾನದ ಕೊರತೆಯಿಂದ ಯಾವ ಕಾಮಗಾರಿಗಳು ನಿಲ್ಲಿಸಬಾರದು. ಈ ಬಗ್ಗೆ ಜಿಲ್ಲಾಧಿಕಾರಿಗಳ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
ಜಿಪಂ ಸದಸ್ಯ ಶಾಂತಪ್ಪ ಕೂಡಲಗಿ, ಮುಖಂಡರಾದ ರಾಜಶೇಖರ ಸೀರಿ, ಅಬ್ದುಲ್ ರಹೇಮಾನ ಪಟೇಲ, ಮಹಿಬೂಬಸಾಬ ಶಾನವಾಲೆ, ರಾಜಶೇಖರ ಖಣದಾಳ, ವಸಂತ ನರಿಬೋಳ, ಲೋಕೋಪಯೋಗಿ ಇಲಾಖೆ ಎಇಇ ಪಲ್ಲಾಸತ್ಯಾಶೀಲ ರೆಡ್ಡಿ, ಇಂಜಿನಿಯರ್ ಭೀಮಸೇನ ಜೋಶಿ, ಮರೆಪ್ಪ ಸರಡಗಿ ಹಾಗೂ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇದ್ದರು.