Advertisement
ವಜ್ರ ಮಹೋತ್ಸವದ ವೇಳೆ ಕಲಾ ಕ್ಷೇತ್ರದ ನವೀಕರಣ ಎಂಬ ಸುದ್ದಿಗೆ ಕಲಾಲೋಕ ಪುಳಕಗೊಳ್ಳಬೇಕಿತ್ತು. ಆದರೆ, ರಾಜ್ಯದ ಹಿರಿ ಕಿರಿಯ ಕಲಾವಿದರಲ್ಲಿ ಈ ಸುದ್ದಿ ಆತಂಕ ತಂದೊಡ್ಡಿದೆ. ಕಾಮಗಾರಿ ನೆಪದಲ್ಲಿ ವರ್ಷಾನುಗಟ್ಟಲೆ ಕಲಾ ಚಟುವಟಿಕೆ ಸ್ತಬ್ಧಗೊಳ್ಳಬಹುದು, ನವೀಕರಣಗೊಂಡ ಬಳಿಕ ಪ್ರವೇಶ ಶುಲ್ಕ ಮತ್ತೆ ಏರಿಕೆ ಆಗಬಹುದು, ಕಲಾ ಕ್ಷೇತ್ರದ ಮೂಲ ಸ್ವರೂಪಕ್ಕೆ ಧಕ್ಕೆ ಬರಬಹುದು ಎಂಬ ಆತಂಕ ಕಲಾವಿದರನ್ನು ಕಾಡುತ್ತಿದೆ. ಇದರೊಂದಿಗೆ ಕಲಾ ಕ್ಷೇತ್ರದ ನವೀಕರಣಕ್ಕೆ 24 ಕೋಟಿ ರೂ. ಖರ್ಚಾಗುತ್ತಿದೆ ಎಂಬ ಮಾಹಿತಿ ಕಲಾವಿದರ ಹುಬ್ಬೇರುವಂತೆ ಮಾಡಿದೆ. ಇಷ್ಟೊಂದು ಖರ್ಚು ಮಾಡಿ ನವೀಕರಣ ನಡೆಸುವ ಅಗತ್ಯವಿಲ್ಲ ಎಂಬುದು ಕಲಾವಿದರ ಅಭಿಪ್ರಾಯ.
Related Articles
Advertisement
ನವೀಕರಣ ಕೈಬಿಟ್ಟು ನಾಲ್ಕು ದಿಕ್ಕಲ್ಲಿ ರಂಗ ಮಂದಿರ ಕಟ್ಟಲಿ: ಕಲಾ ಕ್ಷೇತ್ರದ ಸಣ್ಣಪುಟ್ಟ ರಿಪೇರಿಯೊಂದಿಗೆ ರಾಜಧಾನಿಯ ನಾಲ್ಕು ದಿಕ್ಕುಗಳಲ್ಲಿ ರಂಗ ಮಂದಿರ ಕಟ್ಟುವ ಕೆಲಸಕ್ಕೆ ವೇಗ ನೀಡಬೇಕು. ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ರಂಗ ಮಂದಿರ ನಿರ್ಮಾಣಗೊಳ್ಳಬೇಕು. ಇರುವ ರಂಗ ಮಂದಿರಗಳ ನಿರ್ವಹಣೆ ನಡೆಯಬೇಕು. ರಂಗ ಕೇಂದ್ರಗಳ ನಿರ್ಮಾಣ, ಕಾಮಗಾರಿಗಳಲ್ಲಿ ಕಲಾವಿದರ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕು. ಕಲಾ ಕ್ಷೇತ್ರದಲ್ಲಿ ಜಯಂತಿ ಕಾರ್ಯಕ್ರಮಗಳನ್ನು ಕಡಿಮೆ ಮಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಒತ್ತು ನೀಡಬೇಕು ಎಂಬುದು ಕಲಾವಿದರ ಬೇಡಿಕೆಯಾಗಿದೆ.
ಪ್ರಸ್ತಾವನೆಯಲ್ಲಿ ಏನು ಇದೆ?: ಸಂಸ ಬಯಲು ರಂಗ ಮಂದಿರ ಮತ್ತು ಕಲಾ ಕ್ಷೇತ್ರದ ಮಧ್ಯೆ ಗೋಡೆ ನಿರ್ಮಾಣ, ವೇದಿಕೆಗೆ ಹೈಡ್ರಾಲಿಕ್ ತಂತ್ರಜ್ಞಾನ ಬಳಸಿ 4 ಅಡಿ ಕೆಳಗೆ ಚಲಿ ಸುವ ತಂತ್ರಜ್ಞಾನದ ಅಳವಡಿಕೆ, ಆಸನಗಳ ಬದಲಾವಣೆ, ಧ್ವನಿ, ಬೆಳಕಿಗೆ ಆಧುನಿಕ ತಂತ್ರಜ್ಞಾನ ವ್ಯವಸ್ಥೆ, ಕೇಂದ್ರೀಕೃತ ಹವಾನಿಯಂತ್ರಣ ವ್ಯವಸ್ಥೆ, ಲಲಿತಾ ಕಲಾ ಗ್ಯಾಲರಿ ಅಭಿವೃದ್ಧಿ, ಕಲಾ ಕ್ಷೇತ್ರದ ಇಕ್ಕೆಲಗಳಲ್ಲಿ ಭೋಜನ ನೀಡುವ ಜಾಗಗಳಿಗೆ ಚಾವಣಿ, ಸಂಸ ಬಯಲು ರಂಗ ಮಂದಿರಕ್ಕೆ ಚಾವಣಿ, ಧ್ವನಿ, ಬೆಳಕಿನ ವ್ಯವಸ್ಥೆಗೆ 24 ಕೋಟಿ ರೂ.ನ ಪ್ರಸ್ತಾವನೆ ಸಲ್ಲಿಕೆ ಆಗಿದೆ. ನವೀಕರಣದ ಬಗ್ಗೆ ಇಲಾಖೆ ಹೇಳುವುದೇನು?: ಕಲಾವಿದರ ಆಕ್ಷೇಪಗಳನ್ನು ಸಾರಸಗಟಾಗಿ ತಿರಸ್ಕರಿಸಿರುವ ಇಲಾಖೆ, ಕಲಾ ಕ್ಷೇತ್ರದೊಳಗೆ ಪ್ರದರ್ಶನ ನೀಡುವಾಗ ಭಾರೀ ಸೆಕೆ ಆಗುತ್ತದೆ, ನಮ್ಮ ಮೇಕಪ್ ಕರಗುತ್ತದೆ ಎಂದು ಹಲವು ಕಲಾವಿದರು ವೈಯಕ್ತಿಕವಾಗಿ ನಮಗೆ ದೂರು ನೀಡಿದ್ದಾರೆ.
ಇದರ ಜೊತೆಗೆ ಪ್ರೇಕ್ಷಕರು ಸಹ ಸೆಕೆಯಿಂದ ಕಿರಿಕಿರಿ ಅನುಭವಿಸುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಸೆಂಟ್ರಲೈಸ್ಡ್ ಎಸಿ ಅಳವಡಿಸುವ ತೀರ್ಮಾನಕ್ಕೆ ಬರಲಾಗಿದೆ. ಇನ್ನು ಆಸನಗಳ ಬಗ್ಗೆ ಪ್ರತಿಕ್ರಿಯಿಸಿರುವ ಇಲಾಖೆ ಅಧಿಕಾರಿಗಳು, ಈ ಹಿಂದೆ ಆಸನಗಳ ಕುಷನ್ ಮಾತ್ರ ಬದಲಾಯಿಸಲಾಗಿತ್ತು. ಆದರೆ, ಆಸನಗಳು ಸಣ್ಣದಾಗುತ್ತಿವೆ ಎಂಬ ಹಿನ್ನೆಲೆಯಲ್ಲಿ ತುಸು ಅಗಲ ಆಸನ ಅಳವಡಿಸಲು ಮುಂದಾಗಿದ್ದೇವೆ ಎಂದು ಸಮರ್ಥಿಸಿಕೊಳ್ಳುತ್ತಾರೆ. ರಂಗ ಚಟುವಟಿಕೆಗಳು ಭಿನ್ನ ಸ್ವರೂಪ ಪಡೆದುಕೊಳ್ಳುತ್ತಿವೆ. ಆಧುನಿಕ ರಂಗಭೂಮಿಯಲ್ಲಿ ಬೆಳಕು ಮತ್ತು ಧ್ವನಿ ಪ್ರಮುಖ ಪಾತ್ರ ವಹಿಸುತ್ತಿದೆ. ಈ ಹಿನ್ನೆಲೆಯಲ್ಲಿ ಆಧುನಿಕ ಸ್ಪರ್ಶ ನೀಡಲು ಮುಂದಾಗಿದ್ದೇವೆ. ಸಂಸ ರಂಗ ಬಯಲು ಮಂದಿರದ ಚಟುವಟಿಕೆಗಳಿಂದ ತೊಂದರೆ ಆಗುತ್ತಿರುವ ಬಗ್ಗೆ ಕಲಾವಿದರೇ ನೀಡಿದ ದೂರಿನ ಹಿನ್ನೆಲೆಯಲ್ಲಿ ಗೋಡೆ ಕಟ್ಟಲು ಮುಂದಾಗಿದ್ದೇವೆ ಎಂದು ಅಧಿಕಾರಿಗಳು ಹೇಳುತ್ತಾರೆ.
ನವೀಕರಣದ ಪ್ರಸ್ತಾವನೆ ಬಗ್ಗೆ : ಯಾವುದೇ ತೀರ್ಮಾನ ಆಗಿಲ್ಲ ರವೀಂದ್ರ ಕಲಾ ಕ್ಷೇತ್ರದ ನವೀಕರಣದ ಅಗತ್ಯತೆ ಬಗ್ಗೆ ಮಾತನಾಡಿರುವ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಿರಿಯ ಅಧಿಕಾರಿಗಳು, ನಾವು ನವೀಕರಣದ ಪ್ರಸ್ತಾವನೆ ಹೌಸಿಂಗ್ ಬೋರ್ಡ್ ಮುಂದೆ ಇಟ್ಟಿದ್ದೆವು. ಆವರು ಜಿಎಸ್‌ಟಿ ಸಹಿತ 24 ಕೋಟಿ ರೂ. ಯೋಜನೆ ನಮ್ಮ ಮುಂದಿಟ್ಟಿದ್ದಾರೆ. ನಾವು ಈ ಬಗ್ಗೆ ಯಾವುದೇ ತೀರ್ಮಾನ ಕೈಗೊಂಡಿಲ್ಲ. ಇದರಲ್ಲಿ ಯಾವ ಯೋಜನೆ ಕೈಗೆತ್ತಿಕೊಳ್ಳಬೇಕು, ಬಿಡಬೇಕು ಎಂಬುದು ಇನ್ನು ತೀರ್ಮಾನವಾಗಿಲ್ಲ. ಅಷ್ಟರಲ್ಲಿ 24 ಕೋಟಿ ರೂ.ನಲ್ಲಿ ಕಲಾಕ್ಷೇತ್ರ ಮತ್ತೆ ನವೀಕರಣ ಮಾಡುತ್ತಿದ್ದಾರೆ ಎಂಬ ಹುಯಿಲೆಬ್ಬಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.
ರವೀಂದ್ರ ಕಲಾಕ್ಷೇತ್ರವನ್ನು ಆಧುನೀ ಕರಣಗೊಳಿಸಬೇಕು ಎಂಬುದು ನಮ್ಮ ಇರಾದೆ. ಈ ಹಿನ್ನೆಲೆಯಲ್ಲಿ ಅಂದಾಜು ಪ್ರಸ್ತಾ ವನೆ ಸಲ್ಲಿಕೆಯಾಗಿದೆ. ಆದರೆ, ಇದಕ್ಕೆ ಕಲಾವಿ ದರ ವಿರೋಧ ಇದೆ. ಕಲಾಕ್ಷೇತ್ರ ಇನ್ನಷ್ಟು ಸುಸಜ್ಜಿತಗೊಳಿಸಬೇಕೆಂಬುದು ನಮ್ಮ ಉದ್ದೇಶ. ಕಲಾಕ್ಷೇತ್ರದ ಬಾಡಿಗೆ ದರ ಏರಿಸುವ ಪ್ರಸ್ತಾವನೆ ನಮ್ಮ ಮುಂದಿಲ್ಲ. ●ಶಿವರಾಜ ತಂಗಡಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ.
–ರಾಕೇಶ್ ಎನ್.ಎಸ್