ಹೊಸದಿಲ್ಲಿ: T20 ವಿಶ್ವಕಪ್ ವಿಜಯದ ನಂತರ ವಿರಾಟ್ ಕೊಹ್ಲಿ, ರೋಹಿತ್ ಶರ್ಮ ಅವರು ಟಿ 20 ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಿಸಿದ ಬೆನ್ನಲ್ಲೇ ಆಲ್ ರೌಂಡರ್ ರವೀಂದ್ರ ಜಡೇಜಾ ಅವರೂ ಅದೇ ಹಾದಿಯನ್ನು ಅನುಸರಿಸಿದ್ದಾರೆ.
ಬಾರ್ಬಡೋಸ್‌ನ ಕೆನ್ಸಿಂಗ್ಟನ್ ಓವಲ್‌ನಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ 7 ರನ್‌ಗಳಿಂದ ಜಯ ಸಾಧಿಸಿ ಎರಡನೇ ಬಾರಿ ಟಿ20 ವಿಶ್ವಕಪ್ ಟ್ರೋಫಿಯನ್ನು ಪ್ರಶಸ್ತಿ ಮುಡಿಗೇರಿಸಿಕೊಂಡ ಮರುದಿನ ಜಡೇಜಾ ಟಿ 20 ಅಂತಾರಾಷ್ಟ್ರೀಯ ಕ್ರಿಕೆಟಿಗೆ ನಿವೃತ್ತಿ ಘೋಷಣೆ ಮಾಡಿದ್ದಾರೆ.
T20 World Cup 2024 ಪಂದ್ಯಾವಳಿಯಲ್ಲಿ ಜಡೇಜಾ ಅಂತಹದ್ದೇನು ಫಾರ್ಮ್‌ನಲ್ಲಿರಲಿಲ್ಲ ಆದರೆ ಕಳೆದ ದಶಕದಲ್ಲಿ ವಿಶ್ವ ಕ್ರಿಕೆಟ್‌ನಲ್ಲಿ ಪ್ರಾಬಲ್ಯ ಸಾಧಿಸಿದ ಎಲ್ಲಾ ಮೂರು ಸ್ವರೂಪಗಳಲ್ಲಿ ಭಾರತ ತಂಡದ ಪರ ಅಮೋಘ ಆಟವಾಡಿದ್ದರು. ಸಾರ್ವಕಾಲಿಕ ಅತ್ಯುತ್ತಮ ಆಲ್‌ರೌಂಡರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ ಪಟ್ಟಿರುವ ಆಟಗಾರರಾಗಿದ್ದಾರೆ.
ಸಂಭ್ರಮದ ಕ್ಷಣದಲ್ಲಿ ತೇಲಾಡುತ್ತಿರುವ ಸಮಯದಲ್ಲೇ ಇನ್‌ಸ್ಟಾಗ್ರಾಮ್ ಪೋಸ್ಟ್ ಮಾಡಿರುವ 35 ರ ಹರೆಯದ ಜಡೇಜಾ ” ಧನ್ಯವಾದ ತುಂಬಿದ ಹೃದಯದಿಂದ ನಾನು T20 ಅಂತಾರಾಷ್ಟ್ರೀಯ ಪಂದ್ಯಗಳಿಗೆ ವಿದಾಯ ಹೇಳುತ್ತೇನೆ. ಹೆಮ್ಮೆಯಿಂದ ಓಡುವ ದೃಢವಾದ ಕುದುರೆಯಂತೆ, ನಾನು ಯಾವಾಗಲೂ ನನ್ನ ದೇಶಕ್ಕಾಗಿ ನನ್ನ ಅತ್ಯುತ್ತಮವಾದದ್ದನ್ನು ನೀಡಿದ್ದೇನೆ ಮತ್ತು ಇತರ ಸ್ವರೂಪಗಳಲ್ಲಿ ಅದನ್ನು ಮುಂದುವರಿಸುತ್ತೇನೆ. ಟಿ 20 ವಿಶ್ವಕಪ್ ಗೆಲ್ಲುವ ನನ್ನ ಕನಸು ನನಸಾಯಿತು, ಇದು ನನ್ನ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನದ ಶಿಖರವಾಗಿದೆ. ನೆನಪುಗಳು, ಹರ್ಷೋದ್ಗಾರಗಳು ಮತ್ತು ಅಚಲವಾದ ಬೆಂಬಲಕ್ಕಾಗಿ ಧನ್ಯವಾದಗಳು” ಎಂದು ಬರೆದಿದ್ದಾರೆ.