ಹೊಸದಿಲ್ಲಿ: ರಣಜಿ ಟ್ರೋಫಿ ಫೈನಲ್‌ನಲ್ಲಿ ಸೌರಾಷ್ಟ್ರ ತಂಡವನ್ನು ಪ್ರತಿನಿಧಿಸಲು ಆಲ್‌ರೌಂಡರ್
ರವೀಂದ್ರ ಜಡೇಜ ಅವರಿಗೆ
ಬಿಸಿಸಿಐ ಅನುಮತಿ ನಿರಾಕರಿಸಿದೆ.
ಜಡೇಜ ಭಾರತದ ಏಕದಿನ ತಂಡದ ಸಂಭಾವ್ಯ ಆಟಗಾರನಾಗಿದ್ದು, ಮುಂಬರುವ
ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಲ್ಲಿ ಆಡುವ ಸಾಧ್ಯತೆ ಇದೆ.
“ದೇಶ ಮೊದಲು’ ಎಂಬ ನೀತಿಯಂತೆ ಅವರಿಗೆ ಅವಕಾಶ ನೀಡುತ್ತಿಲ್ಲ ಎಂದು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಸ್ಪಷ್ಟಪಡಿಸಿದ್ದಾಗಿ, ಸೌರಾಷ್ಟ್ರ ಕ್ರಿಕೆಟ್ ಮಂಡಳಿ ಅಧ್ಯಕ್ಷ ಜೈದೇವ್ ಶಾ ಹೇಳಿದ್ದಾರೆ.
“ಜನರು ದೇಶಿ ಕ್ರಿಕೆಟ್ ಫೈನಲ್‌ಗಳನ್ನೂ ವೀಕ್ಷಿಸಬೇಕಾದರೆ ಬಿಸಿಸಿಐ ಆಗ ಯಾವುದೇ ಅಂತಾರಾಷ್ಟ್ರೀಯ ಸರಣಿಗಳನ್ನು ಇರಿಸಿಕೊಳ್ಳಬಾರದು. ಇದು ನನ್ನ ವೈಯಕ್ತಿಕ ಅಭಿಪ್ರಾಯ. ಬಿಸಿಸಿಐ ಐಪಿಎಲ್ ವೇಳೆ ಯಾವುದಾದರೂ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯನ್ನು ನಡೆಸುವುದೇ? ಇಲ್ಲ. ಯಾಕೆಂದರೆ ಐಪಿಎಲ್‌ನಿಂದ ದುಡ್ಡು ಹರಿದು ಬರುತ್ತದೆ. ಕನಿಷ್ಠ ರಣಜಿ ಫೈನಲ್‌ನಲ್ಲಾದರೂ ಸ್ಟಾರ್ ಆಟಗಾರರು ಆಡುವಂತಾಗಬೇಕು. ಆಗ ಎಲ್ಲರಿಗೂ ಕುತೂಹಲ ಹೆಚ್ಚುತ್ತದೆ. ಎಲ್ಲರೂ ಆಸಕ್ತಿಯಿಂದ ಪಂದ್ಯ ನೋಡುತ್ತಾರೆ’ ಎಂದು ಜೈದೇವ್ ಶಾ ಹೇಳಿದರು.
ಕೇವಲ ಜಡೇಜ ಮಾತ್ರವಲ್ಲ, ಬಂಗಾಲ ಪರ ಮೊಹಮ್ಮದ್ ಶಮಿ ಆಡುವುದನ್ನೂ ತಾನು ನೋಡಬಯಸುವುದಾಗಿ ಶಾ ಹೇಳಿದರು.ಸೌರಾಷ್ಟ್ರ-ಬಂಗಾಲ ನಡುವೆ ಸೋಮವಾರದಿಂದ ರಾಜ್‌ಕೋಟ್‌ನಲ್ಲಿ ರಣಜಿ ಫೈನಲ್ ಆರಂಭವಾಗಲಿದೆ.