ಬೆಂಗಳೂರು: ಸಂಗೀತ ಕ್ಷೇತ್ರದಲ್ಲಿನ ವಿಶಿಷ್ಟ ಸಾಧನೆಗಾಗಿ ಇಂದಿರಾನಗರದ ಸಂಗೀತ ಸಭಾ ನೀಡುವ 2018ನೇ ಸಾಲಿನ “ಪುರಂದರ ಪ್ರಶಸಿ’¤ಗೆ ಮೈಸೂರಿನ ಹೆಸರಾಂತ ಚಿತ್ರವೀಣಾ ಕಲಾವಿದ ಎನ್.ರವಿಕಿರಣ್ ಭಾಜನರಾಗಿದ್ದಾರೆ. ಹಾಗೇ ಉದಯೋನ್ಮುಖ ಯುವ ಕಲಾವಿದರಿಗೆ ನೀಡಲಾಗುವ “ಯುವ ಪುರಂದರ ಪ್ರಶಸ್ತಿ’ಗೆ ಕರ್ನಾಟಕ್ ಸಂಗೀತ ಕಲಾವಿದೆ ಐಶ್ವರ್ಯ ವಿದ್ಯಾ ರಘುನಾಥನ್ ಮತ್ತು ಶ್ರೀರಂಜನಿ ಸಂತಾನಗೋಪಾಲನ್ ಪುರಸ್ಕೃತರಾದರು.
ಶುಕ್ರವಾರ ಎಚ್.ಎ.ಎಲ್. 2ನೇ ಹಂತದಲ್ಲಿರುವ ಪುರಂದರ ಭವನದಲ್ಲಿ ಇಂದಿರಾನಗರ ಸಂಗೀತ ಸಭಾ ಹಮ್ಮಿಕೊಂಡಿದ್ದ 14ನೇ ವಾರ್ಷಿಕ ಸಂಗೀತ ಮತ್ತು ನೃತ್ಯ ಹಬ್ಬ ಕಾರ್ಯಕ್ರಮದಲ್ಲಿ ನಿವೃತ್ತ ನ್ಯಾ.ಎಂ.ಎನ್.ವೆಂಕಟಾಚಲಯ್ಯಅವರು ಸಂಗೀತ ಸಾಧಕರಿಗೆ ಪ್ರಶಸ್ತಿ ಪ್ರದಾನ ಮಾಡಿದರು.
ಇದೇ ವೇಳೆ ಮಾತನಾಡಿದ ನ್ಯಾ.ಎಂ.ಎನ್.ವೆಂಕಟಾಚಲಯ್ಯ, ಸಂಗೀತಕ್ಕೆ ಸಮಾಜವನ್ನು ಒಗ್ಗೂಡಿಸುವ ಶಕ್ತಿ ಇದೆ. ದೇಶ ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿರುವ ಇಂದಿನ ದಿನಗಳಲ್ಲಿ ಸಂಗೀತದ ಮೂಲಕ ಸಮಸ್ಯೆಗಳನ್ನು ಪರಿಹರಿಸುವಂತೆ ಮನವಿ ಮಾಡಿದರು.ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಚಿತ್ರವೀಣಾ ಕಲಾವಿದ ರವಿಕಿರಣ್ ಸೇರಿದಂತೆ ಸಂಗೀತ ಸಾಧಕರನ್ನು ಸನ್ಮಾನಿಸಿರುವುದಕ್ಕೆ ಸಂತಸ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಸಂಗೀತ ಸಾಧಕ ಎನ್. ಕಿರಣ್ ಕುಮಾರ್, ಜಸ್ಟೀಸ್ ವೆಂಕಟಾಚಲಯ್ಯ ಅವರ ಕೈಯಿಂದ ಪ್ರಶಸ್ತಿ ಸ್ವೀಕರಿಸುತ್ತಿರುವುದು ಖುಷಿ ತಂದಿದೆ ಎಂದರು. ಸಂಗೀತಕ್ಕೆ ಗಡಿ ಎಂಬುವುದು ಇಲ್ಲ. ಜಗತ್ತಿನ ಎಲ್ಲಾ ಕಡೆಗಳಲ್ಲೂ ಸಂಗೀತಾಭಿಮಾನಿಗಳಿದ್ದಾರೆ. ಸಂಗೀತಕ್ಕೆ ಮಾತ್ರ ಎಲ್ಲರನ್ನೂ ಸೆಳೆಯು ಶಕ್ತಿ ಇದೆ ಎಂದು ಬಣ್ಣಿಸಿದರು. ಸಮಾರಂಭದಲ್ಲಿ ನಿವೃತ್ತ ಐಪಿಎಸ್ ಅಧಿಕಾರಿ ಬಿ.ಆರ್.ಪ್ರಭಾಕರ ಮತ್ತು ನಿವೃತ್ತ ಐಪಿಎಸ್ ಅಧಿಕಾರಿ ಎಸ್‌ಎನ್‌ಎಸ್ ಮೂರ್ತಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಮನಸೆಳೆದ ಸಂಗೀತ ಕಾರ್ಯಕ್ರಮ: ಇದೇ ವೇಳೆ ಸಂಜೆ ನಡೆದ ಸಂಗೀತ ಕಾರ್ಯಕ್ರಮ ನೆರೆದವರನ್ನು ರಂಜಿಸಿತು. ಹೆಸರಾಂತ ಗಾಯಕಿ ಡಾ.ಸಂಧ್ಯಾ ಶಂಕರ್ ಅವರು ಷಣ್ಮುಖ ಪ್ರಿಯ ರಾಗದಲ್ಲಿ ಪುರಂದರ ಕೀರ್ತನೆಗಳನ್ನು ಹಾಡಿ ಸಂಗೀತ ರಸಿಕರನ್ನು ಆನಂದಿಸಿದರು. ಗೋವಿಂದ ನಿನ್ನ ನಾಮವೇ ಚೆಂದ.. ಗಾಯನಕ್ಕೆ ಸಂಗೀತ ಪ್ರಿಯರು ತಲೆದೂಗಿದರು. ಚಿತ್ರವೀಣಾ ಕಲಾವಿದ ರವಿಕಿರಣ್ ಅವರ ಸಂಗೀತ ಕಛೇರಿಗೆ ಅಪಾರ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದು, ವಿಶೇಷವಾಗಿತ್ತು.