ರವಿಚಂದ್ರನ್ ಅವರ ಎರಡನೇ ಪುತ್ರ ವಿಕ್ರಮ್ ಅವರು ಹೊಸ ಚಿತ್ರದಲ್ಲಿ ನಟಿಸಲಿದ್ದಾರೆ ಎಂದು ಈ ಹಿಂದೆ ಇದೇ “ಬಾಲ್ಕನಿ’ಯಲ್ಲಿ ಸುದ್ದಿಯಾಗಿತ್ತು. ಆ ಚಿತ್ರವನ್ನು ಈ ಹಿಂದೆ “ರೋಜ್’ ಹಾಗೂ “ಮಾಸ್ ಲೀಡರ್ ‘ ಚಿತ್ರಗಳನ್ನು ನಿರ್ದೇಶಿಸಿದ್ದ ಸಹನಾಮೂರ್ತಿ ಅವರು ನಿರ್ದೇಶನ ಮಾಡಲಿದ್ದಾರೆ ಎಂಬುದಾಗಿಯೂ ಹೇಳಲಾಗಿತ್ತು. ಆಗ ಆ ಚಿತ್ರಕ್ಕಿನ್ನೂ ನಾಮಕರಣ ಆಗಿರಲಿಲ್ಲ. ನಾಯಕಿಯ ಆಯ್ಕೆಯೂ ನಡೆದಿರಲಿಲ್ಲ. ಈಗ ಚಿತ್ರಕ್ಕೆ ಶೀರ್ಷಿಕೆ ಪಕ್ಕಾ ಆಗಿದೆ.
ಅಷ್ಟೇ ಅಲ್ಲ, ನಾಯಕಿಯ ಆಯ್ಕೆಯನ್ನೂ ಮಾಡಲಾಗಿದೆ. ಅಂದಹಾಗೆ, ರವಿಚಂದ್ರನ್ ಪುತ್ರ ವಿಕ್ರಮ್ ಅಭಿನಯಿಸುತ್ತಿರುವ ಹೊಸ ಚಿತ್ರಕ್ಕೆ “ತ್ರಿವಿಕ್ರಮ’ ಎಂದು ಹೆಸರಿಡಲಾಗಿದೆ. ಇನ್ನು, ವಿಕ್ರಮ್‌ಗೆ ನಾಯಕಿಯಾಗಿ ಆಕಾಂಕ್ಷ ಎಂಬ ಹೊಸ ಹುಡುಗಿ ಆಯ್ಕೆಯಾಗಿದ್ದಾರೆ. ಮುಂಬೈ ಮೂಲದ ಆಕಾಂಕ್ಷ ಅವರು ಈ ಚಿತ್ರದ ಮೂಲಕ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡುತ್ತಿದ್ದಾರೆ ಎಂಬುದು ವಿಶೇಷ.
ಅಷ್ಟೇ ಅಲ್ಲ, ಕಳೆದ ಹದಿನೈದು ದಿನಗಳ ಹಿಂದೆಯೇ ಮುಂಬೈನಿಂದ ಬೆಂಗಳೂರಿಗೆ ಬಂದು, ಇಲ್ಲಿನ ಅಭಿನಯ ತರಂಗ ನಟನಾ ಶಾಲೆಯಲ್ಲಿ ತರಬೇತಿ ಪಡೆದುಕೊಳ್ಳುತ್ತಿದ್ದಾರೆ. ಚಿತ್ರದ ಪಾತ್ರಕ್ಕಾಗಿ ವಿಕ್ರಮ್ ಕೂಡ ಈಗಾಗಲೇ ಸಾಕಷ್ಟು ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಈ ಕುರಿತು ಹೇಳುವ ನಿರ್ದೇಶಕ ಸಹನಾಮೂರ್ತಿ, “ವಿಕ್ರಮ್ ಅವರು ಪಾತ್ರಕ್ಕೆ ಬೇಕಾದ ತಯಾರಿ ಮಾಡಿಕೊಂಡಿದ್ದು, ನಟನೆ, ಜಿಮ್ನಾಸ್ಟಿಕ್, ಡ್ಯಾನ್ಸ್, ಫೈಟ್ ಇವೆಲ್ಲದರಲ್ಲೂ ಪಕ್ವಗೊಂಡಿದ್ದಾರೆ.
ನಾಯಕಿ ಆಕಾಂಕ್ಷ ಅವರು ಸಹ ಅಭಿನಯ ತರಂಗದಲ್ಲಿ ನಟನೆ ಬಗ್ಗೆ ಹೆಚ್ಚಿಗೆ ತಿಳಿದುಕೊಳ್ಳುತ್ತಿದ್ದು, ಕನ್ನಡ ಭಾಷೆಯನ್ನೂ ಕಲಿಯುತ್ತಿದ್ದಾರೆ. ವಿಕ್ರಮ್ ಅವರಿಗೆ ಇದು ಫ್ರೆಶ್ ಕಥೆಯಾಗಿದ್ದು, ಸ್ವತಃ ರವಿಚಂದ್ರನ್ ಅವರೇ ಆ ಚಿತ್ರದ ಕಥೆ ಕೇಳಿ, ವಿಕ್ರಮ್‌ಗೆ ಸರಿಹೊಂದುವ ಕಥೆ ಎಂದು ಗ್ರೀನ್‌ಸಿಗ್ನಲ್ ಕೊಟ್ಟ ಬಳಿಕ ಸಿನಿಮಾ ಚಟುವಟಿಕೆಗಳು ಜೋರಾಗಿ ನಡೆದಿವೆ.
ಹಾಗೆ ನೋಡಿದರೆ, ಕಳೆದ ಫೆಬ್ರವರಿ 14 ರ ಪ್ರೇಮಿಗಳ ದಿನದಂದು ಚಿತ್ರಕ್ಕೆ ಚಾಲನೆ ಸಿಗಬೇಕಿತ್ತು. ಕಾರಣಾಂತರದಿಂದ ಸಾಧ್ಯವಾಗಿರಲಿಲ್ಲ ಎಂದು ವಿವರ ಕೊಡುವ ನಿರ್ದೇಶಕ ಸಹನಾಮೂರ್ತಿ, ಇದೊಂದು ಸ್ವಮೇಕ್ ಕಥೆಯಾಗಿದ್ದು, ಪಕ್ಕಾ ಲವ್‌ಸ್ಟೋರಿ ಚಿತ್ರವಿದು. ಇದರೊಂದಿಗೆ ಲವ್ವು, ತಾಯಿ ಸೆಂಟಿಮೆಂಟ್, ಎಮೋಷನ್ಸ್ ಹಾಗು ಒಂದಷ್ಟು ಗೆಳೆತನ ಇತ್ಯಾದಿ ವಿಷಯಗಳು ಹೈಲೈಟ್ ಆಗಿದ್ದು, ಎಮೋಷನ್ಸ್ ಆಳವಾಗಿರಲಿದೆ.
ನಾಯಕ ವಿಕ್ರಮ್‌ಗೆ ಇಲ್ಲಿ ಹೊಸ ಗೆಟಪ್ ಇರಲಿದ್ದು, ಅದಕ್ಕಾಗಿ ಸಾಕಷ್ಟು ತಯಾರಿಯನ್ನೂ ಮಾಡಿಕೊಳ್ಳಲಾಗುತ್ತಿದೆ. ಇಲ್ಲಿ ಇನ್ನೊಂದು ವಿಷಯ ಸ್ಪಷ್ಟಪಡಿಸುತ್ತೇನೆ, ರವಿಚಂದ್ರನ್ ಅವರ ಪುತ್ರ ಎಂಬ ಕಾರಣಕ್ಕೆ, ಚಿತ್ರದಲ್ಲಿ ರವಿಚಂದ್ರನ್ ಅವರ ಯಾವುದೇ ಶೇಡ್ ಇಲ್ಲಿರುವುದಿಲ್ಲ ‘ ಎನ್ನುತ್ತಾರೆ ಸಹನಾಮೂರ್ತಿ. ಚಿತ್ರಕ್ಕೆ ಸೋಮಶೇಖರ್ ಮತ್ತು ಸುರೇಶ್ ನಿರ್ಮಾಣದ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ಸಾಧುಕೋಕಿಲ, ತುಳಸಿ ಶಿವಮಣಿ, ಚಿಕ್ಕಣ್ಣ, ಸುಚೇಂದ್ರಪ್ರಸಾದ್ ಇತರರು ನಟಿಸುತ್ತಿದ್ದಾರೆ. ಅರ್ಜುನ್ ಜನ್ಯಾ ಆರು ಹಾಡುಗಳಿಗೆ ಸಂಗೀತ ನೀಡುತ್ತಿದ್ದಾರೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಆಗಸ್ಟ್ 10ರಂದು ಚಿತ್ರಕ್ಕೆ ಮುಹೂರ್ತ ನೆರವೇರಲಿದೆ. ಬೆಂಗಳೂರು, ದಾಂಡೇಲಿ, ರಾಜಸ್ಥಾನ್ ಹಾಗು ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ನಡೆಯಲಿದೆ.