“ದರ್ಶನ್ ನಟನೆಯ “ರಾಬರ್ಟ್’ ಚಿತ್ರವನ್ನು ರಿಲೀಸ್ ಮಾಡಿದರೆ ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲೂ ಅದೊಂದೇ ಸಿನಿಮಾ ಪ್ರದರ್ಶನ ಕಾಣಬೇಕು. ಅದರ ಜೊತೆ ಬೇರೆ ಯಾವ ಸಿನಿಮಾವೂ ಬರಬಾರದು. “ರಾಬರ್ಟ್’ ರಿಲೀಸ್ ಮಾಡದಿದ್ದರೆ ನಾನು ನನ್ನ ಸಿನಿಮಾ ರಿಲೀಸ್ ಮಾಡುತ್ತೇನೆ… ಆಗಲೂ ಅಷ್ಟೇ … ಎಲ್ಲಾ ಚಿತ್ರಮಂದಿರಗಳಲ್ಲೂ ನಂದೊಂದೇ ಸಿನಿಮಾ ಇರಲು ಅವಕಾಶ ಮಾಡಿಕೊಡಬೇಕು …’- ಹೀಗೆ ನೇರವಾಗಿ ಹೇಳಿದರು ಕ್ರೇಜಿಸ್ಟಾರ್ ರವಿಚಂದ್ರನ್.
ಅವರ ಮಾತುಗಳೇ ಹಾಗೆ, ಏನೇ ಇದ್ದರೂ ಮನಸ್ಸಿನಿಂದ ನೇರವಾಗಿ ಮಾತನಾಡುತ್ತಾರೆ. ಈ ಬಾರಿಯೂ ಅದೇ ರೀತಿ ಮಾತನಾಡಿದರು. ಕೋವಿಡ್ ಲಾಕ್‌ಡೌನ್ ತೆರವಾಗಿ ಚಿತ್ರಮಂದಿರಗಳು ಓಪನ್ ಆಗಿವೆ. ಸಿನಿಮಾಗಳು ಮರುಬಿಡುಗಡೆಯಾಗುತ್ತಿವೆ. ಆದರೆ, ರವಿಚಂದ್ರನ್ ಅವರ ಪ್ರಕಾರ, ಸಿನಿಮಾಗಳ ಮರುಬಿಡುಗಡೆಯಿಂದ ಯಾವುದೇ ಪ್ರಯೋಜನವಿಲ್ಲ. ಅದರ ಬದಲು ಯಾವುದಾದರೂ ಹೊಸ ಸಿನಿಮಾ ಬಿಡುಗಡೆಯಾಗಬೇಕು. ಅದರಲ್ಲೂ ಸ್ಟಾರ್‌ಗಳ, ಮಾಸ್ ಆಡಿಯನ್ಸ್ ಸೆಳೆಯುವ ನಟನ ಸಿನಿಮಾ ರಿಲೀಸ್ ಆದರೆ ಜನ ಚಿತ್ರಮಂದಿರಕ್ಕೆ ಬರುತ್ತಾರೆ. ಸದ್ಯಕ್ಕೆ ದರ್ಶನ್ ಅವರ “ರಾಬರ್ಟ್’ ರಿಲೀಸ್‌ಗೆ ರೆಡಿ ಇದೆ. ದರ್ಶನ್‌ಗೆ ದೊಡ್ಡ ಅಭಿಮಾನಿ ವರ್ಗವಿದೆ.
ಹಾಗಾಗಿ, ಆ ಚಿತ್ರ ಬಿಡುಗಡೆಯಾಗಲಿ ಎನ್ನುವುದು ರವಿಚಂದ್ರನ್ ಮಾತು. “ಜನರಲ್ಲಿ ಈಗ ಕೊರೊನಾ ಭಯವಿಲ್ಲ. ಸಿನಿಮಾ ಬಿಡುಗಡೆಯಾದರೆ ಚಿತ್ರಮಂದಿರಕ್ಕೆ ಬರುತ್ತಾರೆ. ಇವತ್ತಿಗೆ ಜನರನ್ನು ಸೆಳೆಯುವಂತಹ ಸ್ಟಾರ್ ಸಿನಿಮಾ ರಿಲೀಸ್ ಆಗಬೇಕು. ದರ್ಶನ್, “ರಾಬರ್ಟ್’ನಂತಹ ಚಿತ್ರಗಳು ಬರಬೇಕು. ಆದರೆ, ಆ ಚಿತ್ರಗಳ ಜೊತೆ ಬೇರೆ ಯಾವ ಚಿತ್ರವೂ ಬರಬಾರದು. ಕರ್ನಾಟಕದ ಅಷ್ಟೂ ಚಿತ್ರಮಂದಿರಗಳಲ್ಲಿ ಆ ಚಿತ್ರ ಮಾತ್ರ ಪ್ರದರ್ಶನ ಕಾಣಬೇಕು. “ರಾಬರ್ಟ್’ ಬರದಿದ್ದರೆ, ನಾನು “ರವಿ ಬೋಪಣ್ಣ’ ರಿಲೀಸ್ ಮಾಡುತ್ತೇನೆ. ಆಗಲೂ ಅಷ್ಟೇ, ನನ್ನದೊಂದೇ ಚಿತ್ರ ರಿಲೀಸ್ ಆಗಬೇಕು. ಅಷ್ಟೂ ಚಿತ್ರಮಂದಿರಗಳಲ್ಲಿ ಅದೊಂದೇ ಪ್ರದರ್ಶನವಾಗಲಿ.
ಸರ್ಕಾರ ಸದ್ಯ ಶೇ 50ರಷ್ಟು ಪ್ರೇಕ್ಷಕರಿಗೆ ಅವಕಾಶ ಮಾಡಿಕೊಟ್ಟಿದೆ. ನನಗೆ ಆ ಬೇಸರವಿಲ್ಲ. 10 ಜನ ಬಂದರೂ ಪರಾವಗಿಲ್ಲ. ಆದರೆ, ಕರ್ನಾಟಕದ ಎಲ್ಲಾ ಚಿತ್ರಮಂದಿರಗಳಲ್ಲಿ ಒಂದೇ ಸಿನಿಮಾ ಪ್ರದರ್ಶನವಾಗಬೇಕು. ಇದಕ್ಕೆ ಅವಕಾಶ ಮಾಡಿಕೊಡುತ್ತಾರಾ’ ಎನ್ನುವುದು ರವಿಚಂದ್ರನ್ ಅವರ ಮಾತು. ಇದರ ಹಿಂದೆ ಸದುದ್ದೇಶವಿದೆ. ಯಾವ ಸಿನಿಮಾ ಬಿಡುಗಡೆಯಾಗುತ್ತದೋ, ಆ ಸಿನಿಮಾಕ್ಕೆ ಬೇರೆ ಸಿನಿಮಾಗಳು ತೊಂದರೆ ಮಾಡಿ, ನಿರ್ಮಾಪಕ ನಷ್ಟ ಅನುಭವಿಸಬಾರದು ಎನ್ನುವುದು ಅವರ ಕಾಳಜಿ. ಹಾಗಾಗಿ, ಮೊದಲು ಬಿಡುಗಡೆಯಾದ ಚಿತ್ರಕ್ಕೆ ಪ್ರೋತ್ಸಾಹ ನೀಡಬೇಕು ಎನ್ನುತ್ತಾರೆ ರವಿಚಂದ್ರನ್. ಇನ್ನು ಕ್ರೇಜಿಸ್ಟಾರ್ ರವಿಚಂದ್ರನ್ ಮತ್ತೆ ಶೂಟಿಂಗ್ ಮೂಡ್‌ಗೆ ಬಂದಿದ್ದಾರೆ.
ಕೋವಿಡ್ ಲಾಕ್‌ಡೌನ್ ತೆರವಾದ ಬಳಿಕ ಅವರ ಹೊಸ ಸಿನಿಮಾ “ಕನ್ನಡಿಗ’ ಮುಹೂರ್ತ ಸೋಮವಾರ ನಡೆದಿದೆ. ಚಿತ್ರ ವನ್ನು ಎನ್. ಎಸ್ ರಾಜ್‌ಕುಮಾರ್ ನಿರ್ಮಿಸುತ್ತಿದ್ದಾರೆ.