ನಿರ್ದೇಶಕ ರವಿ ಶ್ರೀವತ್ಸ ಸದ್ದಿಲ್ಲದೇ ಸಿನಿಮಾವೊಂದನ್ನು ಮಾಡಿ ಮುಗಿಸಿದ್ದಾರೆ. ಆ್ಯಕ್ಷನ್ ಸಿನಿಮಾ ಮೂಲಕ ಗುರುತಿಸಿಕೊಂಡಿರುವ ರವಿ ಅವರು ಈ ಬಾರಿಯೂ ಅವರ ಫೆವರೇಟ್ ಜಾನರ್ ಅನ್ನೇ ಆಯ್ಕೆ ಮಾಡಿಕೊಂಡಿದ್ದಾರೆ. ಚಿತ್ರಕ್ಕೆ “ಗ್ಯಾಂಗ್ಸ್ ಆಫ್ ಯುಕೆ’ ಎಂದು ಟೈಟಲ್ ಇಡಲಾಗಿದೆ. ಈ ಬಾರಿ ನಿರ್ದೇಶನದ ಜೊತೆಗೆ ನಿರ್ಮಾಣಕ್ಕೂ ಕೈ ಜೋಡಿಸಿದ್ದಾರೆ. “ಡೆಡ್ಲಿ ಆರ್ಟ್ಸ್’ ಎಂಬ ನಿರ್ಮಾಣ ಸಂಸ್ಥೆ ಮೂಲಕ ಈ ಚಿತ್ರ ತಯಾರಾಗಿದೆ.
ಇತ್ತೀಚೆಗೆ ನಿರ್ದೇಶಕ ಕೆವಿ. ರಾಜು ಅವರ ಪತ್ನಿ ನೂತನ ನಿರ್ಮಾಣ ಸಂಸ್ಥೆಯ ಲಾಂಛನಕ್ಕೆ ಚಾಲನೆ ನೀಡಿದರು. ಕನ್ನಡದ ಹಿರಿಯ ನಿರ್ದೇಶಕ ಕೆ.ವಿ. ರಾಜು ಅವರ ಬಳಿ ಬರ ವಣಿಗೆ, ನಿರ್ದೇಶನದ ಪಾಠ ಕಲಿತವರು.
ಚಿತ್ರದ ಬಗ್ಗೆ ಮಾತನಾಡುವ ರವಿ ಶ್ರೀವತ್ಸ,” 2018ರಲ್ಲಿ ಮಾಡಿಕೊಂಡಿದ್ದ ಕಥೆಯಿದು. ಚಿತ್ರದಲ್ಲಿ ಒಟ್ಟು 56 ಕಲಾವಿದರು ಇದ್ದಾರೆ. ಬಹುತೇಕ ಹೊಸಬರೇ ಇದ್ದಾರೆ. ಏ.18ಕ್ಕೆ ಚಿತ್ರದ ಮುಹೂರ್ತ ನಡೆಸಿ ಶೂಟಿಂಗ್ ಪ್ರಾರಂಭಿಸಿದೆವು. ಆನಂತರದಲ್ಲಿ ಒರಟ ಪ್ರಶಾಂತ, ಜ್ಯೋತಿ ಶೆಟ್ಟಿ, ಕೋಟೆ ಪ್ರಭಾಕರ್, ಪದ್ಮಾ ವಾಸಂತಿ, ಮುನಿ ಹೀಗೆ ಹೊಸಬರ ಜೊತೆ ಹಳಬರೂ ನಮ್ಮ ಬಳಗಕ್ಕೆ ಸೇರ್ಪಡೆಯಾದರು. ಕಳೆದ ವಾರ ಚಿತ್ರದ ಶೂಟಿಂಗ್ ಮುಗಿಸಿದೆವು’ ಎಂದರು.
ನಿರ್ಮಾಪಕರಾಗಿ ಎಲ್.ಎನ್. ರೆಡ್ಡಿ ಅವರು ಶ್ರೀವತ್ಸ ಅವರಿಗೆ ಸಾಥ್ ನೀಡಿದ್ದಾರೆ. ಅಂದಹಾಗೆ, ಈ ಚಿತ್ರ ನೈಜ ಘಟನೆಯಿಂದ ಪ್ರೇರಿತವಾಗಿದೆ. “ಬಾಗಲಕೋಟೆಯ ಪಿಲ್ಲಾರಿ ಫಾಲ್ಸ್ ನಲ್ಲಿ ನಡೆದ ಘಟನೆ ಇಟ್ಟುಕೊಂಡು ಮಾಡಿದ ಚಿತ್ರಕಥೆಯಿದು. ರಕ್ತ ತನ್ನ ಕುರುಹನ್ನು ಬಿಟ್ಟು ಹೋಗುತ್ತೆ, ಜಿದ್ದು ಒಬ್ಬರಿಂದ ಒಬ್ಬರಿಗೆ ಟ್ರಾವೆಲ್ ಆಗುತ್ತೆ. ಚಿತ್ರಕ್ಕೆ ಉತ್ತರ ಕರ್ನಾಟಕದ ಹತ್ಯಾಕಾಂಡ ಎಂಬ ಟ್ಯಾಗ್ ಲೈನ್ ಇದೆ’ ಎಂದು ಹೇಳಿದರು.
“ಗ್ಯಾಂಗ್ಸ್ ಆಫ್ ಯುಕೆ’ ಚಿತ್ರದಲ್ಲಿ ತೊಡಗಿಕೊಂಡಿರುವ ಎಂ.ಎಸ್.ರಮೇಶ್ ಕೂಡಾ ಚಿತ್ರದ ಬಗ್ಗೆ ಮಾತನಾಡಿದರು. ಚಿತ್ರದಲ್ಲಿ ರಗಡ್ ಆದ ಸಂಭಾಷಣೆಗಳಿರುತ್ತವೆ ಎಂದರು.
ಕೆ.ವಿ. ರಾಜು ಅವರ ಪುತ್ರ ಅಮೋಘ್ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಸೋನು ಉಪಾಧ್ಯ, ಪ್ರವೀಣ್, ಉಗ್ರಂ ರೆಡ್ಡಿ, ಸತ್ಯ, ಧಿಲ್ಲಾನ್, ನವೀನ್, ಪ್ರಜ್ವಲ್ ಮಸ್ಕಿ, ಉಮೇಶ್, ವಿಕಾಸ್ ಹೀಗೆ ಸಾಕಷ್ಟು ನವ ಪ್ರತಿಭೆಗಳನ್ನು ಚಿತ್ರದಲ್ಲಿ ಬಳಸಿಕೊಂಡಿದ್ದಾರೆ. ವಿಶೇಷವಾಗಿ ಶಿಶುನಾಳ ಷರೀಫರ 8 ಗೀತೆಗಳನ್ನು ತೆಗೆದುಕೊಂಡು ಬಿಟ್ಸ್ ಮಾಡಲಾಗಿದೆ. ಒಟ್ಟು 9 ಹಾಡುಗಳು ಚಿತ್ರದಲ್ಲಿದ್ದು, ಸಾಧು ಕೋಕಿಲ ಸಂಗೀತ ನೀಡಿದ್ದಾರೆ. ಚಿತ್ರವನ್ನು ಡಿಸೆಂಬರ್ ಅಥವಾ ಜನವರಿಯಲ್ಲಿ ತೆರೆಗೆ ತರಲು ತಂಡ ಪ್ರಯತ್ನಿಸುತ್ತಿದೆ