ಮುಂಬೈ: ಟೀಂ ಇಂಡಿಯಾದ ಮುಖ್ಯ ಪಾತ್ರಗಳು ಬದಲಾಗಿದೆ. ತಿಂಗಳ ಹಿಂದೆ ಕೋಚ್ ಸ್ಥಾನಕ್ಕೆ ರವಿ ಶಾಸ್ತ್ರಿ ಬದಲು ರಾಹುಲ್ ದ್ರಾವಿಡ್, ಇದೀಗ ಸೀಮಿತ ಓವರ್ ಮಾದರಿ ತಂಡಕ್ಕೆ ವಿರಾಟ್ ಕೊಹ್ಲಿ ಬದಲು ರೋಹಿತ್ ಶರ್ಮಾರನ್ನು ನಾಯಕರನ್ನಾಗಿ ಮಾಡಲಾಗಿದೆ.
ವಿರಾಟ್ ಕೊಹ್ಲಿ ಅವರನ್ನು ಏಕದಿನ ತಂಡದ ನಾಯಕತ್ವದಿಂದ ಏಕಾಏಕಿ ಇಳಿಸಿದ ಬಿಸಿಸಿಐ ನಡೆಗೆ ಹಲವಾರು ವಿರೋಧಗಳು ವ್ಯಕ್ತವಾಗಿದೆ. ಈ ಬಗ್ಗೆ ಹಲವರು ತಮ್ಮ ಅಭಿಪ್ರಾಯ ಹೊರಹಾಕಿದ್ದಾರೆ.
ಮಾಜಿ ಕೋಚ್ ರವಿ ಶಾಸ್ತ್ರಿ ಅವರು ರೋಹಿತ್ ಶರ್ಮಾರ ನಾಯಕತ್ವದ ಬಗ್ಗೆ ಮಾತನಾಡಿದ್ದಾರೆ. “ರೋಹಿತ್ ಶರ್ಮಾ ಅತಿಯಾಗಿ ತಲೆ ಕೆಡಿಸಿಕೊಳ್ಳುತ್ತಿಲ್ಲ; ಅವರು ಯಾವಾಗಲೂ ತಂಡಕ್ಕೆ ಉತ್ತಮವಾದದ್ದನ್ನು ಮಾಡುತ್ತಾರೆ. ಅವರು ಭಿನ್ನವಾಗಿ ತಂಡದ ಎಲ್ಲಾ ಸಂಪನ್ಮೂಲಗಳನ್ನು ಬಳಸುತ್ತಾರೆ” ಎಂದು ಮಾಜಿ ಕೋಚ್ ಶಾಸ್ತ್ರಿ ಹೇಳದ್ದಾರೆ.
ಇದನ್ನೂ ಓದಿ:ಆನೆ ದಾಳಿ: ಲಂಕಾ ಕ್ರೀಡಾಂಗಣದ ಇಬ್ಬರು ಕ್ರಿಕೆಟ್ ಸಿಬಂದಿ ಬಲಿ
ಐಪಿಎಲ್ ನ ಅತ್ಯಂತ ಯಶಸ್ವಿ ನಾಯಕ ರೋಹಿತ್ ಶರ್ಮಾ ಅಂತಾರಾಷ್ಟ್ರೀಯ ನಾಯಕರಾಗಿಯೂ ಉತ್ತಮ ದಾಖಲೆಯನ್ನು ಹೊಂದಿದ್ದಾರೆ. ಅವರು ಇಲ್ಲಿಯವರೆಗೆ 32 ಸೀಮಿತ ಓವರ್‌ಗಳ ಪಂದ್ಯಗಳಲ್ಲಿ ಭಾರತವನ್ನು ಮುನ್ನಡೆಸಿದ್ದು ಅದರಲ್ಲಿ ಅವರು 26 ಪಂದ್ಯಗಳನ್ನು ಗೆದ್ದಿದ್ದಾರೆ. ರೋಹಿತ್ ಅವರ ನಾಯಕತ್ವದಲ್ಲಿ ಭಾರತ ತಂಡವು 2018 ರಲ್ಲಿ ನಿದಾಹಾಸ್ ಟ್ರೋಫಿ ಮತ್ತು ಏಷ್ಯಾ ಕಪ್ ನಂತಹ ಬಹು-ರಾಷ್ಟ್ರದ ಪಂದ್ಯಾವಳಿಗಳನ್ನು ಗೆದ್ದಿದೆ.
ಮುಂದಿನ ವರ್ಷ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಮತ್ತು 2023ರಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ಕೂಟಗಳು ರೋಹಿತ್ ಮುಂದಿನ ಬಹುದೊಡ್ಡ ಜವಾಬ್ದಾರಿಯಾಗಿದೆ. ವಿರಾಟ್ ಕೊಹ್ಲಿ ಅವರು ಟೆಸ್ಟ್ ತಂಡದ ನಾಯಕನಾಗಿ ಮುಂದುವರಿಯಲಿದ್ದಾರೆ.