ನವದೆಹಲಿ: ಭಾರತ ಕ್ರಿಕೆಟ್ ತಂಡದ ಕೋಚ್ ಹುದ್ದೆಗೆ ರವಿಶಾಸ್ತ್ರಿ ಸೋಮವಾರ ಅರ್ಜಿ ಸಲ್ಲಿಸಿದ್ದಾರೆ. ಇದೇ ವೇಳೆ ವೆಸ್ಟ್ ಇಂಡೀಸ್ ತಂಡದ ಮಾಜಿ ಕೋಚ್ ಫಿಲ್ ಸಿಮನ್ಸ್ ಕೂಡ ಅರ್ಜಿ ಸಲ್ಲಿಸಿದ್ದಾರೆ. ವೀರೇಂದ್ರ ಸೆಹವಾಗ್ ಕೂಡ ಕಣದಲ್ಲಿರುವುದರಿಂದ ಇದೀಗ ಭಾರತ ಕ್ರಿಕೆಟ್ ತಂಡದ ಕೋಚ್ ಸ್ಥಾನಕ್ಕೆ ಪೈಪೋಟಿ ತೀವ್ರಗೊಂಡಿದೆ.
ರವಿಶಾಸ್ತ್ರಿ ಭಾರತ ತಂಡದ ನಿರ್ದೇಶಕರಾಗಿದ್ದ ಅವಧಿಯಲ್ಲಿ ತಂಡ ಉತ್ತಮ ಸಾಧನೆಯನ್ನೇ ಮಾಡಿತ್ತು. ಆದರೆ ಹಿಂದಿನ ಬಾರಿ ಕೋಚ್ ಹುದ್ದೆಗೆ ಅರ್ಜಿ ಕರೆದಾಗ ಅನಿಲ್ ಕುಂಬ್ಳೆ ಪರ ಬಿಸಿಸಿಐ ಉನ್ನತ ಸಲಹಾ ಸಮಿತಿ ಒಲವು ತೋರಿತ್ತು. ಶಾಸ್ತ್ರಿ ಹೊರಬಿದ್ದಿದ್ದರು. ಈ ಬಾರಿ ನಾಯಕ ವಿರಾಟ್ ಕೊಹ್ಲಿ ಬೆಂಬಲ ಶಾಸ್ತ್ರಿಗಿರುವುದರಿಂದ ಅವರು ಆಯ್ಕೆಯಾಗುವ ಸಾಧ್ಯತೆಯೇ ಹೆಚ್ಚಿದೆ.
ರವಿಶಾಸ್ತ್ರಿ ಸಾಧನೆ: ಇವರ ಅವಧಿಯಲ್ಲಿ ಭಾರತ ಇಂಗ್ಲೆಂಡ್ ವಿರುದ್ಧ ಸೀಮಿತ ಓವರ್‌ಗಳ ಸರಣಿ ಜಯಿಸಿತ್ತು. ಆಸ್ಟ್ರೇಲಿಯಾದಲ್ಲಿ 3-0ಯಿಂದ ಟಿ20 ಸರಣಿಯನ್ನು ವೈಟ್‌ವಾಷ್ ಮಾಡಿತ್ತು. 2015ರ ಏಕದಿನ ವಿಶ್ವಕಪ್ ಸೆಮಿಫೈನಲ್‌ಗೇರಿತ್ತು. 2016ರ ಟಿ20 ವಿಶ್ವಕಪ್‌ನಲ್ಲೂ ಸೆಮಿಫೈನಲ್‌ಗೇರಿತ್ತು. ಶ್ರೀಲಂಕಾದಲ್ಲಿ ಟೆಸ್ಟ್ ಸರಣಿ ಜಯಿಸಿತ್ತು.
ಪೈಪೋಟಿಯಲ್ಲಿ ಸಿಮನ್ಸ್: ವಿಂಡೀಸ್ ತಂಡದ ಮಾಜಿ ಕೋಚ್ ಫಿಲ್ ಸಿಮನ್ಸ್ ಅರ್ಜಿ ಸಲ್ಲಿಸಿ ಕೋಚ್ ಹುದ್ದೆಯ ಪೈಪೋಟಿ ಜೋರಾಗಲು ಕಾರಣವಾಗಿದ್ದಾರೆ. ವೆಸ್ಟ್ ಇಂಡೀಸ್ ತಂಡ ಟಿ20 ವಿಶ್ವಕಪ್ ಗೆದ್ದ ತಂಡಕೆ ಸಿಮನ್ಸ್ ಕೋಚ್ ಆಗಿದ್ದರು. ಆದ್ದರಿಂದ ಸಿಮನ್ಸ್ ಪ್ರಬಲ ದಾವೇದಾರರಾಗಿದ್ದಾರೆ. ಸಿಮನ್ಸ್ ವೆಸ್ಟ್ ಇಂಡೀಸ್ ಪರ 26 ಟೆಸ್ಟ್, 143 ಏಕದಿನ ಪಂದ್ಯವನ್ನು ಆಡಿದ್ದಾರೆ. 2004ರಲ್ಲಿ ಜಿಂಬಾಬ್ವೆ ತಂಡಕ್ಕೆ ಮುಖ್ಯ ಕೋಚ್ ಆಗಿ ಕಾರ್ಯನಿರ್ವಹಿಸಿದ್ದಾರೆ. 2015ರಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ಮುಖ್ಯ ಕೋಚ್ ಆಗಿದ್ದರು.