ನವದೆಹಲಿ: ಪತ್ರಕರ್ತೆ ಗೌರಿ ಲಂಕೇಶ್ ಅವರಿಗೆ ರಾಜ್ಯ ಸರ್ಕಾರ ಯಾಕೆ ಸೂಕ್ತ ಭದ್ರತೆ ಕೊಟ್ಟಿಲ್ಲ. ಮಾವೋವಾದಿಗಳಿಗೂ ಗೌರಿ ಲಂಕೇಶ್ ಮೇಲೆ ಸಿಟ್ಟಿತ್ತು. ಅನಾವಶ್ಯಕವಾಗಿ ಆರ್ ಎಸ್ ಎಸ್ ಬಗ್ಗೆ ಮಾತನಾಡಬೇಡಿ, ಸೂಕ್ತ ತನಿಖೆ ನಡೆಸಿ ಎಂದು ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಾದ ಮೂರು ದಿನಗಳ ಬಳಿಕ ಕೇಂದ್ರ ಸರ್ಕಾರ ಶುಕ್ರವಾರ ಮೌನ ಮುರಿಯುವ ಮೂಲಕ ತಿರುಗೇಟು ನೀಡಿದೆ.
ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆಯಲ್ಲಿ ಆರ್ ಎಸ್ ಎಸ್ ಕೈವಾಡ ಇರುವುದಾಗಿ ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ಕೇಂದ್ರ ಕಾನೂನು ಸಚಿವ ರವಿಶಂಕರ್ ಪ್ರಸಾದ್ ಅವರು ಪತ್ರಿಕಾಗೋಷ್ಠಿ ನಡೆಸಿ ರಾಹುಲ್ ಗಾಂಧಿ ಹಾಗೂ ಕರ್ನಾಟಕ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.
ಗೌರಿ ಹತ್ಯೆಗೆ ಸಂಬಂಧಿಸಿದಂತೆ ಯಾವುದೇ ಆಧಾರವಿಲ್ಲದೇ ರಾಹುಲ್ ಗಾಂಧಿ ಹೇಗೆ ಆರೋಪಿಸಿದ್ದಾರೆ ಎಂದು ಪ್ರಶ್ನಿಸಿದರು. ತನಿಖೆಗೂ ಮೊದಲೇ ಯಾರೂ ತೀರ್ಪು ಕೊಡಬಾರದು.
ಗೌರಿ ಹತ್ಯೆಯಲ್ಲಿ ಬಲಪಂಥೀಯ ಸಂಘಟನೆ ಮೇಲೆ ಗೂಬೆ ಕೂರಿಸಲಾಗುತ್ತಿದೆ. ಆದರೆ ಕರ್ನಾಟಕದಲ್ಲಿ 2 ನಕ್ಸಲೀಯರ ಗುಂಪುಗಳಾಗಿವೆ. ನಕ್ಸಲರಿಗೂ ಗೌರಿ ಲಂಕೇಶ್ ಮೇಲೆ ಸಿಟ್ಟಿತ್ತು. ಪರಿಹಾರ ಕೊಡಿಸುವುದಾಗಿ ಮುಖ್ಯವಾಹಿನಿಗೆ ಕರೆ ತಂದಿದ್ದ 5 ನಕ್ಸಲೀಯರು ಜೈಲು ಸೇರಿದ್ದಾರೆ. ಹಾಗಾಗಿ ಮಾವೋವಾದಿಗಳಿಗೂ ಗೌರಿ ಮೇಲೆ ಸಿಟ್ಟಿದೆ. ಆ ಬಗ್ಗೆಯೂ ರಾಜ್ಯ ಸರ್ಕಾರ ತನಿಖೆ ನಡೆಸಲಿ ಎಂದು ರವಿಶಂಕರ್ ಪ್ರಸಾದ್ ಹೇಳಿದರು.
ಆರ್ ಎಸ್ ಎಸ್ ನಾಯಕರ ಹತ್ಯೆಯಾದಾಗ ಯಾಕೆ ರಾಹುಲ್ ಗಾಂಧಿ ಸುಮ್ಮನಿದ್ದರು, ಕೇರಳದಲ್ಲಿ ಬಿಜೆಪಿ ನಾಯಕರ ಹತ್ಯೆಯಾದಾಗಲೂ ಯಾಕೆ ಮೌನವಾಗಿದ್ದು ಎಂದು ಪ್ರಶ್ನಿಸಿದ್ದಾರೆ.