Advertisement

ರವಿ ಪೂಜಾರಿ ರಾಜ್ಯ ಪೊಲೀಸರ ವಶಕ್ಕೆ

10:21 AM Feb 26, 2020 | Team Udayavani |

ಬೆಂಗಳೂರು: ಸುಮಾರು ಎರಡೂವರೆ ದಶಕಗಳ ಕಾಲ ವಿದೇಶದಲ್ಲಿ ತಲೆಮರೆಸಿಕೊಂಡು ಭಾರತದ ಉದ್ಯಮಿಗಳು, ಸಿನಿಮಾ ನಟರು, ರಿಯಲ್‌ ಎಸ್ಟೇಟ್‌, ರಾಜಕೀಯ ಮುಖಂಡರಿಗೆ ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿದ್ದ ಮೋಸ್ಟ್‌ ವಾಟೆಂಡ್‌ ಅಂತಾರಾಷ್ಟ್ರೀಯ ಭೂಗತಪಾತಕಿ ರವಿ ಪ್ರಕಾಶ್‌ ಪೂಜಾರಿ ಅಲಿಯಾಸ್‌ ರವಿ ಪೂಜಾರಿಯನ್ನು ಕೊನೆಗೂ ಕರ್ನಾಟಕ ಪೊಲೀಸರು ವಶಕ್ಕೆ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

Advertisement

ಕರ್ನಾಟಕ ಪೊಲೀಸರು ಹೊರಡಿಸಿದ ರೆಡ್‌ಕಾರ್ನರ್‌ ನೋಟಿಸ್‌ ಮೇರೆಗೆ ಸೆನಗಲ್‌ ಇಂಟರ್‌ಪೋಲ್‌ ಪೊಲೀಸರು 2019ರ ಜ.19 ರಂದು ರವಿ ಪೂಜಾರಿಯನ್ನು ಬಂಧಿಸಿದ್ದರು. ಬಳಿಕ ಆತ ಜಾಮೀನು ನೀಡುವಂತೆ ನ್ಯಾಯಾಲಯದ ಮೊರೆ ಹೋಗಿದ್ದ. ಆದರೆ, ಅಲ್ಲಿನ ಕೋರ್ಟ್‌ ಜಾಮೀನು ನಿರಾಕರಿಸಿತ್ತು. ಈ ಸಂಬಂಧ 13 ತಿಂಗಳಿಂದ ಜೈಲು ಶಿಕ್ಷೆ ಅನುಭವಿಸುತ್ತಿದ್ದ ಆತನನ್ನು ಅಲ್ಲಿನ ಸರ್ಕಾರ ಹಾಗೂ ಸುಪ್ರೀಂ ಕೋರ್ಟ್‌ನ “ದ್ವಿಪಕ್ಷೀಯ ಒಪ್ಪಂದ’ ಮೇರೆಗೆ ವಿಶೇಷ ಆದ್ಯತೆ ನೀಡಿ ಭಾರತಕ್ಕೆ ಹಸ್ತಾಂತರಿಸಿದೆ.

ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮರ್‌ ಕುಮಾರ್‌ ಪಾಂಡೆ, ಕೇಂದ್ರ ಅಪರಾಧ ವಿಭಾಗದ(ಸಿಸಿಬಿ) ಜಂಟಿ ಆಯುಕ್ತ ಸಂದೀಪ್‌ ಪಾಟೀಲ್‌ ನೇತೃತ್ವದ ಇನ್ಸ್‌ಪೆಕ್ಟರ್‌ ಸಿದ್ದಪ್ಪ ಬೊಳೇತ್ತಿನ್‌, ಕಾನ್‌ಸ್ಟೆಬಲ್‌ ಜಯಪ್ರಕಾಶ್‌ ಚಂದ್ರಶೇಖರ್‌ ತಂಡ ರವಿ ಪೂಜಾರಿಯನ್ನು ಭಾನುವಾರ ತಡರಾತ್ರಿ ಬೆಂಗಳೂರಿಗೆ ಕರೆತಂದಿದೆ. ಪೂಜಾರಿ ವಿರುದ್ಧ ಕರ್ನಾಟಕದಲ್ಲಿ ಕೊಲೆ, ಸುಲಿಗೆ, ಪ್ರಾಣ ಬೆದರಿಕೆ ಸೇರಿ ಇತರೆ 97 ಪ್ರಕರಣಗಳು ದಾಖಲಾಗಿದ್ದು, ಈ ಪೈಕಿ 47 ಪ್ರಕರಣಗಳು ಬೆಂಗಳೂರಿನ ವಿವಿಧ ಪೊಲೀಸ್‌ ಠಾಣೆಗಳಲ್ಲಿ ದಾಖಲಾಗಿವೆ.

ಸದ್ಯ ತಿಲಕನಗರ ಠಾಣೆಯಲ್ಲಿ 2007ರಲ್ಲಿ ದಾಖಲಾಗಿದ್ದ ಶಬನಮ್‌ ಡೆವಲಪರ್ಸ್‌ ಉದ್ಯೋಗಿಗಳಿಬ್ಬರಿಗೆ ಶೂಟೌಟ್‌ ಮಾಡಿ ಕೊಲೆ ಮಾಡಿರುವ ಪ್ರಕರಣದಲ್ಲಿ ವಶಕ್ಕೆ ಪಡೆದುಕೊಂಡಿದೆ. ಅದರ ಮಾಲೀಕ ಸಮಿವುಲ್ಲಾನ ಕೊಲೆಗೆ ಯತ್ನಿಸಿದ್ದು, ಇತರೆ ಪ್ರಕರಣಗಳ ಬಗ್ಗೆಯೂ ತನಿಖೆ ಮುಂದುವರಿಸಲಾಗಿದೆ. ಕರ್ನಾಟಕ ಮಾತ್ರವಲ್ಲದೆ ಮುಂಬೈ, ಥಾಣೆ, ಗುಜರಾತ್‌, ಕೇರಳದ ಕೊಚ್ಚಿಯಲ್ಲೂ ರವಿ ಪೂಜಾರಿ ವಿರುದ್ಧ ಸುಲಿಗೆ ಮತ್ತಿತರ ಪ್ರಕರಣಗಳು ದಾಖಲಾಗಿವೆ. ಸೆನಗಲ್‌ ಮತ್ತು ಬುರ್ಕಿನೋ ಫಾಸೋದಲ್ಲಿದ್ದುಕೊಂಡೇ ಭಾರತದ ಭೂಗತ ಜಗತ್ತನ್ನು ನಿರ್ವಹಿಸುತ್ತಿದ್ದ. ಇಂಟರ್‌ನೆಟ್‌ ಕರೆ ಮಾಡಿ ಪ್ರಾಣ ಬೆದರಿಕೆ ಹಾಕಿ ಸುಲಿಗೆ ಮಾಡುತ್ತಿದ್ದ ಎಂದು ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್‌ ಮಹಾನಿರ್ದೇಶಕ ಅಮರ್‌ ಕುಮಾರ್‌ ಪಾಂಡೆ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

ಹೋಟೆಲ್‌ “ಮಹಾರಾಜ’ ಮಾಲೀಕ: ಬರ್ಕಿನೋ ಫಾಸೋದಲ್ಲಿ 12 ವರ್ಷ ಪತ್ನಿ ಮತ್ತು ಮೂವರು ಮಕ್ಕಳ ಜತೆ ವಾಸವಾಗಿದ್ದ ರವಿ ಪೂಜಾರಿ, ಟೆಕ್ಸ್‌ಟೈಲ್‌ ಉದ್ಯಮ, ಎಲೆಕ್ಟ್ರಾನಿಕ್‌ ವಸ್ತುಗಳ ಮಾರಾಟ ವ್ಯವಹಾರ ಕೂಡ ನಡೆಸುತ್ತಿದ್ದ. ಅನಂತರ ಸೆನಗಲ್‌ಗೆ ಸ್ಥಳಾಂತರಗೊಂಡಾಗ ಅಲ್ಲಿ ಮಹಾರಾಜ ಎಂಬ ಹೆಸರಿನ ಹೋಟೆಲ್‌ ಹಾಗೂ ಇತರೆ ಉದ್ಯಮಗಳ ಶಾಖೆ ತೆರೆದು ವ್ಯಾಪಾರ ನಡೆಸುತ್ತಿದ್ದ. ಆತನ ಇಬ್ಬರು ಹೆಣ್ಣು ಮಕ್ಕಳು ಕೆನಡಾದಲ್ಲಿ ವಾಸವಾಗಿದ್ದು, ಪತ್ನಿ ಮತ್ತು ಒಬ್ಬ ಪುತ್ರನ ಜತೆ ಸೆನಗಲ್‌ನಲ್ಲಿ ವಾಸವಾಗಿದ್ದ. ಈ ವ್ಯವಹಾರಗಳಿಂದ ಮಾಸಿಕ 30-35 ಲಕ್ಷ ರೂ. ಗಳಿಸುತ್ತಿದ್ದ.

Advertisement

ಸಮಾಜ ಸೇವಕ: ಭಾರತದಲ್ಲಿ ಭೂಗತ ಪಾತಕಿಯಾಗಿರುವ ರವಿ ಪೂಜಾರಿ, ಬುರ್ಕಿನೋ ಫಾಸೋ ಮತ್ತು ಸೆನಗಲ್‌ ಜನರ ಪಾಲಿಗೆ ಸಮಾಜ ಸೇವಕನಾಗಿದ್ದ. ನವರಾತ್ರಿ ಹಾಗೂ ಹಿಂದೂ ಹಬ್ಬದ ಸಂದರ್ಭದಲ್ಲಿ ಸ್ಥಳೀಯ ನಿವಾಸಿಗಳಿಗೆ ಊಟ, ಬಟ್ಟೆ ಕೊಟ್ಟು ಸತ್ಕರಿಸುತ್ತಿದ್ದ. ಅಗತ್ಯಬಿದ್ದಲ್ಲಿ ಸೂರು ಕಟ್ಟಿಸಿಕೊಡುತ್ತಿದ್ದ. ಜತೆಗೆ ಗ್ರಾಮೀಣ ಪ್ರದೇಶದ ಜನರಿಗೆ ಕೃಷಿ ಮತ್ತು ಕುಡಿಯುವ ನೀರಿಗಾಗಿ ಪ್ರಾಯೋಜಕತ್ವದಲ್ಲಿ ಉಚಿತ ಪಂಪ್‌ಸೆಟ್‌ಗಳನ್ನು ಕೊಡಿಸುತ್ತಿದ್ದ ಎಂದು ಅಮರ್‌ ಕುಮಾರ್‌ ಪಾಂಡೆ ಹೇಳಿದರು. ಪಾತಕಿಯನ್ನು ವಶಕ್ಕೆ ಪಡೆಯುವ ಪ್ರಕ್ರಿಯೆಗೆ ಭಾರತ ಸರ್ಕಾರದ ಹತ್ತಾರು ಇಲಾಖೆಗಳು, ಬುರ್ಕಿನೋ ಫಾಸೋ, ಸೆನಗಲ್‌ ದೇಶಗಳ ಅಧ್ಯಕ್ಷರು, ಸಚಿವರು, ಪೊಲೀಸರು ಉತ್ತಮ ಸಹಕಾರ ನೀಡಿದರು ಎಂದರು.

ನೀವು ಇಂಡಿಯಾದವರಾ?: ಸೆನಗಲ್‌ ಜೈಲಿನಿಂದ ಹೊರಗಡೆ ಬಂದ ಕೂಡಲೇ ಕರ್ನಾಟಕ ಪೊಲೀಸರ ತಂಡವನ್ನು ಕಂಡ ರವಿ ಪೂಜಾರಿ, ಹಿಂದಿಯಲ್ಲಿ “ಆಪ್‌ ಲೋಗ್‌ ಇಂಡಿಯಾ ಸೇ ಆಯಾ ಕ್ಯಾ?’ ಎಂದ. ಅದಕ್ಕೆ ನಾನು ಕೂಡ ಹಿಂದಿಯಲ್ಲಿಯೇ ಉತ್ತರಿಸಿ “ಆಪ್‌ನೇ ಬುಲಾಯನಾ.. ಇಸ್‌ ಲಿಯೇ ಹಮ್‌ ಚಲೇ ಆಯೇ’ ಎಂದೆ ಎಂದು ಅಮರ್‌ ಕುಮಾರ್‌ ಪಾಂಡೆ ಹೇಳಿದರು.

ನಕಲಿ ಪಾಸ್‌ಪೋರ್ಟ್‌ ಮೂಲಕ ಸೆನಗಲ್‌ಗೆ: ಮಂಬೈನಲ್ಲಿ 1994ರಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ರವಿ ಪೂಜಾರಿಯನ್ನು ಬಂಧಿಸಲಾಗಿತ್ತು. ಈ ವೇಳೆ ಆತನ ಬೆರಳಚ್ಚು, ಪೋಟೋ ಸಂಗ್ರಹಿಸಲಾಗಿತ್ತು. ಬಳಿಕ ಜಾಮೀನು ಪಡೆದು ಹೊರ ಬಂದ ಈತ, ಇನ್ನಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ. ಬಳಿಕ ಮೈಸೂರು ವಿಳಾಸದ ನಕಲಿ ಪಾಸ್‌ಪೋರ್ಟ್‌ ಸಿದ್ಧಪಡಿಸಿ ಕೊಂಡು ನೇಪಾಳ, ಬ್ಯಾಂಕಾಕ್‌, ಉಗಾಂಡಾ, ಬುರ್ಕಿನೋ ಫಾಸೋ ದೇಶಕ್ಕೆ ಹೋಗಿದ್ದಾನೆ. ಬಳಿಕ ಬುರ್ಕಿನೋ ಫಾಸೋ ದೇಶದ ಪಾಸ್‌ಪೋರ್ಟ್‌ ಪಡೆದು ಸೆನಗಲ್‌ನಲ್ಲಿ ವಾಸವಾಗಿದ್ದ ಎಂದು ಅಮರ್‌ ಕುಮಾರ್‌ ಪಾಂಡೆ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next