Advertisement

ರವಿ ಪೂಜಾರಿ ಕಾನೂನು ಮೊರೆ; ವಕೀಲರ ನಿಯೋಜನೆ

12:30 AM Feb 07, 2019 | Team Udayavani |

ಮಂಗಳೂರು: ಪಶ್ಚಿಮ ಆಫ್ರಿಕಾದ ಸೆನಗಲ್‌ನಲ್ಲಿ ಬಂಧಿತನಾಗಿರುವ ಭೂಗತ ಪಾತಕಿ ರವಿ ಪೂಜಾರಿ ಕಾನೂನು ಹೋರಾಟಕ್ಕೆ ಸಿದ್ಧತೆ ನಡೆಸಿದ್ದು, ಅಲ್ಲಿನ ಪೊಲೀಸರ ಮುಂದೆ ವಾದ ಮಂಡಿಸಲು ಪ್ರತ್ಯೇಕ ವಕೀಲರನ್ನು ನಿಯೋಜಿಸಿಕೊಂಡಿದ್ದಾನೆ ಎನ್ನುವ ಮಹತ್ವದ ಮಾಹಿತಿ ಉನ್ನತ ಮೂಲಗಳಿಂದ “ಉದಯವಾಣಿ’ಗೆ ಲಭ್ಯವಾಗಿದೆ.

Advertisement

ಮೂರು ವಾರಗಳ ಹಿಂದೆ ನಕಲಿ ಪಾಸ್‌ಪೋರ್ಟ್‌ ಹೊಂದಿದ್ದ ಭೂಗತ ಪಾತಕಿ ರವಿ ಪೂಜಾರಿಯನ್ನು ಇಂಟರ್‌ ಪೋಲ್‌ ಮೂಲಕ ಸೆನಗಲ್‌ನ ಡಕರ್‌ನಲ್ಲಿ ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇತ್ತ ಆತನನ್ನು ಭಾರತಕ್ಕೆ ಹಸ್ತಾಂತರ ಅಥವಾ ಗಡೀಪಾರು ಮಾಡಿಸಿಕೊಳ್ಳುವುದಕ್ಕೆ ಇಂಟರ್‌ ಪೋಲ್‌ ಹಾಗೂ ಡಕರ್‌ನಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಮೂಲಕ ಕರ್ನಾಟಕ ಸೇರಿದಂತೆ ಇಲ್ಲಿನ ಪೊಲೀಸರು ಪ್ರಯತ್ನಿಸುತ್ತಿದ್ದಾರೆ. ಆದರೆ ಆತ ಸೆನಗಲ್‌ ಪೊಲೀಸರ ಮುಂದೆ ಕಾನೂನು ಹೋರಾಟ ಮಾಡಿ ಅಲ್ಲಿಂದ ತಪ್ಪಿಸಿಕೊಳ್ಳುವುದಕ್ಕೆ ಪ್ರಯತ್ನಿಸುತ್ತಿದ್ದಾನೆ ಎನ್ನಲಾಗಿದೆ.

ಸೆನಗಲ್‌ನಲ್ಲಿರುವ ತನ್ನ ವ್ಯಾಪಾರ-ವಹಿವಾಟು ಪಾಲುದಾರರ ಸಹಾಯದೊಂದಿಗೆ ಕಾನೂನು ಹೋರಾಟಕ್ಕೆ ಸ್ಥಳೀಯ ವಕೀಲರನ್ನು ನೇಮಿಸಿಕೊಂಡಿದ್ದು, ಆತ ಹೇಗಾದರೂ ಮಾಡಿ ಪೊಲೀಸರ ಹಿಡಿತದಿಂದ ಪಾರಾಗುವ ಯತ್ನದಲ್ಲಿದ್ದಾನೆ. ಆದ್ದರಿಂದ ಆತನನ್ನು ಶೀಘ್ರದಲ್ಲಿ ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳಲು ಅಗತ್ಯ ದಾಖಲೆಗಳನ್ನು ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಪೊಲೀಸರು ಸಲ್ಲಿಸುವ ಅಗತ್ಯವಿದೆ ಎಂದು ಮೂಲಗಳು ಹೇಳಿವೆ.

ಒಂದುವೇಳೆ ನಮ್ಮ ಪೊಲೀಸರು ಸೂಕ್ತ ದಾಖಲೆ ಒದಗಿಸುವುದಕ್ಕೆ ವಿಳಂಬ ಮಾಡಿದರೆ ರವಿ ಪೂಜಾರಿ ಅಲ್ಲಿಂದ ತಪ್ಪಿಸಿಕೊಳ್ಳುವ ಅಪಾಯವಿದೆ. ಏಕೆಂದರೆ ಆತ ಈಗ ಸೆನಗಲ್‌ ಸೇರಿದಂತೆ ಪಶ್ಚಿಮ ಆಫ್ರಿಕಾದ ಹಲವು ದೇಶಗಳಲ್ಲಿ ಸ್ಥಳೀಯ ಉದ್ಯಮಿಗಳ ಪಾಲುದಾರಿಕೆಯನ್ನು ಹೊಟೇಲ್‌ ಸೇರಿದಂತೆ ನಾನಾ ರೀತಿಯ ಉದ್ಯಮ ನಡೆಸುತ್ತಿದ್ದಾನೆ. ಹೀಗಿರುವಾಗ ತಾನೊಬ್ಬ ಉದ್ಯಮಿ ಎಂದು ತೋರಿಸಿಕೊಂಡು ಭಾರತೀಯ ಪೊಲೀಸರು ಮಾಡುವ ಆರೋಪಗಳಿಂದ ಸೆನಗಲ್‌ನಿಂದ ಬಚಾವ್‌ ಆಗುವುದು ಆತನ ಲೆಕ್ಕಾಚಾರ ಎನ್ನಲಾಗಿದೆ.

ಈ ಕಾರಣಕ್ಕೆ ಕರ್ನಾಟಕ ಸೇರಿದಂತೆ ನಮ್ಮ
ಪೊಲೀಸರು ರವಿ ಪೂಜಾರಿಯ ಮೇಲಿರುವ ಕ್ರಿಮಿನಲ್‌ ಪ್ರಕರಣಗಳನ್ನು ಆದಷ್ಟು ಬೇಗ ಭಾಷಾಂತರಿಸಿ ಆ ದೇಶದ ನ್ಯಾಯಾಲಯಕ್ಕೆ ಸಲ್ಲಿಸಬೇಕಾಗುತ್ತದೆ. ಆ ಮೂಲಕ, ಆತನನ್ನು ಅಲ್ಲಿಂದ ಭಾರತಕ್ಕೆ ಗಡೀಪಾರು ಮಾಡಿಸಿಕೊಳ್ಳು ವುದಕ್ಕೆ ಬೇಕಾದ ಕಾನೂನು ಕುಣಿಕೆಯನ್ನು ಬಿಗಿಗೊಳಿಸುವ ಅಗತ್ಯವಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Advertisement

ಭಾರತಕ್ಕೆ ಹಸ್ತಾಂತರ ಪ್ರಕ್ರಿಯೆ ಚುರುಕು: ರಾಜ್ಯ ಗೃಹ ಸಚಿವ ಎಂ.ಬಿ. ಪಾಟೀಲ್‌
ಪ್ರಕರಣದ ಬಗ್ಗೆ “ಉದಯವಾಣಿ’ಗೆ ಪ್ರತಿಕ್ರಿಯಿಸಿರುವ ಗೃಹಸಚಿವ ಎಂ.ಬಿ. ಪಾಟೀಲ್‌, “ರವಿ ಪೂಜಾರಿಯನ್ನು ಭಾರತಕ್ಕೆ ಹಸ್ತಾಂತರಿಸಲು ಬೇಕಾಗಿರುವ ಎಲ್ಲ ದಾಖಲೆಗಳನ್ನು ಸೆನಗಲ್‌ ದೇಶಕ್ಕೆ ಒದಗಿಸುವ ಕೆಲಸದಲ್ಲಿ ರಾಜ್ಯದ ಪೊಲೀಸರು ನಿರತರಾಗಿದ್ದಾರೆ. ಯಾವುದೇ ವಿಳಂಬ ಆಗದಂತೆ ಪೊಲೀಸರಿಗೆ ನಾನು ಕೂಡ ಸೂಚನೆ ನೀಡುತ್ತೇನೆ. ಒಟ್ಟಾರೆಯಾಗಿ ನಮ್ಮ ರಾಜ್ಯದಿಂದ ಕೈಗೊಳ್ಳಬೇಕಾಗಿರುವ ಕಾನೂನು ಪ್ರಕ್ರಿಯೆಯನ್ನು ಮತ್ತಷ್ಟು ತ್ವರಿತ ಗತಿಯಲ್ಲಿ ಕೈಗೊಳ್ಳಲಾಗುವುದು’ ಎಂದು ಹೇಳಿದ್ದಾರೆ.

“ರವಿ ಪೂಜಾರಿಯನ್ನು ಕರೆ ತರುವ ಕೀರ್ತಿಯನ್ನು ಪಡೆದುಕೊಳ್ಳುವುದಕ್ಕೆ ಪೊಲೀಸ್‌ ಇಲಾಖೆಯೊಳಗೆ ಅಧಿಕಾರಿಗಳ ನಡುವೆಯೇ ಪೈಪೋಟಿ ನಡೆಯುತ್ತಿದೆ ಎನ್ನುವ ಆರೋಪದ ಬಗ್ಗೆ ನನಗೆ ಮಾಹಿತಿಯಿಲ್ಲ. ಒಂದುವೇಳೆ ಆ ರೀತಿಯ ಭಿನ್ನಾಭಿಪ್ರಾಯ-ಗೊಂದಲ ಏನಾದರೂ ಇದ್ದರೆ ಅದನ್ನು ಸರಿಪಡಿಸಿಕೊಂಡು, ಈ ಕೂಡಲೇ ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಕರೆತರಲು “ಕ್ರೆಡಿಟ್‌ ವಾರ್‌’
ರವಿ ಪೂಜಾರಿಯನ್ನು ಭಾರತಕ್ಕೆ ಕರೆತರುವ ವಿಚಾರದಲ್ಲಿ ಪೊಲೀಸ್‌ ಇಲಾಖೆಯಲ್ಲಿಯೇ ಅಧಿಕಾರಿಗಳ ನಡುವೆ “ಕ್ರೆಡಿಟ್‌ ವಾರ್‌’ ಆರಂಭವಾಗಿದೆ ಎನ್ನಲಾಗಿದೆ. ಅಂದರೆ ಕಾನೂನು ವಿಚಾರವಾಗಿ ದಾಖಲೆಗಳನ್ನು ಸಲ್ಲಿಸುವುದಕ್ಕೆ ರಾಜ್ಯದಿಂದ ಯಾವ ಮಟ್ಟದ ಪೊಲೀಸ್‌ ಅಧಿಕಾರಿಗಳನ್ನು ಸೆನಗಲ್‌ಗೆ ಕಳುಹಿಸಬೇಕು ಎನ್ನುವ ಬಗ್ಗೆಯೇ ಇನ್ನೂ ಅಂತಿಮ ತೀರ್ಮಾನವಾಗಿಲ್ಲ. ಅಧಿಕಾರಿಗಳ ಪೈಪೋಟಿಯಿಂದಾಗಿ ರವಿ ಪೂಜಾರಿ ಪ್ರಕರಣದಲ್ಲಿ ದಾಖಲೆಗಳನ್ನು ಕಳುಹಿಸಿ ಕೊಡುವುದಕ್ಕೆ ಸ್ವಲ್ಪ ಮಟ್ಟಿನ ವಿಳಂಬ ಆಗುತ್ತಿದೆ ಎನ್ನುವ ಆರೋಪವೂ ಕೇಳಿ ಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next