ಬೆಂಗಳೂರು: ಭೂಗತ ಪಾತಕಿ ರವಿ ಪೂಜಾರಿಯನ್ನು ಮಾ.19ರವರೆಗೆ ಸಿಸಿಬಿ ಪೊಲೀಸರ ವಶಕ್ಕೆ ಒಪ್ಪಿಸಿ 30ನೇ ಎಸಿಎಂಎಂ ನ್ಯಾಯಾಲಯ ಆದೇಶಿಸಿದೆ.
ತಿಲಕ್‌ನಗರದ ಶಬನಮ್ ಡೆವಲಪರ್ ಕಚೇರಿ ಸಿಬ್ಬಂದಿ ಕೊಲೆ ಪ್ರಕರಣದ ವಿಚಾರಣೆ ಮುಗಿಸಿದ ಸಿಸಿಬಿ ಅಧಿಕಾರಿಗಳು ಶುಕ್ರವಾರ ನ್ಯಾಯಾಲಯಕ್ಕೆ ಹಾಜರು ಪಡಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದರು.
ಶನಿವಾರ ರವಿ ಪೂಜಾರಿಯನ್ನು 30ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರುಪಡಿಸಿ, ವೈಯಾಲಿಕಾವಲ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ವಿಚಾರಣೆಗಾಗಿ ವಶಕ್ಕೆ ನೀಡುವಂತೆ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶರು ಮಾ.19 ಸಿಸಿಬಿ ವಶಕ್ಕೆ ಆದೇಶಿಸಿದರು. ಬಳಿಕ ಸಿಸಿಬಿ ಪೊಲೀಸರು, ಬಿಗಿ ಬಂದೋಬಸ್ತ್ ಮೂಲಕ ಮಡಿವಾಳದ ಎಫ್‌ಎಸ್‌ಎಲ್ ಆವರಣದ ವಿಚಾರಣಾ ಕೇಂದ್ರಕ್ಕೆ ಕರೆದೊಯ್ದು ವಿಚಾರಣೆಗೆ ಒಳಪಡಿಸಿದ್ದಾರೆ.
2001ರ ಉದ್ಯಮಿ ಕೊಲೆ: 2001ರಲ್ಲಿ ವೈಯಾಲಿಕಾವಲ್ ರಿಯಲ್ ಎಸ್ಟೇಟ್ ಉದ್ಯಮಿ ಸುಬ್ಬರಾಜು ಎಂಬುವರಿಗೆ ಹಣಕ್ಕೆ ಬೇಡಿಕೆ ಇಟ್ಟು ಬೆದರಿಕೆ ಹಾಕಿದ್ದ ರವಿ ಪೂಜಾರಿ, ಹಣ ಕೊಡಲು ನಿರಾಕರಿಸಿದ್ದಕ್ಕೆ ತನ್ನ ಸಹಚರರನ್ನು ಬಿಟ್ಟು ಹತ್ಯೆ ಮಾಡಿಸಿದ್ದ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ, ಹಲವು ಮಹತ್ವದ ಸಾಕ್ಷ್ಯ ಸಂಗ್ರಹಿಸಲಾಗಿತ್ತು. ಅವರ ವಿಚಾರಣೆಯಲ್ಲಿ ರವಿ ಪೂಜಾರಿ ಕೈವಾಡ ಬಯಲಾಗಿತ್ತು. ಈ ಹಿನ್ನೆಲೆಯಲ್ಲಿ ಹೆಚ್ಚಿನ ವಿಚಾರಣೆಗಾಗಿ ವಶಕ್ಕೆ ಪಡೆಯಲಾಗಿದೆ ಎಂದು ಸಿಸಿಬಿ ವಿಭಾಗದ ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.