ಗದಗ: ಅಫ್ಘಾನಿಸ್ತಾನದ ನರರಾಕ್ಷರ ಮಧ್ಯೆ ಸಿಲುಕಿದ್ದ ಜಿಲ್ಲೆಯ ವೀರಯೋಧರೊಬ್ಬರು ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ. ಯೋಧನ ಮರಳುವಿಕೆಯಿಂದ ಕುಟುಂಬಸ್ಥರು ನಿಟ್ಟುಸಿರು ಬಿಟ್ಟಿದ್ದಾರೆ.
ತಾಲೂಕಿನ ಬಳಗಾನೂರು ಗ್ರಾಮದ ವೀರಯೋಧ ರವಿ ನೀಲಗಾರ ಸುರಕ್ಷಿತವಾಗಿ ಸ್ವದೇಶಕ್ಕೆ ಮರಳಿದ್ದಾರೆ. ಐಟಿಬಿಪಿ(ಇಂಡೋ-ತಿಬೆಟ್ ಗಡಿ ಭದ್ರತಾ ಪಡೆ)ಯಲ್ಲಿ ಕಳೆದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಕಳೆದ 2 ವರ್ಷಗಳಿಂದ ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭದ್ರತಾ ಪಡೆಯ ಕಮಾಂಡೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು. ಒಟ್ಟು 24 ತಿಂಗಳ ಅವಧಿಗೆ ಕಾಬೂಲ್‌ಗೆ ನಿಯೋಜನೆಗೊಂಡಿದ್ದರು. ಈ ನಡುವೆ ಅಫ್ಘಾನಿಸ್ತಾನವನ್ನು ತಾಲಿಬಾನ್ ಉಗ್ರರು ವಶಕ್ಕೆ ಪಡೆದಿದ್ದಾರೆ. ಇದರಿಂದಾಗಿ ಕಳೆದ ಆ.16 ರಂದು ಭಾರತೀಯ ಸೇನೆ ಮತ್ತು ಭಾರತ ಸರಕಾರ ನಡೆಸಿದ ರಕ್ಷಣಾ ಕಾರ್ಯದಿಂದಾಗಿ ಕಮಾಂಡರ್ ರವಿ ನೀಲಗಾರ ಪ್ರಾಣಾಪಾಯದಿಂದ ಬಚಾವ್ ಆಗಿದ್ದು, ಸುರಕ್ಷಿತವಾಗಿ ತಾಯ್ನಾಡಿಗೆ ಮರಳಿದ್ದಾರೆ.
ಈ ಕುರಿತು ಪತ್ರಿಕೆಯೊಂದಿಗೆ ಮಾತನಾಡಿದ ವೀರಯೋಧ ರವಿ ನೀಲಗಾರ, ಒಟ್ಟು 24 ತಿಂಗಳ ಅವಧಿಗೆ ಕಾಬೂನ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಗೆ ತಮ್ಮನ್ನು ನಿಯೋಜಿಸಲಾಗಿತ್ತು. ಆಗಸ್ಟ್ ಎರಡನೇ ವಾರದವರೆಗೂ ಎಲ್ಲವೂ ಸುಸ್ಥಿತಿಯಲ್ಲೇ ನಡೆಯುತ್ತಿತ್ತು. ಕಾಬೂನ್‌ನಲ್ಲಿ ನನ್ನ ಸೇವೆ ಪೂರ್ಣಗೊಳ್ಳಲು ಇನ್ನೂ ಒಂದು ತಿಂಗಳು ಬಾಕಿಯಿತ್ತು. ಅಷ್ಟರಲ್ಲಾಗಲೇ ತಾಲಿಬಾನಿಗಳು ದಾಳಿ ನಡೆಸಿದರು. ಹೀಗಾಗಿ, ಆ. 16ರಂದು ಭಾರತ ಸರಕಾರ ಕಾಬೂಲ್ ರಾಯಭಾರ ಕಚೇರಿಯಲ್ಲಿದ್ದ ಎಲ್ಲರನ್ನೂ ಸುರಕ್ಷಿತವಾಗಿ ಭಾರತಕ್ಕೆ ಕರೆತಂದಿದೆ. ಅದರಲ್ಲಿ ನಾನೂ ಒಬ್ಬ. ಸದ್ಯ ದೆಹಲಿಯಲ್ಲಿ 15 ದಿನಗಳ ಕಾಲ ಕೋವಿಡ್ ಕ್ವಾರಂಟೈನ್ ನಲ್ಲಿ ಇರಿಸಲಾಗಿದೆ. ಆರೋಗ್ಯದಲ್ಲೂ ಯಾವುದೇ ಸಮಸ್ಯೆ ಇಲ್ಲ ಎಂದು ತಿಳಿಸಿದರು.
ಅಫ್ಘಾನಿಸ್ತಾನದಲ್ಲಿ ತಾಲಿಬಾನಿಗಳ ಉಪಟಳ, ಹಿಂಸೆ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕಾಬೂಲ್‌ನಲ್ಲಿರುವ ರಾಯಭಾರ ಕಚೇರಿಯಲ್ಲಿ ಮೂವರು ಕನ್ನಡಿಗರು ಇದ್ದೆವು. ಬಾಗಲಕೋಟೆಯ ಮಂಜುನಾಥ ಮಾಲಿ ಮತ್ತು ಬೆಳಗಾವಿಯ ನಸೀಮುಲ್ಲಾ ಎಂಬುವವರಿದ್ದೆವು. ಆ.15 ರಂದು ಅಲ್ಲಿನ ಪರಿಸ್ಥಿತಿ ತೀವ್ರವಾಗಿ ಬಿಗಡಾಯಿಸಿತು. ಆನಂತರ ಆ.16 ರಂದು ಭಾರತ ಸರಕಾರ ಮತ್ತು ಸೇನೆ ನಡೆಸಿದ ಏರ್‌ಲಿಫ್ಟ್‌ನಿಂದಾಗಿ ಸುರಕ್ಷಿತವಾಗಿ ಭಾರತಕ್ಕೆ ಮರಳಿದ್ದೇವೆ ಎಂದರು.
ಭದ್ರತಾ ದೃಷ್ಟಿಯಿಂದ ಸೇನಾ ಕಾರ್ಯಾಚರಣೆ ಹಾಗೂ ಅದಕ್ಕೆ ಸಂಬಂಧಿಸಿದ ಮಾಹಿತಿ ಹಂಚಿಕೊಳ್ಳಲು ನಿರಾಕರಿಸಿದ ಅವರು, ತಾಲಿಬಾನಿಗಳು ಅಲ್ಲಿ ನಡೆಸುತ್ತಿರುವ ಹಿಂಸಾಚಾರ, ಕ್ರೌರ್ಯದ ಬಗ್ಗೆ ಈಗಾಗಲೇ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ನಮ್ಮ ಪರಿಸ್ಥಿತಿಯೂ ಅದಕ್ಕಿಂತ ಭಿನ್ನವಾಗಿರಲಿಲ್ಲ ಎನ್ನುವ ಮೂಲಕ ಸೂಕ್ಷ್ಮವಾಗಿ ತಮ್ಮ ನೋವು ಹೊರಹಾಕಿದರು.