ಬೆಂಗಳೂರು/ಕುಂದಾಪುರ: ರವಿ ಬಸ್ರೂರು(RAVI BASRUR) ಅಂದಕ್ಷಣ ನೆನಪಾಗುವುದು ಸಂಗೀತ ಲೋಕದಲ್ಲಿ ಮೋಡಿ ಮಾಡಿ ಪ್ಯಾನ್ ಇಂಡಿಯಾದಲ್ಲಿ ಮಿಂಚಿದ ನಮ್ಮ ಕುಂದಾಪುರ ಅಪ್ಟಟ ಪ್ರತಿಭೆ.
ʼಕೆಜಿಎಫ್ʼ, ʼಸಲಾರ್ʼ.. ದಂತಹ ಬಿಗ್ ಬಜೆಟ್ ಸಿನಿಮಾಗಳಿಗೆ ತನ್ನ ಮ್ಯೂಸಿಕ್ ಕಂಪೋಸ್‌ನಿಂದ ಜನಮನ ಗೆದ್ದ ರವಿ ಬಸ್ರೂರು, ಸಂಗೀತ ಲೋಕದಲ್ಲಿನ ಪ್ರಯೋಗದಿಂದ ಎಷ್ಟು ಜನಪ್ರಿಯರೋ ಸಿನಿಮಾ ನಿರ್ದೇಶನದಲ್ಲಿನ ಹೊಸ ಪ್ರಯೋಗದಿಂದಲೂ ಅಷ್ಟೇ ಜನಪ್ರಿಯರೂ ಹೌದು.
ಮಕ್ಕಳ ಕೈಯಿಂದಲೇ ದೊಡ್ಡವರ ಹಾಗೆ ಅಭಿನಯ ಮಾಡಿಸಿ ಅದನ್ನು ಯಶ್ ಹಾಗೂ ರಾಧಿಕಾ ಅವರಿಂದ ಧ್ವನಿ ಕೊಟ್ಟು ʼ ಗಿರ್ಮಿಟ್ʼ ಎನ್ನುವ ಸಿನಿಮಾವನ್ನು ಮಾಡಿದ್ದರು. ಸ್ಯಾಂಡಲ್ ವುಡ್ ನಲ್ಲಿ ವಿಶೇಷವಾಗಿ ಕರಾವಳಿ ಭಾಗದಲ್ಲಿ ಈ ಪ್ರಯತ್ನಕ್ಕೆ ಪ್ರಶಂಸೆ ಸಿಕ್ಕಿತ್ತು. ಚಿತ್ರ ಗೆಲ್ಲಲಿಲ್ಲ ಎನ್ನುವುದಕ್ಕೆ ಅವರು ಬೇಸರ ಮಾಡಿಕೊಂಡಿದ್ದರು.
ಇದೀಗ ಮತ್ತೆ ಹೊಸ ಬಗೆಯ ಸಾಹಸಕ್ಕೆ ರವಿ ಬಸ್ರೂರು ಮತ್ತವರ ತಂಡ ಕೈಹಾಕಿದೆ. ಈ ಹಿಂದೆ ಕರಾವಳಿಯ ಗಂಡು ಕಲೆ ಯಕ್ಷಗಾನ ಬಣ್ಣದ ಲೋಕದಲ್ಲಿ ಕಾಣಿಸಿಕೊಂಡಿತ್ತು. ಆದರೆ ಅದು ಆಯಾ ಸನ್ನಿವೇಶಕ್ಕೆ ಹಾಗೂ ಕೆಲ ಪಾತ್ರಗಳಿಗಷ್ಟೇ ಸೀಮಿತವಾಗಿತ್ತು.
ಇದೀಗ ಇಡೀ ಯಕ್ಷಗಾನವನ್ನೇ ಸಿನಿಮಾ ರೂಪಕ್ಕೆ ತರುವ ವಿಶಿಷ್ಟ ಪ್ರಯತ್ನಕ್ಕೆ ರವಿ ಬಸ್ರೂರು ಕೈಹಾಕಿದ್ದಾರೆ. ವಿಶೇಷವೆಂದರೆ ಈ ಪ್ರಯೋಗ ಸಿನಿಮಾ ಇತಿಹಾಸದಲ್ಲಿಯೇ ಮೊದಲ ಪ್ರಯೋಗ ಆಗಿದೆ.
ʼವೀರ ಚಂದ್ರಹಾಸʼ(VEERA CHANDRAHASA) ಎನ್ನುವ ಸಿನಿಮಾವನ್ನು ರವಿ ಬಸ್ರೂರು ನಿರ್ದೇಶನ ಮಾಡಲಿದ್ದಾರೆ. ಮೊದಲನೇಯದಾಗಿ ಸಿನಿಮಾದ ಟೀಸರ್ ರಿಲೀಸ್ ಮಾಡಲಾಗಿದೆ. ಯಕ್ಷಗಾನ ವೇಷವನ್ನು ತೊಟ್ಟು ಯುದ್ಧವನ್ನು ಮಾಡುವ ಪಾತ್ರಗಳನ್ನು ಟೀಸರ್ ನಲ್ಲಿ ತೋರಿಸಲಾಗಿದೆ.
ಇಲ್ಲಿ ಎಲ್ಲವೂ ಯಕ್ಷಗಾನ ಹಾಗೂ ಯಕ್ಷಗಾನದ ಪಾತ್ರವೇ ಪ್ರಧಾನವಾಗಿ ಕಂಡಿದೆ. ʼವೀರ ಚಂದ್ರಹಾಸʼ ವೆನ್ನುವ ಪಾತ್ರದ ಸುತ್ತ ಸಿನಿಮಾದ ಕತೆ ಸಾಗಲಿದೆ.
“ಚಿತ್ರರಂಗದ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಸಂಪೂರ್ಣ ಯಕ್ಷಗಾನ ವೈಭವ ಬೆಳ್ಳಿತೆರೆಯ ಮೇಲೆ” ಎಂದು ಚಿತ್ರತಂಡ ಹೇಳಿದೆ.
ಚಿತ್ರದ ಟೀಸರ್ ರಿಲೀಸ್ ಆಗಿದ್ದು, ರಿಲೀಸ್ ಡೇಟ್ ಇನ್ನಷ್ಟೇ ಅನೌನ್ಸ್ ಆಗಬೇಕಿದೆ. ಟಿಕೆಟ್ ಕೊಟ್ಟು ಯಕ್ಷಗಾನ ಆಟವನ್ನು ನೋಡುತ್ತಿದ್ದ ಪ್ರೇಕ್ಷಕರು ಟಿಕೆಟ್ ಕೊಟ್ಟು ಯಕ್ಷಗಾನ ಸಿನಿಮಾ ನೋಡುವತ್ತ ರವಿ ಬಸ್ರೂರು ಹೆಜ್ಜೆಯನ್ನಿಟ್ಟಿದ್ದಾರೆ.
ಶಿಥಿಲ್ ಶೆಟ್ಟಿ, ನಾಗಶ್ರೀ ಜಿ.ಎಸ್, ಪ್ರಸನ್ನ ಶೆಟ್ಟಿಗಾರ್ ಮಂದಾರ್ತಿ, ಉದಯ್ ಕಡಬಾಳ್, ರವೀಂದ್ರ ದೇವಾಡಿಗ, -ನಾಗರಾಜ್ ಸರ್ವೇಗಾರ್, ಗುಣಶ್ರೀ ಎಂ ನಾಯಕ್, ಶ್ರೀಧರ್ ಕಾಸರಕೋಡು, ಶ್ವೇತಾ ಅರೆಹೊಳೆ, ಪ್ರಜ್ವಲ್ ಕಿನ್ನಾಳ್ ಮೊದಲಾದವರು ಸಿನಿಮಾದಲ್ಲಿ ನಟಿಸಿದ್ದಾರೆ.