Advertisement

ಗಡಿನಾಡ ಕನ್ನಡಿಗರು ರಾಜಕೀಯ ಬೇಧ ಮರೆತು ಕನ್ನಡಿಗ ಪ್ರತಿನಿಧಿಯನ್ನು ಆರಿಸಬೇಕು: ರವೀಶ ತಂತ್ರಿ

02:12 PM Mar 28, 2019 | keerthan |

ಬದಿಯಡ್ಕ : ಪ್ರಪಂಚ ಇದುವರೆಗೆ ಕಾಣದಿರುವ ಅತ್ಯಂತ ಶ್ರೇಷ್ಠ ಪ್ರಧಾನಮಂತ್ರಿ ನರೇಂದ್ರ ಮೋದಿಯರನ್ನು ದೇಶಕ್ಕೆ ನೀಡಿದ ಭಾರತೀಯ ಜನತಾ ಪಕ್ಷದ ಅಭ್ಯರ್ಥಿಯಾಗಿ ಸ್ಪರ್ಧಿಸಲು ಹೆಮ್ಮೆಯೆನಿಸುತ್ತದೆ. ಶತ್ರು ರಾಷ್ಟ್ರದಲ್ಲಿಯೂ ನರೇಂದ್ರ ಮೋದಿಯವರ ಅಭಿಮಾನಿಗಳಿದ್ದಾರೆ. ಅಂತಹ ಮಹಾನ್‌ ನಾಯಕ ಮತ್ತೂಮ್ಮೆ ನಮ್ಮನ್ನಾಳಬೇಕು. ಗಡಿನಾಡಿನಲ್ಲಿ ಸದಾ ನೋವುಂಡ ಕನ್ನಡಿಗರು ರಾಜಕೀಯ ಬೇಧ ಮರೆತು ಕನ್ನಡಿಗ ಪ್ರತಿನಿಧಿಯನ್ನು ಆರಿಸಬೇಕು ಎಂದು ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌.ಡಿ.ಎ.ಅಭ್ಯರ್ಥಿ ರವೀಶ ತಂತ್ರಿ ಕುಂಟಾರು ಹೇಳಿದರು.

Advertisement

ಕಾಸರಗೋಡು ಲೋಕಸಭಾ ಕ್ಷೇತ್ರದ ಎನ್‌.ಡಿ.ಎ. ಚುನಾವಣಾ ಪ್ರಚಾರ ಕಚೇರಿಯನ್ನು ಬದಿಯಡ್ಕದಲ್ಲಿ ದೀಪಜ್ವಲನೆಗೈದು ಉದ್ಘಾಟಿಸಿ ಅವರು ಮಾತನಾಡಿದರು. ಎಲ್ಲ ಮತ ವಿಭಾಗದ ದೇಶಭಕ್ತರು ಮೋದಿಯವರನ್ನು ಒಪ್ಪಿ ಕೊಂಡಿದ್ದಾರೆ. ಆಡಳಿತದಲ್ಲಿ ನಿಯತ್ತನ್ನು ಕಾಯ್ದು, ವಿಶ್ವಾಸವನ್ನು ನೀಡುವ ಭಾರತೀಯ ಜನತಾ ಪಕ್ಷವು ರಾಜ್ಯದಲ್ಲಿ ಪ್ರಬಲ ಶಕ್ತಿಯಾಗಿ ಮೂಡಿಬರಲಿದೆ. ತಳಮಟ್ಟದಲ್ಲಿ ಕಾರ್ಯಕರ್ತರು ಕಠಿಣ ಪರಿಶ್ರಮದ ಮೂಲಕ ಮೋದಿಯವರ ಸಾಧನೆಯನ್ನು ಜನತೆಗೆ ತಿಳಿಸಿ, ಪ್ರತಿಯೊಬ್ಬರೂ ಮತದಾನದಲ್ಲಿ ಪಾಲ್ಗೊಳ್ಳುವಂತೆ ಕರೆನೀಡಬೇಕು. ಸದಾ ಸೋಲೆಂಬ ಋಣಾತ್ಮಕ ಚಿಂತನೆಯಿಂದ ಹೊರಬಂದು ದೇಶದ ಒಳಿತಿಗಾಗಿ ಮತನೀಡಬೇಕೆಂದು ಅವರು ಹೇಳಿದರು.

ಯುಡಿಎಫ್‌ ಹಾಗೂ ಎಲ್‌ಡಿಎಫ್‌ ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ವೋಟ್‌ ಬ್ಯಾಂಕ್‌ ರಾಜಕೀಯವನ್ನು ಮಾಡುತ್ತಿರುವ ಆ ಎರಡು ರಂಗಗಳನ್ನು ಸೋಲಿಸಿ ಎನ್‌.ಡಿ.ಎ. ಅಭ್ಯರ್ಥಿಗಳು ದೇಶದಾದ್ಯಂತ ಗೆಲ್ಲಬೇಕು. ಆದುದರಿಂದ ತಳಮಟ್ಟದ ಕೊರತೆಗಳನ್ನು ನೀಗಿಸುವಲ್ಲಿ ಕಾರ್ಯಕರ್ತರು ಶ್ರಮಪಡಬೇಕು. ಕಾಸರಗೋಡು ಜಿಲ್ಲೆಯ ಅಭಿವೃದ್ಧಿಯೆಂಬ ಕನಸನ್ನು ನನಸಾಗಿಸುವಲ್ಲಿ ಎಲ್ಲರ ಕಠಿಣ ಪರಿಶ್ರಮ ಅತೀ ಅಗತ್ಯ ಎಂದರು.

ಕಾಸರಗೋಡು ಮಂಡಲ ಅಧ್ಯಕ್ಷ ಎಂ.ಸುಧಾಮ ಗೋಸಾಡ ಸಭೆಯ ಅಧ್ಯಕ್ಷತೆಯನ್ನು ವಹಿಸಿ ಮಾತನಾಡುತ್ತಾ ಜನರೊಂದಿಗೆ ಸದಾ ಬೆರೆಯುತ್ತಿರುವ ಕನ್ನಡಿಗ ಅಭ್ಯರ್ಥಿ, ಸಮರ್ಥ ಮುಂದಾಳುತ್ವವನ್ನು ವಹಿಸಿಕೊಳ್ಳಬಲ್ಲ ನೇತಾರನನ್ನು ಆರಿಸಿ ಲೋಕಸಭೆಗೆ ಕಳುಹಿಸುವ ಮಹತ್ತರ ಜವಾಬ್ದಾರಿಯನ್ನು ಯಶಸ್ವಿಯಾಗಿ ನಿಭಾಯಿಸೋಣ. ಈ ಕಾರ್ಯದಲ್ಲಿ ಆತ್ಮವಿಶ್ವಾಸದಿಂದ ಮುನ್ನುಗ್ಗಬೇಕು ಎಂದು ಕರೆಯಿತ್ತರು. ಬಿಜೆಪಿ ದೇಶೀಯ ಸಮಿತಿ ಸದಸ್ಯ ಎಂ.ಸಂಜೀವ ಶೆಟ್ಟಿ ಮಾತನಾಡುತ್ತಾ ಯುದ್ಧ ಆರಂಭವಾಗಿದೆ. ರಾಜ್ಯದ ರಾಜಕಾರಣದಲ್ಲಿ ಬದಲಾವಣೆಯನ್ನು ಕಾಣಬೇಕಾದರೆ ಕಾರ್ಯಕರ್ತರು ತಳಮಟ್ಟದಲ್ಲಿ ಶ್ರಮಪಡಬೇಕು. ಈ ನಿಟ್ಟಿನಲ್ಲಿ ಪಕ್ಷದ ಎಲ್ಲಾ ಸದಸ್ಯರೂ ಮುಂದೆ ಬರಬೇಕು ಎಂದರು.

ರಾಷ್ಟ್ರೀಯ ಸ್ವಯಂಸೇವಕ ಸಂಘದ ಬದಿಯಡ್ಕ ಪ್ರಖಂಡ ಸಂಘ ಚಾಲಕ್‌ ಶಿವಶಂಕರ ಭಟ್‌ ಗುಣಾಜೆ, ನೇತಾರರಾದ ಸುರೇಶ್‌ ಕುಮಾರ್‌ ಶೆಟ್ಟಿ, ಶಿವಕೃಷ್ಣ ಭಟ್‌, ಜಯದೇವ ಖಂಡಿಗೆ, ಸುಜಾತಾ ಆರ್‌.ತಂತ್ರಿ, ರಾಮಪ್ಪ ಮಂಜೇಶ್ವರ, ಗೋಪಾಲಕೃಷ್ಣ ಮುಂಡೋಳುಮೂಲೆ, ಮೈರ್ಕಳ ನಾರಾಯಣ ಭಟ್‌, ಈಶ್ವರ ಮಾಸ್ತರ್‌ ಪೆರಡಾಲ, ಕೃಷ್ಣ ಮಣಿಯಾಣಿ ಮೊಳೆಯಾರು, ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು, ಪುಷ್ಪಾ ಭಾಸ್ಕರ, ಜಯಂತಿ, ಡಿ. ಶಂಕರ, ಹರೀಶ್‌ ಗೋಸಾಡ ಹಾಗೂ ನೂರಾರು ಕಾರ್ಯಕರ್ತರು ಹಾಜರಿದ್ದರು. ಹರೀಶ್‌ ನಾರಂಪಾಡಿ ಸ್ವಾಗತಿಸಿ, ಸುಕುಮಾರ ಕುದ್ರೆಪ್ಪಾಡಿ ವಂದಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next