Advertisement

ರಾಜ್ಯದ 2,207 ಗ್ರಾಮಗಳಲ್ಲಿ ಕುಡಿಯುವ ನೀರಿಗೆ ಸಮಸ್ಯೆ

12:37 AM May 19, 2024 | Team Udayavani |

ಬೆಂಗಳೂರು: ರಾಜ್ಯದ 2,207 ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಕಂಡುಬಂದಿದ್ದು ಅದರಲ್ಲಿ 548 ಗ್ರಾಮಗಳಿಗೆ ಟ್ಯಾಂಕರ್‌ಗಳ ಮೂಲಕ ಕುಡಿಯುವ ನೀರು ಒದಗಿಸಲಾಗುತ್ತಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್‌ ಖರ್ಗೆ ತಿಳಿಸಿದ್ದಾರೆ.

Advertisement

ಈ ಕುರಿತು ಶನಿವಾರ ಪತ್ರಿಕೆ ಪ್ರಕಟನೆ ನೀಡಿರುವ ಅವರು, 413 ಗ್ರಾಮಗಳನ್ನು ಒಳಗೊಂಡ 37 ಬಹುಗ್ರಾಮ ಕುಡಿಯುವ ನೀರು ಯೋಜನೆಯ ಜಲಮೂಲ ಒಣಗಿವೆ. ಈ ಗ್ರಾಮಗಳೂ ಸೇರಿದಂತೆ ಕುಡಿಯುವ ನೀರಿನ ಸಮಸ್ಯೆ ಇರುವ 2,207 ಗ್ರಾಮಗಳ ಪೈಕಿ 548 ಗ್ರಾಮಗಳಿಗೆ 846 ಟ್ಯಾಂಕರ್‌ ಹಾಗೂ 1,659 ಗ್ರಾಮಗಳಿಗೆ 2,098 ಖಾಸಗಿ ಕೊಳವೆಬಾವಿಗಳನ್ನು ಬಾಡಿಗೆಗೆ ಪಡೆದು ನೀರು ಪೂರೈಸಲಾಗುತ್ತಿದೆ ಎಂದು ಜಿಲ್ಲೆ ಗಳಲ್ಲಿ 480 ಬಹುಗ್ರಾಮ ಯೋಜನೆಗಳು ಕಾರ್ಯನಿರ್ವಹಿಸುತ್ತಿದ್ದು ಈ ಯೋಜನೆಗಳ ಮೂಲಕ 6,828 ಗ್ರಾಮಗಳಿಗೆ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದೆ. ಈ ಯೋಜನೆಗಳಲ್ಲಿ ಹೆಚ್ಚಿನವು ನದಿ ಆಧಾರಿತವಾಗಿವೆ ಮತ್ತು ಜಲಾಶಯಗಳ ಮೇಲ್ಭಾಗದಿಂದ ನೀರನ್ನು ತೆಗೆದುಕೊಳ್ಳುವ ಮಟ್ಟಿಗೆ ಸಮರ್ಥನೀಯವಾಗಿವೆ. ಜಲಾಶಯಗಳ ತಗ್ಗುಪ್ರದೇಶಗಳಿಂದ ನೀರನ್ನು ತೆಗೆದುಕೊಳ್ಳುವ ಸಂದರ್ಭಗಳಲ್ಲಿ ಯೋಜನೆಗಳ ಜಲಮೂಲ ಬತ್ತಿ ಹೋಗುತ್ತಿರುವು ದರಿಂದಲೂ ತೊಂದರೆ ಎದುರಾಗಿದೆ. ತೊಂದರೆಗೀಡಾದ ಪ್ರದೇಶಗಳಲ್ಲಿ ಕಾಮಗಾರಿಗಳನ್ನು ಕೈಗೊಳ್ಳಲು ನೀರು ಸರಬರಾಜು ಮಾಡಲು ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ 2024-25ನೆ ಸಾಲಿಗೆ 20 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಸಚಿವ ಖರ್ಗೆ ಮಾಹಿತಿ ನೀಡಿದರು.

ಮುಂಗಾರು ಹಂಗಾಮಿಗೆ ಕೃಷಿ ಇಲಾಖೆ ಸನ್ನದ್ಧ
ಇತ್ತ ಮುಂಗಾರು ಪೂರ್ವ ಮಳೆ ಚೆನ್ನಾಗಿ ಆಗುತ್ತಿದ್ದು, ಮುಂಗಾರು ಮಳೆಯ ಮೇಲೆಯೂ ನಿರೀಕ್ಷೆ ಹೆಚ್ಚಿದೆ ಎಂದಿರುವ ಕೃಷಿ ಸಚಿವ ಚಲುವರಾಯಸ್ವಾಮಿ, ಬಿತ್ತನೆ ಬೀಜ, ರಸಗೊಬ್ಬರಕ್ಕೆ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ಭರವಸೆ ನೀಡಿದ್ದಾರೆ. ಕಳೆದ ಬಾರಿ ಬರಗಾಲವಿದ್ದರೂ ಶೇ. 89ರಷ್ಟು ಬಿತ್ತನೆ ಆಗಿತ್ತು. ಆ ಸಂದರ್ಭದಲ್ಲಿ ಕೂಡ ಬಿತ್ತನೆ ಬೀಜ, ಗೊಬ್ಬರ ಯಾವುದಕ್ಕೂ ಸಮಸ್ಯೆಯಾಗದಂತೆ ನೋಡಿಕೊಳ್ಳಲಾಗಿತ್ತು. ಈ ಬಾರಿ ಕೂಡ ಸಕಲ ಸನ್ನದ್ಧವಾಗಿದ್ದು, ಮುಂಗಾರು ಮಳೆ ಉತ್ತಮವಾಗಿ ಆದರೆ ಉತ್ತಮ ಬೆಳೆ ನಿರೀಕ್ಷೆ ಮಾಡಲಾಗಿದೆ ಎಂದರು.

ರಾಜ್ಯದಲ್ಲಿ ನಿರೀಕ್ಷಿಸಿದಷ್ಟು ಪ್ರಮಾಣದಲ್ಲಿ ಮಳೆ ಆಗುತ್ತಿಲ್ಲ. ಕೆಲವೆಡೆ ಮಾತ್ರ ಮಳೆಯಾಗಿದ್ದು, ಇಡೀ ರಾಜ್ಯಕ್ಕೆ ವ್ಯಾಪಿಸಿಲ್ಲ. ಕಳೆದ ಬಾರಿ ಬರಗಾಲ ಎದುರಿಸಿದ ನಾವು ಈ ಬಾರಿಯಾದರೂ ಮುಂಗಾರು ಮಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸಬೇಕಿದೆ. ಹೀಗಾಗಿ ನಾನೂ ದೇವಸ್ಥಾನಕ್ಕೆ ಹೋಗಿ ಮಳೆಗಾಗಿ ವಿಶೇಷ ಪ್ರಾರ್ಥನೆ ಮಾಡಬೇಕೆಂದಿದ್ದೇನೆ.
– ಡಿ.ಕೆ. ಶಿವಕುಮಾರ್‌, ಉಪಮುಖ್ಯಮಂತ್ರಿ

Advertisement

Udayavani is now on Telegram. Click here to join our channel and stay updated with the latest news.

Next