ಬೆಂಗಳೂರು: ಎಲೆಕ್ಟ್ರಾನಿಕ್ ಸಿಟಿ ಸಮೀಪದ ಜಿ.ಆರ್. ಫಾರ್ಮ್ ಹೌಸ್‌ನಲ್ಲಿ ನಡೆದಿದ್ದ ರೇವ್ ಪಾರ್ಟಿ ಪ್ರಕ ರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರಿಗೆ ಆಂಧ್ರದ ರಾಜಕೀಯ ಮುಖಂಡರು ಹಾಗೂ ಕೆಲ ಸೆಲೆಬ್ರಿಟಿಗಳಿಂದ ಒತ್ತಡ ಹಾಕಲಾಗುತ್ತಿದೆ ಎಂಬ ಆರೋಪ ಕೇಳಿ ಬಂದಿದೆ.
ಮತ್ತೂಂದೆಡೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಆರೋಪಿ ಮೊಹಮ್ಮದ್ ಅಬೂಬಕ್ಕರ್ ಸಿದ್ದಿಕ್ಕಿ ಬ್ಯಾಂಕ್ ಖಾತೆಯಲ್ಲಿ 85 ಲಕ್ಷ ರೂ. ಪತ್ತೆಯಾಗಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ಪ್ರಕರಣದಲ್ಲಿ ತೆಲುಗು ನಟಿ ಹೇಮಾ ಸೇರಿ 88 ಮಂದಿ ಡ್ರಗ್ಸ್ ಸೇವನೆ ಖಚಿತವಾದ ಬೆನ್ನಲ್ಲೇ ನಟಿ ಸೇರಿ 8 ಮಂದಿಗೆ ಮೊದಲ ಹಂತದಲ್ಲಿ ಮೇ 27ರಂದು ವಿಚಾರಣೆಗೆ ಹಾಜರಾಗುವಂತೆ ಸೂಚಿಸಿ ನೋಟಿಸ್ ಕಳುಹಿಸಲಾಗಿತ್ತು. ಈ ಬೆನ್ನಲ್ಲೇ ನಟಿಯ ಬೆಂಬಲಕ್ಕೆ ನಿಂತಿರುವ ಆಂಧ್ರ ರಾಜಕಾರಣಿಗಳು ಸಿಸಿಬಿ ಅಧಿಕಾರಿಗಳಿಗೆ, ನಟಿ ಹೇಮಾ ವಿರುದ್ಧ ಯಾವುದೇ ಕ್ರಮ ಕೈಗೊಳ್ಳದಂತೆ ಒತ್ತಡ ಹಾಕುತ್ತಿದ್ದಾರೆ ಎಂದು ಹೇಳಲಾಗಿದೆ. ಮತ್ತೂಂದೆಡೆ ನಟರು ಕೂಡ ಪರೋಕ್ಷವಾಗಿ ಆಕೆಗೆ ಸಹಕಾರ ನೀಡುತ್ತಿದ್ದಾರೆ ಎಂದು ಸಿಸಿಬಿ ಮೂಲಗಳು ತಿಳಿಸಿವೆ.
ಸಿದ್ದಿಕಿ ಖಾತೆಯಲ್ಲಿ 85 ಲಕ್ಷ ರೂ!: ಮತ್ತೂಂದೆಡೆ ಸಿಸಿಬಿ ತನಿಖೆಯಲ್ಲಿ ರೇವ್ ಪಾರ್ಟಿಯ ಮತ್ತಷ್ಟು ಕರಾಳ ಮುಖ ಬಯಲಾಗುತ್ತಿದೆ. ಬಂಧಿತರ ಖಾತೆಯಲ್ಲಿನ 90 ಲಕ್ಷ ರೂ. ಜಪ್ತಿ ಮಾಡಲಾಗಿದೆ. ಈ ಪೈಕಿ ಮೊಹಮ್ಮದ್ ಅಬೂಬಕ್ಕರ್ ಸಿದ್ದಿಕಿ ಬ್ಯಾಂಕ್ ಖಾತೆಯಲ್ಲೇ 85 ಲಕ್ಷ ರೂ. ಪತ್ತೆಯಾಗಿದ್ದು, ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ.
ರೇವ್ ಪಾರ್ಟಿಯಲ್ಲಿ ಡ್ರಗ್ಸ್ ಅಲ್ಲದೆ ಕ್ರಿಕೆಟ್ ಬೆಟ್ಟಿಂಗ್ ಮತ್ತು ಸೆಕ್ಸ್ ದಂಧೆ ಕೂಡ ನಡೆಯುತ್ತಿತ್ತು. ಆಂಧ್ರ ವಿಧಾನಸಭೆ ಹಾಗೂ ಲೋಕಸಭಾ ಚುನಾವಣೆ, ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ ನಡೆಯುತ್ತಿತ್ತು ಎಂಬ ಮಾಹಿತಿ ಸಿಕ್ಕಿದೆ. ಈ ಬಗ್ಗೆಯೂ ಪೊಲೀಸರಿಂದ ತನಿಖೆ ಮುಂದುವರಿದಿದೆ.
ಈ ಮಧ್ಯೆ ಮೊಹಮ್ಮದ್ ಅಬೂಬಕ್ಕರ್ ಸಿದ್ದಿಕಿ ಮತ್ತು ನಾಗಬಾಬು ಬಳಿ ಡ್ರಗ್ಸ್ ಖರೀದಿ ಮಾಡಿರುವುದಕ್ಕೆ ಸಾಕ್ಷ್ಯ ಪತ್ತೆಯಾಗಿದೆ. ಕೆಲವು ಪೆಡ್ಲರ್ ಗಳಿಗೆ ಸಂದೇಶ ಕಳುಹಿಸಿ ಡ್ರಗ್ಸ್ ಖರೀದಿ ಮಾಡಲಾಗಿತ್ತು ಎಂಬುದು ಗೊತ್ತಾಗಿದೆ. ಎಲ್ಲಾ ಆಯಾಮಗಳಲ್ಲಿ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ಹೇಳಿದರು.